ಹಾವೇರಿ

ಪ್ರಾಥಮಿಕ ಹಂತದಲ್ಲೇ ಜಾನಪದ ಶಿಕ್ಷಣ ಪ್ರಯೋಗ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 1
ಜಾನಪದ ಎಂಬುದು ಗ್ರಾಮೀಣರಿಗೆ, ಕನ್ನಡ ಶಾಲೆ ಪ್ರಾರಂಭಿಸುವುದು ಲಾಭವಿಲ್ಲದ್ದು ಎಂಬ ಮಾತನ್ನು ಸುಳ್ಳಾಗಿಸುವ ಮೂಲಕ ಜಾನಪದವನ್ನು ವಿಶ್ವ ಮಟ್ಟಕ್ಕೆ ಪರಿಚಯಿಸುವ ಹಾಗೂ ಪಸರಿಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಶಿಕ್ಷಣ ಸಂಸ್ಥೆಯೊಂದು ಹುಟ್ಟಿಕೊಳ್ಳುತ್ತಿದೆ. ಪ್ರಾಥಮಿಕ ಹಂತದಿಂದಲೇ ಜಾನಪದ ಶಿಕ್ಷಣ ನೀಡುವ ವಿನೂತನ ಪ್ರಯೋಗ ಇಲ್ಲಿ ಆರಂಭವಾಗಲಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಪರಿಸರವನ್ನು ಕಲಾಕೃತಿಗಳ ಮೂಲಕ ಕಟ್ಟಿಕೊಟ್ಟು ಉತ್ಸವ ರಾಕ್ ಗಾರ್ಡನ್ ಮಾಡಿ ನಾಡಿಗೆ ಚಿರಪರಿಚಿತರಾಗಿರುವ ತಿಪ್ಪಣ್ಣ ಸೊಲಬಕ್ಕನವರ ಇದರ ರೂವಾರಿ. ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಜಾನಪದ ಹೇಳಿಕೊಡುವ, ಆ ಮೂಲಕ ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕನಸು ಅವರದ್ದು. ಈ ನಿಟ್ಟಿನಲ್ಲಿ ರಾಕ್ ಗಾರ್ಡನ್ ಆವರಣದಲ್ಲೇ ಇಂಥ ಒಂದು ವಿನೂತನ ಶಿಕ್ಷಣ ಸಂಸ್ಥೆ ಆರಂಭಿಸಲು ಅವರು ಮುಂದಾಗಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿ ಆರಂಭಿಸುವ ನಿಟ್ಟಿನಲ್ಲಿ ಅವರು ಕಾರ್ಯೋನ್ಮುಖರಾಗಿದ್ದಾರೆ.
ಜಾನಪದ ಉಳಿವಿಗೆ ಪ್ರಯತ್ನ: ಇಂದಿನ ತಂತ್ರಜ್ಞಾನ ಯುಗದಲ್ಲಿ ಜಾನಪದ ಹಾಗೂ ಕನ್ನಡ ಸುಶಿಕ್ಷಿತರಿಗೆ ಅಲ್ಲ ಎಂಬ ತಾತ್ಸಾರವಿದೆ. ಇವೆರಡರಿಂದ ಉದ್ಯೋಗ ಹಾಗೂ ಲಾಭವಿಲ್ಲ ಎಂಬ ಅಭಿಪ್ರಾಯವೂ ಇದೆ. ಇದೇ ಮನಸ್ಥಿತಿ ಮುಂದುವರಿದರೆ ಜಾನಪದ ಅಳಿಯುವುದು ನಿಶ್ಚಿತ. ಆದ್ದರಿಂದ ಜಾನಪದ ಉಳಿದು ಬೆಳೆಯಬೇಕು. ಇಂದಿನ ಸಾಂಪ್ರದಾಯಿಕ ಶಿಕ್ಷಣದ ಜತೆಯೇ ಪ್ರಾಥಮಿಕ ಹಂತದಿಂದಲೇ ಜಾನಪದ ಶಿಕ್ಷಣವನ್ನು ಅಳವಡಿಸಿ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಈ ಪ್ರಯೋಗಕ್ಕೆ ಅವರು ಮುಂದಾಗಿದ್ದಾರೆ. ಅದೂ ಕನ್ನಡ ಭಾಷೆ ಮೂಲಕವೇ ಜಾನಪದಕ್ಕೆ ಬೆಲೆ ತರುವುದು ಹಾಗೂ ಈ ಶಿಕ್ಷಣದೊಂದಿಗೆ ಭಾಷೆ ಬೆಳೆಸುವುದು ಇದರ ಹಿಂದಿನ ಉದ್ದೇಶವಾಗಿದೆ.
