ಏಕಪಕ್ಷೀಯ ನಿರ್ಧಾರಕ್ಕೆ ರೈತರ ಆಕ್ರೋಶ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 28
ಇಲ್ಲಿನ ಸಂಗೂರು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಏಕಪಕ್ಷೀವಾಗಿ ಒಡಂಬಡಿಕೆ ಪತ್ರ ತಯಾರಿಸುತ್ತಿದೆ ಎಂದು ರೈತ ಮುಖಂಡರು ದೂರಿದ್ದಾರೆ.
ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಕಬ್ಬಿನ ದರ ಬೆಲೆ ನಿಗದಿ ಸೇರಿದಂತೆ ಮತ್ತಿತರ ಬೇಡಿಕೆಗಳ ಕುರಿತಂತೆ ಚರ್ಚಿಸಲು ಕಬ್ಬು ಬೆಳೆಗಾರರ ಸಂಘ, ಕಾರ್ಖಾನೆ ಆವರಣದಲ್ಲಿರುವ ರೈತ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ರೀತಿಯ ಅಭಿಪ್ರಾಯವನ್ನು ರೈತರು ವ್ಯಕ್ತಪಡಿಸಿದರು.
ಸಂಗೂರು ಸಕ್ಕರೆ ಕಾರ್ಖಾನೆಯವರು ಏಕಪಕ್ಷೀಯವಾಗಿ ರೈತರೊಂದಿಗೆ ಒಡಂಬಡಿಕೆ ಪತ್ರವನ್ನು ತಯಾರಿಸುತ್ತಿದ್ದು, ಇದನ್ನು ರೈತರು ತಿರಸ್ಕರಿಸಬೇಕು. ಅಲ್ಲದೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಕರೆದು ಹೊಸ ಕರಾರು ಪತ್ರ ತಯಾರಿಸಬೇಕೆಂದು ಆಗ್ರಹಿಸಲಾಯಿತು. ಕಾರ್ಖಾನೆಯವರು ಹಾಗೂ ರೈತರು ಇಬ್ಬರು ಸೇರಿ ಸಭೆ ನಡೆಸಿ ಕರಾರು ಪತ್ರ ತಯಾರಿಸಬೇಕು. ಆದರೆ, ಕಾರ್ಖಾನೆಯವರು ತಯಾರಿಸಿರುವ ಏಕಪಕ್ಷೀಯ ಕರಾರು ಪತ್ರಕ್ಕೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡುವುದಿಲ್ಲ. ರೈತರು ಇದನ್ನು ತಿರಸ್ಕರಿಸಬೇಕೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರರ ಸಂಘದ ಗೌರವಾಧ್ಯಕ್ಷ ಶಿವಾನಂದ ಗುರುಮಠ ವಿನಂತಿಸಿಕೊಂಡರು.
ಸಮಿತಿ: ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಒಂಬತ್ತು ಜನರ ಹೋರಾಟ ಸಮಿತಿ ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಒಂದು ಟನ್ ಕಬ್ಬು ಬೆಳೆಯಲು ರೈತರಿಗೆ ರು. 2,850 ವೆಚ್ಚ ತಗಲುತ್ತದೆ. ಕಾರ್ಖಾನೆಯವರಿಗೆ ಒಂದು ಟನ್ ಕಬ್ಬಿನಿಂದ ರು. 4,100 ಲಭಿಸುತ್ತದೆ. ಹೀಗಾಗಿ ಕಬ್ಬಿಗೆ ಕನಿಷ್ಠ ರು. 3,500 ನೀಡಬೇಕು. ಐದು ವರ್ಷಗಳ ಹಿಂದೆ ಹೆಚ್ಚುವರಿಯಾಗಿ ಟನ್ಗೆ ರು. 160 ನೀಡಲು ಸರ್ಕಾರ ಸೂಚಿಸಿತ್ತು. ಅದರ ಮೊತ್ತ ರು. 1.70 ಕೋಟಿಗಳಾಗಿದ್ದು ಆ ಬಾಕಿ ಹಣವನ್ನು ಸಹ ಕೂಡಲೇ ರೈತರಿಗೆ ವಿತರಿಸಬೇಕು. ಕಳೆದ ಆರು ವರ್ಷಗಳಿಂದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ರಚನೆ ಮಾಡಿಲ್ಲ. ಕಾರಣ ಈಗಲಾದರೂ ತಕ್ಷಣ ಆಡಳಿತ ಮಂಡಳಿ ರಚನೆ ಮಾಡುವಂತೆ ರೈತ ಹೋರಾಟ ಸಮಿತಿ ಸದಸ್ಯರು, ರೈತರು ಸೂಚಿಸಿದರು.
ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಜಶೇಖರ ಬೆಟಗೇರಿ, ನಿಂಗಪ್ಪ ಪೂಜಾರ, ಬಸವಣ್ಣೆಪ್ಪ ಬೆಂಚಿಹಳ್ಳಿ, ಬಸವರಾಜ ಹಾದಿ, ಜಿ.ಎಸ್. ಗಂಟೇರ, ಸುರೇಶಗೌಡ ಪಾಟೀಲ, ಮಲ್ಲೇಶಪ್ಪ ಬಿಜಾಪುರ, ರಾಜಪ್ಪ ಚೌಟಿ, ಎಸ್.ಎಂ. ಪಾಟೀಲ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

