ಹಾವೇರಿ

ಸುರಕ್ಷತಾ ನಿಯಮ ಪಾಲಿಸಿ: ರೈತರಿಗೆ ಸಲಹೆ

Published On :

ಹಾವೇರಿ: ರೈತರು ಹೈಬ್ರಿಡ್ ಬೀಜೋತ್ಪಾದನೆ ಹಾಗೂ ರಫ್ತಿಗೆ ಹೆಸರಾಗಿರುವ ಹಾವೇರಿ ಜಿಲ್ಲೆಯ ರೈತರು ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಗೆ ಕೆಲವು ಕ್ರಮಗಳನ್ನು ಪಾಲಿಸಬೇಕು ಎಂದು ತೋಟಗಾರಿಕೆ ಹಾರ್ಟಿ ಕ್ಲಿನಿಕ್ ಮಾಹಿತಿ ಮತ್ತು ಸಲಹಾ ಕೇಂದ್ರದ ವಿಷಯ ತಜ್ಞರು ಸಲಹೆ ಮಾಡಿದ್ದಾರೆ. ಹೊಲಗಳಲ್ಲಿ ಕೆಲಸ ಮಾಡುವಾಗ ಬಹುತೇಕ ರೈತರು ಸುರಕ್ಷತಾ ಕ್ರಮ ಅನುಸರಿಸುವುದಿಲ್ಲ. ರೈತರಿಗೆ ಸುರಕ್ಷತೆ ಬಗ್ಗೆ ತಿಳಿವಳಿಕೆ ಹಾಗೂ ತರಬೇತಿ ಇಲ್ಲದಿರುವುದು, ಸುರಕ್ಷತಾ ನಿಯಮ ಸರಿಯಾಗಿ ಪಾಲಿಸದೇ ಇರುವುದು ಹಾಗೂ ಬಾಲಕಾರ್ಮಿಕ ಪದ್ಧತಿ ಕೃಷಿ ಚಟುವಟಿಕೆಯಲ್ಲಿ ಜೀವಂತ ಇರುವುದರಿಂದ ರೈತರು ಅನಾಹುತಗಳಿಗೆ ಗುರಿಯಾಗುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಕೀಟನಾಶಕ ಖರೀದಿಸುವ ಮುನ್ನ ತಜ್ಞರಿಂದ ಸಲಹೆ ಪಡೆಯಬೇಕು. ಅಧಿಕೃತ ಮಾರಾಟಗಾರರಿಂದ ರಶೀದಿ ಪಡೆಯಬೇಕು. ಕೀಟನಾಶಕದ ಪೊಟ್ಟಣದ ಮೇಲೆ ನಮೂದಿಸಿದ ಪ್ರಮಾಣದಲ್ಲಿ ಸಿಂಪರಣೆ ಕೈಗೊಳ್ಳಬೇಕು. ಮಕ್ಕಳ ಕೈಗೆ ಸಿಗದಂತೆ ಕೀಟನಾಶಕ ದೂರವಿಡಬೇಕು. ನಾಜಲ್‌ನ್ನು ಬಾಯಿಯಿಂದ ಊದಿ ಸ್ವಚ್ಛಗೊಳಿಸಬಾರದು. ಸಿಂಪಡಣೆ ವೇಳೆ ಅಗತ್ಯ ರಕ್ಷಣಾ ಕವಚ (ಕೈಗವಸು ಇತ್ಯಾದಿ) ಧರಿಸಬೇಕು. ಗಾಳಿಗೆ ಎದುರಾಗಿ ಸಿಂಪರಣೆ ಮಾಡಬಾರದು. ಈ ವೇಳೆ ಆಹಾರ ಅಥವಾ ನೀರು ಸೇವಿಸಬಾರದು. ಸಿಂಪರಣೆ ಬಳಿಕ ಸಾಬೂನಿನಿಂದ ಬಟ್ಟೆ, ಮೈ-ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಸಿಂಪಡಣೆ ವೇಳೆ ಅಸ್ವಸ್ಥರಾದರೆ, ವೈದ್ಯರಿಂದ ಚಕಿತ್ಸೆ ಪಡೆಯಬೇಕು. ಕೀಟನಾಶಕದ ಖಾಲಿ ಡಬ್ಬಿ ಮತ್ತು ಪೊಟ್ಟಣಗಳನ್ನು ನಾಶಪಡಿಸಿ, ಮಣ್ಣಿನಲ್ಲಿ ಹೂಳಬೇಕು.
ವಿದ್ಯುತ್ ತಂತಿಗಳನ್ನು ತೆರೆದು ಬಿಡಬಾರದು. ಇದರಿಂದ ಮನುಷ್ಯರು ಹಾಗೂ ಜಾನುವಾರುಗಳಿಗೆ ವಿದ್ಯುತ್ ಶಾಕ್‌ನಿಂದ ಆಗುವ ಅನಾಹುತ ತಪ್ಪಿಸಬಹುದು. ಹೊಲಗಳ ಬದುಗಳನ್ನು ಸ್ವಚ್ಛವಾಗಿಟ್ಟರೆ ವಿಷಜಂತುಗಳಿಂದ ಆಗುವ ಪ್ರಾಣಹಾನಿ ತಪ್ಪಿಸಬಹುದು.
ಸಮಯ, ಶ್ರಮ ಹಾಗೂ ಹಣ ಉಳಿಸಿ ಹೆಚ್ಚು ಇಳುವರಿ ಪಡೆಯಲು ಯಂತ್ರೋಪಕರಣಗಳಿಗೆ ರೈತರು ಮೊರೆಹೋಗಿದ್ದಾರೆ. ಕೂಲಿ ಕಾರ್ಮಿಕರ ಸಮಸ್ಯೆ ನಿವಾರಣೆಯೂ ಸಾಧ್ಯವಾಗಿದೆ. ಯಂತ್ರೋಪಕರಣ ಬಳಸುವಾಗಲೂ ಎಚ್ಚರಿಕೆ ಇರಬೇಕು. ಟ್ರ್ಯಾಕ್ಟರ್ ಚಾಲಕ ಪರವಾನಿಗೆ ಪತ್ರ ಹೊಂದಿರಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಉಪಯೋಗಿಸಬಾರದು. ಟ್ರ್ಯಾಕ್ಟರ್‌ಗಳಲ್ಲಿ ನಿಗದಿಗಿಂತ ಹೆಚ್ಚಿನ ಭಾರ ಹೇರಬಾರದುಯ ಟ್ರ್ಯಾಕ್ಟರ್ ಗಾಲಿಗಳ ಗಾಳಿ, ಬ್ರೇಕ್ ನಿತ್ಯ ಪರಿಶೀಲಿಸಬೇಕು. ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಕಡ್ಡಾಯ ಧರಿಸಿರಬೇಕು. ವಾಹನಗಳಲ್ಲಿ ಕಡ್ಡಾಯವಾಗಿ ಪ್ರಥಮ ಚಿಕಿತ್ಸೆ ಸಾಮಗ್ರಿ ಹೊಂದಿರಬೇಕು. ವಾಹನಗಳಿಗೆ ಸಂಬಂಧಿಸಿದ ಎಲ್ಲ ಕಾಗದ-ಪತ್ರಗಳೂ ಜತೆಯಲ್ಲಿರಬೇಕು ಎಂದು ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.