ಹಾವೇರಿ

ಕೃಷಿ ಮೇಳದಲ್ಲಿ ಅಕ್ಕೂರು ರೈತನ ಉಪನ್ಯಾಸ

Published On :

ಹಾವೇರಿ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸುವರ್ಣಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕೃಷಿ ಮೇಳದಲ್ಲಿ ಏರ್ಪಡಿಸಿದ್ದ ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿಯಲ್ಲಿ ತಾಲೂಕಿನ ಅಕ್ಕೂರ ಗ್ರಾಮದ ಪ್ರಗತಿಪರ ರೈತ ಪರಮೇಶ್ವರಯ್ಯ ಸಾಲೀಮಠ ಪಾಲ್ಗೊಂಡು, ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ ಕ್ರಮಗಳ ಕುರಿತು ತಮ್ಮ ಕೃಷಿ ಅನುಭವಗಳನ್ನು ರೈತರೊಂದಿಗೆ ಹಂಚಿಕೊಂಡರು.
ಮಳೆ ನೀರನ್ನು ಹರಿಬಿಡದೆ ತೋಟಗಳಲ್ಲಿ ಚಿಕ್ಕ ಬದುಗಳನ್ನು ನಿರ್ಮಿಸಿ ಭೂಮಿಯಲ್ಲಿ ಇಂಗುವಂತೆ ಮಾಡುವುದರಿಂದ ಭೂ ಸವಕಳಿ ತಡೆಗಟ್ಟಬಹುದು. ಅಂತರ್ಜಲ ಮಟ್ಟ ಹೆಚ್ಚಿ ಬೆಳೆಗಳಿಗೆ ಸಮರ್ಪಕವಾಗಿ ನೀರು ಸಿಕ್ಕಿ, ಉತ್ತಮ ಇಳುವರಿ ಪಡೆಯಬಹುದು. ತಮ್ಮ ಜಮೀನಿನ ಮೇಲ್ಭಾಗದ ಅಂದಾಜು 200 ಎಕರೆ ಪ್ರದೇಶದಲ್ಲಿ ಬೀಳುವ ಮಳೆ ನೀರು ಹರಿದು ಹಳ್ಳವನ್ನು ಕೂಡುತ್ತಿತ್ತು. ಅದನ್ನು ರಸ್ತೆಗಳ ಚರಂಡಿ ಮೂಲಕ ಕೃಷಿ ಹೊಂಡಕ್ಕೆ ಹರಿದು ಬರುವಂತೆ ಮಾಡಿದ್ದೇನೆ. ಈಗ ಕೃಷಿ ಭೂಮಿ ವರ್ಷವಿಡೀ ತೇವಾಂಶದಿಂದ ಕೂಡಿರುತ್ತದೆ. ಕೊಳವೆ ಬಾವಿಗಳಲ್ಲೂ ನೀರಿನ ಮಟ್ಟ ಏರಿದೆ ಎಂದು ವಿವರಿಸಿದರು.
ಕೃಷಿ ಉತ್ಪನ್ನಗಳ ತ್ಯಾಜ್ಯವನ್ನು ಮಣ್ಣಿಗೆ ಸೇರಿಸುವ ಕ್ರಮದಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಸಾಧ್ಯ. ಜಮೀನಿನ ಸುತ್ತಲೂ ಜೌಷಧಿ ಸಸ್ಯಗಳ ಬೇಲಿ ಮಾಡಿದ್ದೇನೆ. ಕೃಷಿಗೆ ಪೂರಕವಾದ ಉಪ ಉತ್ಪನ್ನಗಳಾದ ಎರೆಹುಳು ಗೊಬ್ಬರ ತಯಾರಿಕೆ, ಜೇನು ಸಾಕಾಣಿಕೆ ಕೈಗೊಂಡಿದ್ದೇನೆ. ಇದರಿಂದ ಸ್ವಾವಲಂಬನೆ, ಆರ್ಥಿಕ ಸದೃಢತೆ ಒದಗಿದೆ ಎಂದರು.
ರಾಜ್ಯ ಕೃಷಿ ಆಯೋಗದ ಅಧ್ಯಕ್ಷ ಡಾ೤ ಎಸ್.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿವಿಯ ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ೤ ಕೃಷ್ಣಮೂರ್ತಿ ಇದ್ದರು.

--
7 ಕಳ್ಳರ ಸೆರೆ, ಮೂವರು ಪರಾರಿ
ಹಾವೇರಿ: ವಿವಿಧೆಡೆ ಮನೆ, ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಏಳು ಆರೋಪಿಗಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ. ಬಂಧಿತರಿಂದ ತಾಮ್ರದ ತಂತಿ, ಕೃತ್ಯಕ್ಕೆ ಬಳಸಿದ ಟಾಟಾ ಸುಮೋ, ಬೈಕ್ ಸೇರಿ ಒಟ್ಟು ರು. 4.43 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ. ನೆಲೋಗಲ್ಲ ಗ್ರಾಮದ ಹನುಮಂತ ಕದರಮಂಡಲಗಿ, ವಾಸುದೇವ ಚವ್ಹಾಣ, ರವಿ ಶಾಂಡಗಿ, ನಾಗನಗೌಡ ಸಿದ್ದನಗೌಡ್ರ, ಚನ್ನವೀರಗೌಡ ಹೊಸಗೌಡ್ರ, ಅಗಡಿ ಗ್ರಾಮದ ಗಣೇಶ ಬಾಸೂರ, ಮಹ್ಮದಸಾಬ ಅಲಿಯಾಸ್ ಬಂಗಾರಭಾಷಾ ಸುಂಕದ ಬಂಧಿತರು. ಇವರು ಹಾವೇರಿ ಗ್ರಾಮೀಣ ವ್ಯಾಪ್ತಿಯ ದಿಡಗೂರ ಗ್ರಾಮದಲ್ಲಿ ಮನೆ ಕಳ್ಳತನ ಮಾಡಿದ್ದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೇರೆ ಕಡೆಗಳಲ್ಲೂ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಹಾವೇರಿ ಶಹರ ಠಾಣೆ ಸಿಪಿಐ ಸಂತೋಷ ಪವಾರ, ಪಿಎಸ್‌ಐಗಳಾದ ಆರ್.ಆರ್. ಪಾಟೀಲ, ಬಿ.ಕೆ. ಗಣಪತಿ, ಮಹಾಂತೇಶ ಲಂಬಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.