ಸಾರಿಗೆ ಸಂಸ್ಥೆ ಬಸ್ಗೆ ಆಗ್ರಹಿಸಿ ಹೆದ್ದಾರಿ ತಡೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಆ. 29
ತಾಲೂಕು ಕೇಂದ್ರ ಸ್ಥಾನವಾದ ರಾಣಿಬೆನ್ನೂರು ನಗರ ಬಸ್ ನಿಲ್ದಾಣದಿಂದ ಊರ ಹೊರಗಿರುವ ಆರ್ಟಿಇಎಸ್ ವಿಜ್ಞಾನ ಕಾಲೇಜು ಮತ್ತು ಎಸ್ಟಿಜೆಐ ಎಂಜಿನಿಯರಿಂಗ್ ಕಾಲೇಜವರೆಗೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಿನಕ್ಕೆರಡು ಬಾರಿ 2 ಬಸ್ ಬಿಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಗುರುವಾರ ಕಾಲೇಜಿನ ಎದುರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ನಗರದ ಕೇಂದ್ರ ಬಸ್ ನಿಲ್ದಾಣದಿಂದ ಸುಮಾರು 3 ಕಿ.ಮೀ. ಅಂತರದಲ್ಲಿರುವ ಆರ್ಟಿಇಎಸ್ ವಿಜ್ಞಾನ ಕಾಲೇಜು, ಎಸ್ಟಿಜೆಐ ಎಂಜಿನಿಯರಿಂಗ್ ಕಾಲೇಜು, ರೋಟರಿ ಕಾಲೇಜು, ಓಂ ಪಬ್ಲಿಕ್ ವಿಜ್ಞಾನ ಕಾಲೇಜ ವಿದ್ಯಾರ್ಥಿಗಳು ಒಂದಾಗಿ ಮಾಗೋಡ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಚರಿಸುವ ಸಾರಿಗೆ ಸಂಸ್ಥೆ ಬಸ್ಗಳನ್ನು ತಡೆದು ಪ್ರತಿಭಟಿಸಿದರು.
ತ್ರೀವ್ರ ತೊಂದರೆ: ಪ್ರತಿಭಟನೆ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಸಂಘದ ಮುಖಂಡ ಆನಂದ ದೇಶಿ ಮಾತನಾಡಿ, ನಗರದ ಕೇಂದ್ರ ಬಸ್ ನಿಲ್ದಾಣದಿಂದ ದೂರದಲ್ಲಿರುವ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜು ಹಾಗೂ ವಿವಿಧ ಶಾಲೆಗಳಿಗೆ ನಿತ್ಯ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ತಮ್ಮ ಊರುಗಳಿಂದ ಬಸ್ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿಗಳು ಕಾಲೇಜನ್ನು ತಲುಪಲು ನಿಲ್ದಾಣದಿಂದ ಮತ್ತೊಂದು ಬಸ್ ಹತ್ತಿ ಕಾಲೇಜು ಮುಟ್ಟುವುದರೊಳಗಾಗಿ ಕಾಲೇಜಿನ ಅವಧಿ ಮುಗಿದಿರುತ್ತದೆ ಎಂದರು.
ಕನಿಷ್ಠ ಎರಡು ಬಾರಿ ಬಸ್ ಓಡಿಸಿ: ಜಿಲ್ಲೆಯಲ್ಲಿಯೇ ದೊಡ್ಡ ತಾಲೂಕೆಂಬ ಖ್ಯಾತಿ ಪಡೆದಿರುವ ರಾಣಿಬೆನ್ನೂರು ತಾಲೂಕಿನ ನೂರಾರು ಗ್ರಾಮಗಳಿಂದ ಹಾಗೂ ಅಕ್ಕಪಕ್ಕದ ತಾಲೂಕುಗಳಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದು, ಅವರೆಲ್ಲ ನಿತ್ಯ ನಿಲ್ದಾಣದಿಂದ ಕಾಲೇಜು ತಲುಪಲು ವಿಪರೀತ ತೊಂದರೆ ಅನುಭವಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಕಾಲೇಜಿನ ತರಗತಿಗಳಿಗೆ ಹಾಜರಾಗದೆ ಬೇಸರವನ್ನುಂಟು ಮಾಡಿಕೊಂಡಿರುವ ವಿದ್ಯಾರ್ಥಿಗಳೆಲ್ಲ ಒಂದಾಗಿ ಪ್ರತಿಭಟಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಇನ್ನು ಮುಂದಾದರು ದಿನಕ್ಕೆ 2 ಬಾರಿ ಕನಿಷ್ಠ 2 ಬಸ್ಗಳನ್ನಾದರೂ ನಿಲ್ದಾಣದಿಂದ ಕಾಲೇಜುವರೆಗೆ ಓಡಿಸಬೇಕೆಂದು ಆನಂದ ದೇಶಿ ಆಗ್ರಹಿಸಿದರು.
10 ದಿನದಲ್ಲಿ ಸಮಸ್ಯೆ ಪರಿಹಾರ: ಕಾಲೇಜಿನ ಎದುರು ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಚರಿಸುತ್ತಿರುವ ಬಸ್ಗಳನ್ನು ತಡೆದು ಪ್ರತಿಭಟಿಸುತ್ತಿರುವ ಸುದ್ದಿ ತಿಳಿದು ಸ್ಧಳಕ್ಕಾಗಮಿಸಿದ ಡಿಪೋ ವ್ಯವಸ್ಥಾಪಕ ಮೂರನಾಳ ಮಾತನಾಡಿ, 10 ದಿನದೊಳಗೆ ಸಮಸ್ಯೆಗೆ ಪೂರ್ಣ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡರಾದ ಅಶೋಕ ನಾಯ್ಕ, ಮೇಹಬೂಬಿ ದೊಡ್ಮನಿ, ಎಚ್.ಆರ್. ಚೈತ್ರಾ, ಎಚ್. ಸೃಷ್ಟಿ, ಬಸವರಾಜ, ತೇಜೇಶ, ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

