ಹಬ್ಬಗಳಿಂದ ಬಾಂಧವ್ಯ ಬೆಸುಗೆ: ಪ್ರೊ. ಅಂಬಳಿಕೆ
ಶಿಗ್ಗಾಂವಿ: ಮನೋವ್ಯಾಕುಲಗಳನ್ನು ದೂರಮಾಡಿ, ಪರಸ್ಪರ ಸಂಬಂಧಗಳನ್ನು ಬೆಸೆಯುವ ಹಬ್ಬಗಳಿಗೆ ಸಾಂಸ್ಕೃತಿಕವಾಗಿ ಮಹತ್ವದ ಸ್ಥಾನವಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರವು ಶಿಗ್ಗಾಂವಿಯ ಶ್ರೀ ಜಗದ್ಗುರು ರಂಭಾಪುರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ನಾಗರಪಂಚಮಿ ಹಾಡುಗಳ ಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಭಾಗವಾಗಿ ಮನುಷ್ಯ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಹಬ್ಬಗಳು ದ್ವೇಷ, ಅಸೂಯೆಗಳನ್ನು ದೂರಮಾಡಿ ಜೀವನದಲ್ಲಿ ಪ್ರೀತಿ, ಸ್ನೇಹ, ಸೌಹಾರ್ದತೆಯನ್ನು ಉಂಟುಮಾಡುತ್ತವೆ ಎಂದ ಅವರು, ಹಬ್ಬಗಳ ಆಚರಣೆಯಲ್ಲಿನ ಮೌಢ್ಯವನ್ನು ಬದಿಗೊತ್ತಿ ಅದರಲ್ಲಿನ ವೈಜ್ಞಾನಿಕವಾದ ಸಂಗತಿಗಳನ್ನು ತಿಳಿದು ಅನುಸರಿಸಬೇಕು. ಆಧುನಿಕರಣ, ಜಾಗತೀಕರಣದ ಫಲವಾಗಿ ಹಬ್ಬಗಳ ಮಹತ್ವ ಕಳೆಗುಂದುತ್ತಿದೆ. ಯುವಕರು ನಮ್ಮ ಆಚಾರ-ವಿಚಾರ, ಹಬ್ಬ-ಹರಿದಿನ, ಸಂಸ್ಕೃತಿ, ಪರಂಪರೆಯನ್ನು ಸಂರಕ್ಷಿಸಿಕೊಳ್ಳುವ ಅಗತ್ಯತೆ ಇದೆ ಎಂದರು.
ಶ್ರೀ ರಂಭಾಪುರಿ ಕಾಲೇಜು ಮಂಡಳಿ ಆಡಳಿತಾಧಿಕಾರಿ ಶ್ರೀ ವಿಶ್ವನಾಥ ಕಂಬಾಳಿಮಠ ಅವರು ಮಾತನಾಡಿ, ಉತ್ತರ ಕರ್ನಾಟಕದ ಮಹತ್ವದ ಹಬ್ಬ ನಾಗರಪಂಚಮಿಯಾಗಿದೆ. ಗಂಡನ ಮನೆಯಲ್ಲಿರುವ ಹೆಣ್ಣು ತನ್ನ ತವರು ಮನೆಗೆ ಬರುವಂತೆ ಮಾಡುವ ಭಾವನಾತ್ಮಕ ಸೆಳೆತ ನಾಗರಪಂಚಮಿಗೆ ಇದೆ ಎಂದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆಯೋಜನೆ ಮಾಡಲಿರುವ ಎಲ್ಲ ಕಾರ್ಯಕ್ರಮಗಳಿಗೆ ಆಡಳಿತ ಮಂಡಳಿ ಪೂರ್ಣ ಸಹಕಾರ ನೀಡಲಿದೆ ಎಂದರು.
ಮನುಷ್ಯ ಪ್ರಕೃತಿಯೊಂದಿಗೆ ಸಾವಯವ ಸಂಬಂಧ ಸಾಧಿಸಿಕೊಂಡು ಬದುಕಬೇಕಾದ ಅಗತ್ಯತೆಯನ್ನು ತಿಳಿಸುವ ನಾಗರಪಂಚಮಿ ಹಬ್ಬವು, ನಮ್ಮ ನಾಡಿನ ಅತ್ಯಂತ ವೈಭವದ ಹಬ್ಬ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ ಸ.ಚಿ. ರಮೇಶ ಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಕೋರ್ಸಗಳ ಸಂಯೋಜನಾಧಿಕಾರಿ ಡಾ ಶ್ರೀಶೈಲ ಹುದ್ದಾರ ಪ್ರಾಸ್ತಾವಿಕ ಮಾತನಾಡಿ, ಹಬ್ಬಗಳು ಮತೀಯ ಮಬ್ಬು ಹಿಡಿಸಲಿಕ್ಕೆ ಇಲ್ಲ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಖ್ಯವಾಗಿರುವ ಹಬ್ಬಗಳ ಆಚರಣೆಯ ಹಿಂದಿನ ತಾತ್ವಿಕತೆ ಅರ್ಥಮಾಡಿಕೊಳ್ಳುವುದು ಅಗತ್ಯವಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾ ಅಧಿಕಾರಿ
ಡಾ ಕೆ. ಪ್ರೇಮಕುಮಾರ, ಹಾವೇರಿ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಪ್ರೊ ಕೆಂಚವೀರಪ್ಪ ಇದ್ದರು. ಸಾಹಿತಿ ಸತೀಶ ಕುಲಕರ್ಣಿ, ಲೇಖಕಿ ಸಂಕಮ್ಮ ಸಂಕಣ್ಣನವರ ಸ್ಪರ್ಧೆ ನಿರ್ಣಾಯಕರಾಗಿದ್ದರು. ಸಂಜುತಾ ಲಮಾಣಿ ಪ್ರಾರ್ಥಿಸಿದರು. ವಿವಿ ಅತಿಥಿ ಪ್ರಾಧ್ಯಾಪಕ ಡಾ ರಾಮು ಮೂಲಗಿ ವಂದಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಎಂ.ಬಿ. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಯಲ್ಲಿದ್ದ ಹಾವೇರಿ ಜಿಲ್ಲೆ ವಿವಿಧ ತಾಲೂಕಿನ ಪದವಿಪೂರ್ವ ಕಾಲೇಜಿನ 39 ವಿದ್ಯಾರ್ಥಿಗಳು ಬಹುಮಾನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

