ಹಾವೇರಿ

ಟ್ರಾಫಿಕ್ ಠಾಣೆ ಅಲಭ್ಯ: ಸವಾರರ ಪರದಾಟ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಆ. 18
ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿಗೆ ಯಾವುದೇ ರೀತಿಯ ಸಂಚಾರಿ ನಿಯಮಾವಳಿಗಳು ಅನ್ವಯವಾಗುವುದಿಲ್ಲ.....
ತಾಲೂಕಿನಲ್ಲಿ ಒಮ್ಮೆ ಸಂಚರಿಸಿದಾಗ ಇಂತಹದೊಂದು ಅಘೋಷಿತ ಫರ್ಮಾನನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ನಗರಸಭೆ ಹೊರಡಿಸಿದಂತೆ ಭಾಸವಾಗದೇ ಇರಲಾರದು.
ಇದೇನಿದು ಆಶ್ಚರ್ಯ ಎಂದು ಹುಬ್ಬೇರಿಸಬೇಡಿ. ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ತಾಲೂಕಿನಲ್ಲಿ ವಾಸವಾಗಿರುವ ಜನರಿಂದ ಹಿಡಿದು ಹೊರಗಡೆಯಿಂದ ಬರುವ ವಾಹನ ಚಾಲಕರು ಇಲ್ಲಿನ ಅವ್ಯವಸ್ಥೆ ನೋಡಿ ಸಂಚಾರಿ ವ್ಯವಸ್ಥೆ ಬಗ್ಗೆ ಎಳ್ಳಷ್ಟು ತಲೆ ಕೆಡಿಸಿಕೊಳ್ಳದೆ ಮನಸ್ಸೋ ಇಚ್ಛೆ ವಾಹನ ಚಲಾಯಿಸುತ್ತಿರುವ ದೃಶ್ಯಗಳು ನಿತ್ಯ ಸಾಮಾನ್ಯವಾಗಿ ಕಂಡು ಬರುತ್ತಿವೆ.
ಟ್ರಾಫಿಕ್ ಠಾಣೆಯೇ ಇಲ್ಲ: ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಆರಂಭಿಸಬೇಕೆಂಬ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಆದರೆ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕಡತದಲ್ಲೇ ಬಾಕಿ ಉಳಿದುಕೊಂಡಿದೆ. ಜಿಲ್ಲೆಗೆ ನೂತನ ಎಸ್ಪಿಯಾಗಿ ಆಗಮಿಸಿರುವ ಎನ್. ಶಶಿಕುಮಾರ ಅವರಿಗೆ ಜಿಲ್ಲಾ ಕೇಂದ್ರದಲ್ಲಿ ಟ್ರಾಫಿಕ್ ಠಾಣೆ ಆರಂಭವಾಗಬೇಕು ಎಂಬುದರ ಅವಶ್ಯಕತೆ ಅಷ್ಟರ ಮಟ್ಟಿಗೆ ಕಂಡು ಬಂದಂತಿಲ್ಲ.
ಎಸ್ಪಿಯಾಗಿ ಅಧಿಕಾರವಹಿಸಿಕೊಂಡ ನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಜಿಲ್ಲಾ ಕೇಂದ್ರದಲ್ಲಿ ಟ್ರಾಫಿಕ್ ಠಾಣೆ ಆರಂಭವಾಗಬೇಕೆಂಬುದು ದಶಕಗಳ ಕನಸಾಗಿದೆ. ಈ ಬಗ್ಗೆ ಯಾವುದೇ ರೀತಿಯಿಂದ ಸರ್ಕಾರದ ಮನವೊಲಿಸುತ್ತೀರಿ ಎಂಬ ಮಾಧ್ಯಮದವರಿಂದ ತೂರಿ ಬಂದ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಜಿಲ್ಲಾ ಕೇಂದ್ರದಲ್ಲಿ ಟ್ರಾಫಿಕ್ ಠಾಣೆ ಬರಬೇಕು ನಿಜ. ಆದರೆ, ಸರ್ಕಾರದ ಮೇರಿಟ್‌ಲಿಸ್ಟ್‌ನಲ್ಲಿ ಹಾವೇರಿ ಜಿಲ್ಲೆ ಬಂದಾಗ ತನ್ನಿಂತಾನೆ ಠಾಣೆ ಆರಂಭವಾಗುತ್ತದೆ ಎಂದು ಉತ್ತರಿಸಿದ್ದು, ಟ್ರಾಫಿಕ್ ಠಾಣೆ ಆರಂಭಕ್ಕೆ ಸಂಬಂಧಿಸಿದಂತೆ ಅವರು ಹೊಂದಿರುವ ಭಾವನೆ ಎಂತಹದ್ದು ಎಂಬುದು ಎತ್ತಿ ತೋರಿಸಿದಂತಿತ್ತು.
