ದೇವಾಲಯ ಸೇವಕರ ಹಿತಚಿಂತನೆಗೆ ಬದ್ಧ: ಬಣಕಾರ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಆ. 19
ತಾಲೂಕಿನಲ್ಲಿ ಶಿಥಿಲಗೊಂಡಿರುವ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಶೀಘ್ರ ಕ್ರಮ ಕೈಗೊಳ್ಳುವುದರ ಜತೆಗೆ ದೇವಾಲಯಗಳ ಅರ್ಚಕರ, ಆಗಮಿಕರ ಹಾಗೂ ಪೂಜಾರರ ಹಿತ ಚಿಂತನೆಗೆ ತಾವು ಬದ್ಧ. ಸೌಲಭ್ಯ ಕಲ್ಪಿಸಲು ತಾವು ಬದ್ಧರಿರುವುದಾಗಿ ಶಾಸಕ ಯು.ಬಿ. ಬಣಕಾರ ಭರವಸೆ ನೀಡಿದರು.
ಪಟ್ಟಣದ ಶ್ರೀ ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಅರ್ಚಕರ ಹಾಗೂ ಪೂಜಾರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ತಾಲೂಕು ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಂಘಟನೆ ಮೂಲಕ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು ತಾವೆಲ್ಲರೂ ಒಗ್ಗೂಡಬೇಕು. ಅರ್ಚಕರ, ಆಗಮಿಕರ ಹಾಗೂ ಪೂಜಾರರ ಶಾಶ್ವತ ನೆಮ್ಮದಿ ಬದುಕಿಗೆ ಪರಿಹಾರ ಕಂಡುಕೊಳ್ಳಲು ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಕ್ಷೇತ್ರ ಅಭಿವೃದ್ಧಿಗೆ ಸೂಕ್ತ ಅನುದಾನ: ಸಂಘದ ಸಮಸ್ಯೆ ಅಥವಾ ಸ್ವಂತದ್ದೆ ಸಮಸ್ಯೆಗಳಿದ್ದಲ್ಲಿ ಅಂತಹ ಸಮಸ್ಯೆಗಳನ್ನು ನೇರವಾಗಿ ತಮ್ಮ ಗಮನಕ್ಕೆ ತಂದರೆ ಅಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡುವುದಾಗಿ ಹಾಗೂ ಖಾಲಿ ನಿವೇಶನ ಹೊಂದಿದ್ದಲ್ಲಿ ಅರ್ಚಕರ ಸಂಘದ ಭವನ ನಿರ್ಮಾಣಕ್ಕೆ ಶಾಸಕರ ಕ್ಷೇತ್ರ ಅಭಿವೃದ್ಧಿ ಅನುದಾನದಲ್ಲಿ ಅನುದಾನ ನೀಡುವ ಭರವಸೆ ನೀಡಿದರು.
ಬಿ.ಎಸ್. ಯಡಿಯೂರಪ್ಪ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಸಲುವಾಗಿ ಅಪಾರ ಹಣ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ಆಯಾ ದೇವಸ್ಥಾನಗಳಲ್ಲಿ ಪೂಜಾರಿಕೆ ಸೇವೆ ಸಲ್ಲಿಸುತ್ತಿರುವ ಪೂಜಾರರು ಹಾಗೂ ಅರ್ಚಕರಿಗೆ ತಸ್ತಿಕ ಹಣ ನೀಡಿದ್ದಾರೆ. ಅಲ್ಲದೆ ಮುಜರಾಯಿ ಇಲಾಖೆ ಮೂಲಕ ರಾಜ್ಯದಲ್ಲಿ ಈಗಾಗಲೆ ಶಿಥಿಲಗೊಂಡು ಪುರಾತನ ದೇವಸ್ಥಾನಗಳ ಸಂರಕ್ಷಣೆಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ ಎಂದರು.
ಅನುದಾನ ಬಿಡುಗಡೆಗೆ ಪ್ರಯತ್ನ: ಹಿರಿಯ ನ್ಯಾಯವಾದಿ ಎಸ್.ಆರ್. ಅಂಗಡಿ ಮಾತನಾಡಿ, ಮುಜರಾಯಿ ವ್ಯಾಪ್ತಿಗೆ ಬರತಕ್ಕ 211 ದೇವಸ್ಥಾನಗಳ ಪೈಕಿ 86 ದೇವಸ್ಥಾನಗಳು ತಸ್ತಿಕ ಪಡೆಯುತ್ತಿವೆ. 98 ದೇವಸ್ಥಾನಗಳು ವರ್ಷಾಸನ ಪಡೆಯುತ್ತಿವೆ. ಇನ್ನೂ ಹಲವಾರು ದೇವಸ್ಥಾನಗಳಿಗೆ ತಸ್ತಿಕ್ ಮಂಜೂರಾತಿ ಇಲ್ಲದೆ ಇರುವುದು ಖೇದದ ವಿಷಯವಾಗಿದೆ. 98 ದೇವಸ್ಥಾನಗಳಿಗೆ ವರ್ಷಾಸನದ ಬದಲು ವರ್ಷಕ್ಕೆ ರು. 12 ಸಾವಿರ ಇರುವುದನ್ನು ರು. 24 ಸಾವಿರ ಮಂಜೂರು ಮಾಡಿಸಲು ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪರಮೇಶ್ವರಪ್ಪ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಬಸಮ್ಮ ಅಬಲೂರ, ಕರಬಸಯ್ಯ ಮಠದ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ಸಂಘದ ಉಪಾಧ್ಯಕ್ಷ ವೀರೂಪಾಕ್ಷಪ್ಪ ಪೂಜಾರ, ಗಿರೀಶ ಬಾರ್ಕಿ, ಶಾಂತವೀರಯ್ಯ ಕೊಟ್ನಿಕಲ್ಮಠ, ಚಂದ್ರಪ್ಪ ಪೂಜಾರ, ಸದಾಶಿವಯ್ಯ ಜಡೇಮಠ, ಷಣ್ಮುಖಪ್ಪ ಪೂಜಾರ, ಸೋಮಪ್ಪ ಪೂಜಾರ, ಗದಿಗೆಪ್ಪ ಕುಶಲದ, ರವೀಂದ್ರ ಪಾಟೀಲ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಅರ್ಚಕರು, ಆಗಮಿಕರು ಹಾಗೂ ಪೂಜಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಅಕ್ಷತಾ ಹಿರೇಮಠ ಪ್ರಾರ್ಥಿಸಿದರು. ವಿಜಯ್ ಪೂಜಾರ ಸ್ವಾಗತಿಸಿದರು. ಎಸ್.ಆರ್. ಪಿಳಿಗಿಮಠ ನಿರೂಪಿಸಿದರು. ಕರಬಸಪ್ಪ ಅಂಗಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

