ಹಾವೇರಿ

6ರಿಂದ ಶಾಸಕರ ಮನೆ ಎದುರು ಧರಣಿ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 1
ಕಾರ್ಖಾನೆಗಳ ಮಾಲೀಕರ ಒತ್ತೆಯಾಳಾಗಿರುವ ಸರ್ಕಾರ ಬೆಂಬಲ ಬೆಲೆ ಹೆಚ್ಚಳಕ್ಕೆ ಹಿಂದೇಟು ಹಾಕುತ್ತಿದೆ. ಪ್ರಸಕ್ತ ಬೆಳಗಾವಿ ಅಧಿವೇಶನದಲ್ಲಿಯೇ ಹತ್ತಿ ಮತ್ತು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಹೆಚ್ಚಿಸದಿದ್ದರೆ ಡಿ. 6ರಿಂದ ಜಿಲ್ಲೆಯ ಎಲ್ಲ ಶಾಸಕರ ನಿವಾಸದೆದುರು ರಾಜ್ಯ ರೈತ ಸಂಘ, ಹಸಿರುಸೇನೆ ಕಾರ್ಯಕರ್ತರು ಧರಣಿ ನಡೆಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಎಚ್ಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಬೆಲೆ ಏರಿಕೆಯಿಂದ ಕೃಷಿ ಮುಂದುವರಿಸುವುದೇ ದುಸ್ತರವಾಗಿದೆ. ನಷ್ಟ ಅನುಭವಿಸುತ್ತಿರುವ ರೈತ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ ರೈತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅವೈಜ್ಞಾನಿಕವಾಗಿ ನಿಗದಿಪಡಿಸಿದ ಬೆಲೆಗಳನ್ನು ರದ್ದು ಮಾಡಿ, ಹತ್ತಿಗೆ 8 ಸಾವಿರ ಹಾಗೂ ಮೆಕ್ಕೆಜೋಳಕ್ಕೆ ರು. 2 ಸಾವಿರ ಕನಿಷ್ಠ ಬೆಲೆ ನಿಗದಿಪಡಿಸಲು ಆಗ್ರಹಿಸಿದರು.
40 ಕೋಟಿ ಉದ್ಯೋಗ: ಕೃಷಿಯಿಂದಲೇ ಸುಮಾರು 40 ಕೋಟಿ ಜನರಿಗೆ ಉದ್ಯೋಗ ದೊರೆತಿದೆ. ಹತ್ತಿ ಬೆಳೆಯೊಂದರಿಂದಲೇ ವಿವಿಧ ಹಂತದಲ್ಲಿ ಸರ್ಕಾರಕ್ಕೆ 10 ಬಾರಿ ತೆರಿಗೆ ಸಂಗ್ರಹವಾಗುತ್ತಿದೆ. ರೂಪಾಂತರಿಸಿದ ಮೆಕ್ಕೆಜೋಳದಿಂದ ವಿವಿಧ ಮಾದರಿಯ 40 ವಸ್ತುಗಳನ್ನು ಉತ್ಪಾದಿಸುತ್ತಿದ್ದು, ಬೆಂಬಲ ಬೆಲೆ ಹೆಚ್ಚಳಕ್ಕೆ ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ? ರೈತನನ್ನು ಸಾಯಿಸಿ ಕಾರ್ಖಾನೆಗಳನ್ನು ಬದುಕಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ದುಡಿಯುವ ಕೈಗೆ ಶಕ್ತಿ ಕೊಡಿ: ಕಳಪೆ ಬೀಜ ಮಾರಾಟ ಮಾಡಿದರೂ ಕಂಪನಿಗಳಿಗೆ ಮೋಸದ ಭಯವಿಲ್ಲ, ಈಗಿರುವ ಬೀಜ ನೀತಿ ರೈತ ವಿರೋಧಿಯಾಗಿದ್ದು, ಸೂಕ್ತ ತಿದ್ದುಪಡಿ ತರುವ ಮೂಲಕ ಸರ್ಕಾರ ರೈತರಿಗೆ ನ್ಯಾಯ ಒದಗಿಸಬೇಕು. ದುಡಿಯುವ ಕೈಗಳಿಗೆ ಶಕ್ತಿ ಇಲ್ಲದಿದ್ದರೇ ಇಡೀ ದೇಶವೇ ಪರಾವಲಂಬಿಯಾಗಬೇಕಾಗುತ್ತದೆ ಎಂದರು.