ಶಿಕ್ಷಣ ಹೇಗೆ?: ರಾಜ್ಯದ ಶಿಕ್ಷಣ ನೀತಿಯಂತೆ ಅದೇ ಪಠ್ಯಕ್ರಮದಂತೆ ಪಾಠಗಳು ನಡೆಯಲಿವೆ. ಜತೆಯಲ್ಲಿ ಜಾನಪದ ಶಿಕ್ಷಣವನ್ನೂ ಕಲಿಸಲಾಗುತ್ತದೆ. ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಹಂತದಲ್ಲಿ ಕೇವಲ ಶ್ರವಣ ಮಾಧ್ಯಮದ ಮೂಲಕ ಜಾನಪದ ಹಾಡುಗಳನ್ನು ಕೇಳಿಸುವುದು, ಹೇಳಿಸುವುದು ಇಲ್ಲಿ ನಡೆಯಲಿದೆ. ಇದರಿಂದ ನಮ್ಮ ಮಕ್ಕಳ ಬಾಯಲ್ಲಿ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್... ಬದಲು ಗ್ರಾಮೀಣ ಸೊಡಗಿನ ಹಾಡುಗಳು ಬರಬೇಕು. ನಂತರ ದೃಶ್ಯ ಮಾಧ್ಯಮದ ಪಠ್ಯಕ್ರಮ ರೂಪಿಸಿ ಅದನ್ನು ಬೋಧಿಸುವುದು. ಹೀಗೆ ಎಸ್ಸೆಸ್ಸೆಲ್ಸಿವರೆಗೂ ಮುಂದುವರಿಸಿ ಮಕ್ಕಳಲ್ಲಿ ಜಾನಪದ ಕುರಿತು ಜ್ಞಾನ ಬೆಳೆಸುವುದಾಗಿದೆ.
ಶಿಕ್ಷಣದೊಂದಿಗೆ ಜಾನಪದ: ಜಾನಪದ ಒಂದೇ ಇದ್ದರೆ ಅದು ಭಿಕ್ಷಾಟನೆಗೆ ಸೀಮಿತವಾಗುತ್ತದೆ. ನಮ್ಮ ಜಾನಪದ ಅಷ್ಟಕ್ಕೇ ಸೀಮಿತವಾಗಬಾರದು.
ಆದ್ದರಿಂದ ಜಾನಪದ ಜತೆಗೆ ಶಿಕ್ಷಣವೂ ಇದ್ದರೆ ಅದು ಮತ್ತೊಬ್ಬರಿಗೆ ವರ್ಗಾವಣೆಯಾಗುತ್ತದೆ ಮತ್ತು ಬೆಳೆಯುತ್ತದೆ. ಆ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆಯ ದರ್ಶನ ವಿಶ್ವಕ್ಕೇ ತಲುಪಬೇಕು. ಶಿಕ್ಷಣದ ಜತೆಗೆ ಜಾನಪದ ಕಲಿಕೆ ಇದ್ದರೆ ಅಲ್ಲಿ ವಿದ್ವತ್ ದೊರೆಯುತ್ತದೆ. ಆಗ ಮಾತ್ರ ನಮ್ಮ ಸಂಸ್ಕೃತಿಯನ್ನು ಇತರರಿಗೆ ಪರಿಚಯಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಜಾನಪದ ಕನ್ನಡ ಶಿಕ್ಷಣ ಸಂಸ್ಥೆ ಜನ್ಮ ತಾಳುತ್ತಿದೆ.