ಸಂಚಾರಿ ನಿಯಮ ಗೊತ್ತೇ ಇಲ್ಲ
ಹಾವೇರಿಗರಿಗೆ ಸಂಚಾರಿ ನಿಯಮಗಳೇ ಗೊತ್ತಿಲ್ಲ. ಜಿಲ್ಲಾ ಕೇಂದ್ರದಲ್ಲಿ ವಾಹನ ಚಲಾಯಿಸುವವರು ಮನ ತೋಚಿದಂತೆ ವಾಹನ ಚಲಾಯಿಸುವುದರಿಂದ ನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಮಾತ್ರವಲ್ಲದೆ, ಇಂತಹ ಘಟನೆಗಳು ಕೆಲವೊಮ್ಮೆ ಅತಿರೇಕಕ್ಕೆ ತಿರುಗಿ ಹೊಡೆದಾಟ ನಡೆದ ಪ್ರಕರಣಗಳಿಗೂ ಕಮ್ಮಿಯಿಲ್ಲ ಎಂದು ವ್ಯಾಪಾರಸ್ಥ ವಿಜಯ ಹಿರೇಮಠ ಎಂಬುವರು ಕನ್ನಡಪ್ರಭದೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿಗರಿಲ್ಲ ಕಡ್ಡಾಯ: ಪಕ್ಕದ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೆ, ಹಾವೇರಿ ತಾಲೂಕಿನಲ್ಲಿ ಈ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಬಳಸದೇ ವಾಹನ ಚಲಾಯಿಸುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಚಾಲಕರ ವಿರುದ್ಧ ಕ್ರಮಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.
ಪಾರ್ಕಿಂಗ್ ಸ್ಥಳವೇ ಇಲ್ಲ: ತಾಲೂಕಾದ್ಯಂತ ಒಂದೇ ಒಂದು ಪ್ರದೇಶದಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರಿಂದ ಹಿಡಿದು ಕಾರ್ ಮಾಲೀಕರು ರಸ್ತೆ ಮಧ್ಯೆದಲ್ಲೇ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿರುತ್ತಾರೆ. ಇದು ವಾಹನ ಸವಾರರಿಗೆ ಮಾತ್ರವಲ್ಲದೆ ಪಾದಚಾರಿಗಳಿಗೂ ಸಾಕಷ್ಟು ಕಿರಿಕಿರಿಯನ್ನುಂಟು ಮಾಡಿದ್ದು ಸುಳ್ಳಲ್ಲ.
ಪಾರ್ಕಿಂಗ್‌ಗಾಗಿ ಕಾಯ್ದಿರಿಸಿದ ಸ್ಥಳಗಳಲ್ಲಿ ಗೂಡಂಗಡಿಗಳು ತಲೆ ಎತ್ತಿದ್ದರಿಂದ ವಾಹನಗಳ ಮಾಲೀಕರು ಅನಿವಾರ್ಯವಾಗಿ ವಾಹನಗಳನ್ನು ರಸ್ತೆ ಮೇಲೆಯೇ ನಿಲ್ಲಿಸಬೇಕಾದ ಅನಿವಾರ್ಯತೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ರೇಲ್ವೆ ಇಲಾಖೆ ನೌಕರರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಕಡತದಲ್ಲೇ...: ಹಾವೇರಿ ಬಸ್ ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆಯೇ ಕಂಡು ಬರುವ ಸಿದ್ದಪ್ಪ ಸರ್ಕಲ್ ಹುಬ್ಬಳ್ಳಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಗೆ ಸೇರುತ್ತದೆ. ಈ ಪ್ರದೇಶದ ಅಕ್ಕಪಕ್ಕದಲ್ಲಿರುವ ಪುಟ್‌ಪಾತ್‌ಗಳ ಅಕ್ಕಪಕ್ಕದಲ್ಲಿ ಒಂದು ದಿನ ಈಚೆ ಮತ್ತೊಂದು ದಿನ ಆಚೆ ವಾಹನಗಳ ನಿಲ್ಲಲ್ಲು ಅವಕಾಶ ಕಲ್ಪಿಸಿಕೊಡಲು ಪೊಲೀಸ್ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ಸರ್ವೇ ನಡೆಸಿತ್ತು.
