ಸ್ವ-ಸಹಾಯ ಸಂಘಗಳು ಯಶಸ್ವಿ ಕಾರ್ಯನಿರ್ವಹಣೆ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 23
ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 14,419 ಸ್ವ-ಸಹಾಯ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ವಸಂತ ಸಾಲಿಯಾನ ಹೇಳಿದರು.
ನಾಲ್ಕು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 836 ಪ್ರಗತಿ ಬಂಧು ಸಂಘಗಳನ್ನು ರಚಿಸಿ 7679 ಕೃಷಿಕರನ್ನು ಸಂಘಟಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳ ಬಗ್ಗೆ ಸಾಲಿಯಾನ ನೀಡಿರುವ ವಿವರ ಈ ಕೆಳಗಿನಂತಿವೆ.
ಬಡ ವರ್ಗದ ಮಹಿಳೆಯರಿಗಾಗಿ 13,582 ಸ್ವ-ಸಹಾಯ ಸಂಘ ರಚಿಸಿ 1,56,653 ಮಹಿಳೆಯರಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಪರಿವರ್ತನೆಯೊಂದಿಗೆ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಪ್ರೇರಣೆ ನೀಡಲಾಗಿದೆ. ಜಿಲ್ಲೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಇದುವರೆಗೆ 4457 ಕೃಷಿ ಹಾಗೂ ಕೃಷಿ ಪೂರಕ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಒಟ್ಟು 1,64,332 ಸದಸ್ಯರು ಪಾಲ್ಗೊಂಡು ರು. 3591.24 ಲಕ್ಷ ಉಳಿತಾಯ ಹಾಗೂ ಬ್ಯಾಂಕ್ ಸಹಭಾಗಿತ್ವದೊಂದಿಗೆ ರು. 318.33 ಕೋಟಿ ವ್ಯವಹಾರ ನಡೆಸಲಾಗಿದೆ ಎಂದು ತಿಳಿಸಿದರು.
14,805 ಕುಟುಂಬಗಳಲ್ಲಿ ಮನೆ ನಿರ್ಮಾಣ ಹಾಗೂ ದುರಸ್ತಿ ಕಾರ್ಯಕ್ರಮ 25,131 ಕುಟುಂಬಗಳಲ್ಲಿ ಶೌಚಾಲಯ ರಚನೆ, 299 ಕುಟುಂಬಗಳಲ್ಲಿ ಗೋಬರ್ ಗ್ಯಾಸ್ ಘಟಕ, 3808 ಕುಟುಂಬಗಳಲ್ಲಿ ಶಿಕ್ಷಣ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ. ಬತ್ತ ಕೃಷಿ ಉಳಿಸಿ ಬೆಳೆಸಲು ಹಾಗೂ ರೈತರಿಗೆ ಶ್ರೀ ಪದ್ದತಿ ಪ್ರಚಾರಪಡಿಸಲು ಶ್ರೀ ಪದ್ಧತಿ ಬತ್ತ ಬೇಸಾಯ ಪದ್ಧತಿಯನ್ನು ನಬಾರ್ಡ್ ಸಂಸ್ಥೆ ಸಹಯೋಗದೊಂದಿಗೆ ಅನುಷ್ಠಾನಗೊಳಿಸಿದೆ ಎಂದರು.
ಶ್ರೀ ಪದ್ಧತಿ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಒಟ್ಟು 5829 ರೈತರಿಗೆ ಒಟ್ಟು 522 ತರಬೇತಿಯನ್ನು 4508 ಎಕರೆ ಪ್ರದೇಶದಲ್ಲಿ ಶ್ರೀ ಪದ್ಧತಿ ಬತ್ತ ಬೇಸಾಯ ಅನುಷ್ಠಾನಗೊಳಿಸಲಾಗಿದೆ ಎಂದರು.