ಲಾಭ ನಷ್ಟಗಳ ಬಗ್ಗೆ ಚಿಂತಿಸದೇ ಪ್ರಾಥಮಿಕ ಹಂತದಿಂದಲೇ ಜಾನಪದ ಶಿಕ್ಷಣ ಕಲಿಸುವ ಈ ಪ್ರಯೋಗ ವಿನೂತನವೆನಿಸಿದೆ. ಇದಕ್ಕೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ಸಿಕ್ಕರೆ ಮುಂದಿನ ಪೀಳಿಗೆಯ ಮಕ್ಕಳ ಬಾಯಿಂದಲೂ ಗ್ರಾಮೀಣ ಸೊಗಡಿನ ಹಾಡುಗಳನ್ನು ಕೇಳಬಹುದು. ಆದ್ದರಿಂದ ಜಾನಪದ ಉಳಿವಿಗಾಗಿ ನಡೆಸಿರುವ ಈ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಪೇಕ್ಷಣೀಯ.
ಒಪ್ಪಿತ ಪಠ್ಯಕ್ರಮದಿಂದ ಶಾಲೆ ಪ್ರಾರಂಭ
ಶಾಲೆ, ಕಾಲೇಜುಗಳಲ್ಲಿ ನಾಟಕ, ನೃತ್ಯ ಪ್ರದರ್ಶನದಿಂದ ಜಾನಪದ ಬೆಳೆಯಲು ಸಾಧ್ಯವಿಲ್ಲ. ಯಾರನ್ನೋ ಕರೆಸಿ ಪಾಠ ಮಾಡುವುದರಿಂದಲೂ ಪ್ರಯೋಜನವಿಲ್ಲ. ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಜಾನಪದದ ಜ್ಞಾನ ಬರಬೇಕು. ಅದಕ್ಕಾಗಿ ಶಾಲೆ ಆರಂಭಿಸಲಾಗುತ್ತಿದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಠ್ಯಕ್ರಮ ರೂಪಿಸಲು ಕರ್ನಾಟಕ ವಿವಿ, ಜಾನಪದ ವಿವಿ, ಜಾನಪದ ವಿದ್ವಾಂಸರೊಂದಿಗೆ ಚರ್ಚಿಸಲಾಗುತ್ತಿದೆ. ಎಲ್ಲರೂ ಒಪ್ಪಬಹುದಾದ ಪಠ್ಯಕ್ರಮ ರೂಪಿಸಲಾಗುವುದು. ಇದರೊಂದಿಗೆ ಆಟವಾಡುತ್ತಲೇ ಮಕ್ಕಳು ಇಂಗ್ಲಿಷ್, ಹಿಂದಿ ಭಾಷೆಯನ್ನೂ ಕಲಿಯಲು ಇಲ್ಲಿ ವ್ಯವಸ್ಥೆ ಮಾಡಲಾಗುವುದು. ಇಂಥ ಪ್ರಯತ್ನ ಇಲ್ಲಿಗೆ ಸೀಮಿತವಾಗಬಾರದು. ಇನ್ನೂ ಹೆಚ್ಚಿನ ಹಾಗೂ ನಿರಂತರ ಪ್ರಯತ್ನ ಮುಂದುವರಿಯಬೇಕಿದೆ. ಮುಂದಿನ ಪೀಳಿಗೆಗೆ ಜಾನಪದ ವರ್ಗಾವಣೆಯಾಗಬೇಕು. ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನಕ್ಕೆ ಕೈಹಾಕಿದ್ದೇನೆ.
       



-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.