ಗಂಗಣ್ಣ ಎಲಿ ಮಾತನಾಡಿ, ಸರ್ಕಾರ ಕಾಟಾಚಾರಕ್ಕೆ ಕಳಪೆ ಹತ್ತಿ ಬೀಜದ ಸಮೀಕ್ಷೆ ನಡೆಸುತ್ತಿರುವ ಕುರಿತು ಅನುಮಾನ ವ್ಯಕ್ತವಾಗುತ್ತಿದೆ, ಕೃಷಿ ಈ ದೇಶದ ಸ್ವಾಭಿಮಾನದ ಸಂಕೇತ, ರೈತನ ಕಣ್ಣುಗಳಲ್ಲಿ ನೀರು ತರಿಸುವ ಸರ್ಕಾರ ತನ್ನ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ,
ರೈತರಿಂದ ಛೀ.. ತೂ.. ಅನ್ನಿಸಿಕೊಳ್ಳುವ ಜನಪ್ರತಿನಿಧಿಗಳಿಗೆ ಭವಿಷ್ಯವಿಲ್ಲ. ರೈತನ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಹೆದ್ದಾರಿ ತಡೆ, ಜೈಲ್ ಭರೋ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಇಂದು ಬೆಳಗಾವಿ ಮುಂದೆ ಹಾವೇರಿ: ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಿದ್ದೂ ಆಯಿತು, ಬೆಲೆ ಕೇಳಿದವನಿಗೆ ವಿಷ ಕುಡಿಸಿದ್ದೂ ಆಯಿತು, ಇದು ರೈತನ ಮೇಲಿರುವ ಸರ್ಕಾರಕ್ಕಿರುವ ಕಳಕಳಿ ಹಾಗಿದ್ದರೆ ರೈತನ ಮಗನಾಗಿ ಹುಟ್ಟಿದ್ದು ತಪ್ಪೇ? ಕಳಪೆ ಹತ್ತಿ ಬೀಜಕ್ಕೆ ಸೂಕ್ತ ಪರಿಹಾರ ನೀಡದಿದ್ದರೆ ಇಂದು ಬೆಳಗಾವಿಯಲ್ಲಿ ಜರುಗಿದ ಘಟನೆ ಮುಂದೆ ಹಾವೇರಿಯಲ್ಲಿ ನಡೆಯುವುದು ನಿಶ್ಚಿತ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿಕ್ಕಪ್ಪ ಛತ್ರದ, ಬಸವರಾಜ ಸಂಕಣ್ಣನವರ, ಶಂಭಣ್ಣ ಬಿದರಿ ಸೇರಿದಂತೆ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.
ಕಳಪೆ ಹತ್ತಿ ಬೀಜ: ನಷ್ಟಕ್ಕೆ ಪರಿಹಾರ ನೀಡಿ
ರಾಣಿಬೆನ್ನೂರು: ಉತ್ತರ ಕರ್ನಾಟಕದ ರೈತರು ಬೆಳೆಯುವ ಪ್ರಮುಖ ಬೆಳೆಗಳಾದ ಹತ್ತಿ ಮತ್ತು ಗೋವಿನ ಜೋಳಕ್ಕೆ ಬೆಂಬಲ ಬೆಲೆ ಹೆಚ್ಚಿಸಬೇಕು ಹಾಗೂ ಕಳಪೆ ಗುಣಮಟ್ಟದ ಹತ್ತಿ ಬಿತ್ತನೆ ಬೀಜವನ್ನು ನೀಡಿ ರೈತರನ್ನು ವಂಚಿಸಿರುವ ಬೀಜೋತ್ಪಾದನಾ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು  ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚೇಳ್ಳೇರ ಆಗ್ರಹಿಸಿದರು.
ಈ ಕುರಿತು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಲು ಜಿಲ್ಲೆಯ ಶಾಸಕರು ಮುಂದಾಗಬೇಕೆಂದು ಒತ್ತಾಯಿಸಿದರು.
ಬೀಜೋತ್ಪಾದನೆ ತವರೂರೆಂಬ ಖ್ಯಾತಿಗೆ ಪಾತ್ರವಾಗಿರುವ ಹಾವೇರಿ ಜಿಲ್ಲೆಯ ರೈತರು ನಂಬಿದ್ದ ಮಹಿಕೋ ಮತ್ತು ಕಾವೇರಿ ಬಿತ್ತನೆ ಬೀಜೋತ್ಪಾದನಾ ಕಂಪನಿಯವರು 2013-14ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ ನೀಡಿರುವ ಹತ್ತಿ ಮತ್ತು ಗೋವಿನಜೋಳಗಳೆಲ್ಲ ಕಳಪೆ ಗುಣಮಟ್ಟದಿಂದ ಕೂಡಿರುವ ಕಾರಣ ಜಿಲ್ಲಾದ್ಯಂತ ರೈತರು 37 ಸಾವಿರ ಎಕರೆ ಪ್ರದೇಶದ ಬೆಳೆ ಹಾಳಾಗಿದೆ. ಇದರಿಂದ ರೈತರು ಕಂಗಾಲಾಗಿರುವುದನ್ನು ಸರ್ಕಾರದ ಗಮನಕ್ಕೆ ತರಲು ಮತ್ತು ಕಂಪನಿಯವರಿಂದ, ಸರ್ಕಾರ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಬಳ್ಳಾರಿ, ಅಶೋಕ ಅಗಡಿ, ರಮೇಶಗೌಡ ಕರಬಸಳ್ಳವರ, ಚಂದ್ರಗೌಡ ಕರೆಗೌಡ್ರ, ಬಸವರಾಜ ಕಡೂರು ಮಾತನಾಡಿದರು. ರೈತರಾದ ಶಿವಣ್ಣ ಮತ್ತೂರು, ದಿಳ್ಳೆಪ್ಪ ಕಂಬಳಿ, ಸುರೇಶ ದುಳೆಹೂಳಿ, ಸಣ್ಣಿಂಗಪ್ಪ ಕನ್ನಪ್ಪಳವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.