ನೀರು ನೈರ್ಮಲ್ಯ ಯೋಜನೆಯಡಿ ಜಿಲ್ಲೆಯ ಹಾವೇರಿ, ರಾಣಿಬೆನ್ನೂರು, ಶಿಗ್ಗಾಂವಿ ತಾಲೂಕುಗಳ 99 ಗ್ರಾಮಗಳಲ್ಲಿ ಗ್ರಾಮಮಟ್ಟದ ಕಾರ್ಯಕ್ರಮಗಳು, ಗ್ರಾಮೀಣ ಮಹಿಳೆಯರಿಗಾಗಿ ಸ್ವ-ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಜಿಲ್ಲೆಯಲ್ಲಿ 3 ಸಿದ್ದ ಉಡುಪು ಘಟಕ ತೆರೆದಿದ್ದು, ಒಟ್ಟು 75 ಮಹಿಳೆಯರು ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದರು.
ಮಹಿಳೆಯರಲ್ಲಿ ಆತ್ಮವಿಶ್ವಾಸ, ಮಾನಸಿಕ ಸ್ಥೈರ್ಯ, ಕುಟುಂಬ ನಿರ್ವಹಣೆಯ ಜಾಣ್ಮೆ, ಹಣಕಾಸು ವ್ಯವಹಾರ ಜ್ಞಾನ, ಮಕ್ಕಳ ಪಾಲನೆ, ಪೌಷ್ಟಿಕ ಆಹಾರ, ಪರಿಸರ ನೈರ್ಮಲ್ಯ, ವೈಯಕ್ತಿಕ ಶುಚಿತ್ವ, ಉತ್ಪಾದಕತೆಯಲ್ಲಿ ಹೆಚ್ಚಳ ಇವೇ ಮುಂತಾದ ಗುರಿಗಳನ್ನಿರಿಸಿಕೊಂಡು ಜಿಲ್ಲೆಯಲ್ಲಿ ಒಟ್ಟು 2,674 ಕಾರ್ಯಕ್ರಮ ಹಾಗೂ ಮಾಹಿತಿ ಶಿಬಿರಗಳನ್ನು ನಡೆಸಲಾಗಿದೆ. ಜನಸಾಮಾನ್ಯರಿಗೆ ಉಳಿತಾಯದೊಂದಿಗೆ ಜೀವನಕ್ಕೆ ಉಪಯೋಗವಾಗುವಂತಹ ಎಲ್ಐಸಿ ಸಹಭಾಗಿತ್ವದಲ್ಲಿ ಜೀವನ ಮಧುರ ಕಾರ್ಯಕ್ರಮವನ್ನು 16,305 ಕುಟುಂಬಗಳಲ್ಲಿ ಅಳವಡಿಕೆ ಮಾಡಲಾಗಿದೆ. ಹಾವೇರಿ ಜಿಲ್ಲಾ ಜನಜಾಗೃತಿ ವೇದಿಕೆ ರಚನೆ ಮಾಡಲಾಗಿದೆ. ಜಿಲ್ಲೆಯ ಕುಟುಂಬಗಳು ದುಶ್ಚಟ ಮುಕ್ತವಾಗಿ ನೆಮ್ಮದಿ ಕಂಡುಕೊಳ್ಳಬೇಕೆಂಬ ದೃಷ್ಟಿಕೋನದಿಂದ ಆರಂಭಗೊಂಡ ಜನಜಾಗೃತಿ ಕಾರ್ಯಕ್ರಮವು ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ವಿಶೇಷವಾಗಿ ಬೆಳೆಯುವ ಮಕ್ಕಳನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ದುಶ್ಚಟಗಳ ಕೆಟ್ಟ ಪರಿಣಾಮದ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ವಸಂತ ಸಾಲಿಯಾನ ವಿವರಿಸಿದರು.
ಜಿಲ್ಲಾ ವಾರ್ತಾಧಿಕಾರಿ ಎಂ. ಜುಂಜಣ್ಣ, ಸಂಸ್ಥೆಯ ಅಧಿಕಾರಿಗಳಾದ ಗಣೇಶ ಮರಾಠೆ, ಬಾಬು ನಾಯಕ, ಗಣಪತಿ ಮಾಳಂಜೆ, ಕೃಷ್ಣಪ್ಪ ಕುಲಾಕ, ಸದಾನಂದ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

