ಸುದ್ದಿ ಸಂಕ್ಷೇಪ
ಕೀಳರಿಮೆಯಿಂದ ಪ್ರಗತಿ ಕುಂಠಿತ : ಅಂಬಿಗೇರ
ಹಾವೇರಿ: ಯುವಕರಲ್ಲಿ ಕೀಳರಿಮೆ ಇರಬಾರದು, ಕೀಳರಿಮೆ ಇದ್ದರೆ ಯುವಜನತೆಯ ಪ್ರಗತಿ ಕುಂಠಿತವಾಗುತ್ತದೆ ಎಂದು ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು. ನಗರದ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಹಾವೇರಿ ಬಸವಕೇಂದ್ರ ಆಯೋಜಿಸಿದ್ದ ಸಾಂಸ್ಕೃತಿಕ ಶ್ರಾವಣ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ನಿಸರ್ಗವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ್ದು, ಆ ಅವಕಾಶಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಬೆಳೆಯಬೇಕು ಎಂದ ಅವರು, ಯುವಕರಿಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಬೇಕು ಮತ್ತು ತಾವು ನಿರ್ವಹಿಸುವ ಕೆಲಸಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದರು. ಆರಂಭದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮತ್ತು ಸಾನ್ನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮಿಗಳು ಆಶೀರ್ವವಚನ ನೀಡಿ, ಯುವಕರ ಭವಿಷ್ಯ ಅವರ ಕೈಯಲ್ಲಿಯೆ ಇರುತ್ತದೆ. ಅವರು ತಮ್ಮ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕೆಂದರು. ಪ್ರಪಂಚವೇ ಒಂದು ಗರಡಿಮನೆ ಇಲ್ಲಿ ನಾವೆಲ್ಲ ಮಾನಸಿಕ ಮತ್ತು ದೈಹಿಕವಾಗಿ ಸದಾ ಪರಿಶ್ರಮಿಸಬೇಕೆಂದರು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮೆಲ್ಲರ ಸರ್ವಾಂಗೀಣ ಪ್ರಗತಿಗೆ ಸಹಕಾರಿಯಾಗುತ್ತವೆ ಎಂದರು. ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಕಲಾವಿದರಾದ, ಕೆ.ಆರ್. ಹಿರೇಮಠ, ಶಿಕ್ಷಕ ಎಫ್.ಬಿ. ಮರಡೂರ, ಬಸವಕಿರಣ ಸ್ವಾಮೀಜಿ ಚಲುವಸ್ವಾಮಿ ಮಠ ಚಳ್ಳಕೆರೆ ಪಾಲ್ಗೊಂಡಿದ್ದರು. ಹಾವೇರಿಯ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಬಳಗದವರು, ವಿಶ್ವಕಲಾ ಡ್ಯಾನ್ಸ್ ಗ್ರೂಪ್ ಎಂ. ಜಾಕ್ಸನ್ ಡ್ಯಾನ್ಸ್ ಗ್ರೂಪ್ನ ವಿದ್ಯಾರ್ಥಿಗಳು ಅತ್ಯಂತ ಮನಮೋಹಕ ಕಾರ್ಯಕ್ರಮಗಳನ್ನು ನೀಡಿದರು. ಸ್ಫೂರ್ತಿ ಈಟಿ, ಯಳಂಬ್ಲಿಮಠ ನಿರೂಪಿಸಿದರು. ಶಿಕ್ಷಕರಾದ ಎ.ಎಚ್. ಕಬ್ಬಿಣಕಂತಿಮಠ ಹಾಗೂ ನಾಗರಾಜ ನಡುವಿನಮಠ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ವಿದ್ಯುತ್ ವ್ಯತ್ಯಯ
ಹಾವೇರಿ: ಸವಣೂರ 110/33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆ. 22ರಂದು ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಈ ಕೇಂದ್ರದಿಂದ ಹೊರ ಹೋಗುವ 33 ಕೆ.ವಿ. ಶಿಗ್ಗಾಂವಿ, 33 ಕೆ.ವಿ. ಹತ್ತಿಮತ್ತೂರ, 33 ಕೆ.ವಿ. ಹುಲಗೂರ ಮತ್ತು 33 ಕೆ.ವಿ. ಬಂಕಾಪುರ ಸ್ಟೇಶನ್ಗಳಿಗೆ ಮತ್ತು 33 ಕೆ.ವಿ. ಲಕ್ಷ್ಮೇಶ್ವರ ಸ್ಪಿನ್ನಿಂಗ್ ಮಿಲ್ ಹಾಗೂ ಸದರಿ ಸ್ಟೇಶನ್ಗಳಿಂದ ಹೊರ ಹೋಗುವ ಎಲ್ಲ 11 ಕೆ.ವಿ. ಫೀಡರ್ಗಳಿಗೆ ಅಂದು ಮಧ್ಯಾಹ್ನ 12ರಿಂದ 3 ಗಂಟೆ ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಹಾಗೂ ಸದರಿ ಫೀಡರ್ಗಳ ವ್ಯಾಪ್ತಿಗೆ ಬರುವ ಎಲ್ಲ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂನ ಹಾವೇರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಓ.ಎಸ್. ಶಶಿಧರ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