ಅಲ್ಲದೇ, ಪಾರ್ಕಿಂಗ್ ಪ್ರದೇಶದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿದ್ದ ಗೂಡಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ದಿನ ಕಳೆದಂತೆ ಇದನ್ನು ಅನುಷ್ಠಾನಗೊಳಿಸುವಲ್ಲಿ ನಗರಸಭೆ ಬೇಜವಾಬ್ದಾರಿ ತೋರಿದ್ದರ ಹಿನ್ನೆಲೆಯಲ್ಲಿ ಇದೀಗ ಪಾರ್ಕಿಂಗ್ ಪ್ರದೇಶದಲ್ಲಿ ಮತ್ತೆ ಡಬ್ಬಾ ಅಂಗಡಿಗಳು ತಲೆ ಎತ್ತಿ ವಾಹನ ನಿಲ್ಲುಗಡೆಗೆ ತೊಂದರೆಯನ್ನುಂಟು ಮಾಡಿದೆ.
ಇದೇ ರೀತಿ ವಿವಿಧ ರೀತಿಯ ವ್ಯಾಪಾರ ಮಳಿಗೆಗಳನ್ನು ಹೊಂದಿರುವ ಎಂ.ಜಿ. ರಸ್ತೆಯಲ್ಲಿ ಸಂಜೆ ಹೊತ್ತಿನಲ್ಲಿ ವಾಹನ ಮೇಲೆ ತೆರಳುವುದೆಂದರೇ ನಿಜಕ್ಕೂ ಸರ್ಕಸ್ ಮಾಡಿದಂತೆಯೇ ಸರಿ.
ಪ್ರತಿನಿತ್ಯ ಸಂಜೆಯಾಗುತ್ತಿದಂತೆಯೇ ವಿವಿಧ ರೀತಿಯ ವಸ್ತುಗಳ ಖರೀದಿಗಾಗಿ ಜನರು ಪಾರ್ಕಿಂಗ್ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಆದರೆ, ವಾಹನ ಪಾರ್ಕ್ ಮಾಡಲು ಸ್ಥಳವೇ ಇಲ್ಲದೆ ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿರುವುದರಿಂದ ಪಾದಚಾರಿಗಳಿಗೂ ಸಾಕಷ್ಟು ಕಿರಿಕಿರಿ ಉಂಟು ಮಾಡಿದೆ. ಎಂ.ಜಿ. ರಸ್ತೆ ಅಗಲೀಕರಣಕ್ಕೆ ತೋರಿದ ಉತ್ಸಾಹವನ್ನು ನಗರಸಭೆ, ಪಾರ್ಕಿಂಗ್ ನಿರ್ಮಿಸಲು ತೋರದಿರುವುದು ಅಧಿಕಾರಿ ವರ್ಗದ ಕರ್ತವ್ಯ ಪ್ರಜ್ಞೆಗೆ ಕನ್ನಡಿ ಹಿಡಿದಂತಿದೆ.
ಜನರಲ್ಲಿ ಸಂಚಾರಿ ನಿಯಮದ ಬಗ್ಗೆ ತಿಳಿವಳಿಕೆ ಮೂಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ನಗರಸಭೆ ಹಾಗೂ ಪೊಲೀಸ್ ಇಲಾಖೆ ಈಗಲಾದರೂ ಪ್ರಾಮಾಣಿಕ ಪ್ರಯತ್ನಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.
-ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.