ಕಳಪೆ ಹತ್ತಿ ಸಮೀಕ್ಷೆ, ರೈತರ ಸಹನೆ ಪರೀಕ್ಷೆ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 4
ಕಳಪೆ ಬಿಟಿ ಹತ್ತಿ ಬೀಜ ಬಿತ್ತಿ ಬೆಳೆ ಬಾರದೇ ಸಂಕಷ್ಟದಲ್ಲಿರುವ ಜಿಲ್ಲೆಯ ರೈತರು ಈಗ ಮತ್ತೊಂದು ಸಮಸ್ಯೆ ಎದುರಿಸುವಂತಾಗಿದೆ. ನ. 30ರೊಳಗೆ ಮುಗಿಯಬೇಕಾಗಿದ್ದ ಹಾನಿ ಸಮೀಕ್ಷಾ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಬೇರೆ ಬೆಳೆ ಬೆಳೆಯಲೂ ಸಾಧ್ಯವಾಗದೆ ರೈತರ ಕೈ ಕಟ್ಟಿಹಾಕಿ ಕೂರಿಸಿದೆ.
ಕಳಪೆ ಬಿಟಿ ಹತ್ತಿ ಬೀಜದಿಂದ ಹಾನಿ ಅನುಭವಿಸಿರುವ ಜಿಲ್ಲೆಯ ರೈತರ ಸ್ಥಿತಿ ಈಗ ಅಯೋವುಯವಾಗಿದೆ. ಈ ಸಾರಿ ಉತ್ತಮ ಮಳೆ ಬಂದರೂ ಕಳಪೆ ಬೀಜದಿಂದ ಉತ್ತಮ ಬೆಳೆ ಬಾರದೇ ಜಿಲ್ಲೆಯ ರೈತರು ಸಂಕಷ್ಟಕ್ಕೀಡಾಗಿದ್ದರು. ರೈತರು, ರೈತ ಸಂಘಟನೆಗಳು, ವಿರೋಧ ಪಕ್ಷಗಳ ನೇತೃತ್ವದಲ್ಲಿ ತಿಂಗಳುಗಳ ಕಾಲ ನಡೆಸಿದ ಹೋರಾಟದ ಪ್ರತಿಫಲವಾಗಿ ಸರ್ಕಾರ ಹಾವೇರಿ ಸೇರಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಬೆಳೆಹಾನಿ ಸಮೀಕ್ಷೆ ನಡೆಸಿ, ಕಳಪೆ ಬೀಜ ವಿತರಿಸಿದ ಮಹಿಕೋ ಕಂಪನಿಯಿಂದ ಪರಿಹಾರ ಕೊಡಿಸಲು ಅ. 29ರಂದು ಬೆಂಗಳೂರನಲ್ಲಿ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೃಷಿ ವಿವಿ ವಿಜ್ಞಾನಿಗಳು, ಕೃಷಿ ಇಲಾಖೆ ಹಾಗೂ ಮಹಿಕೋ ಸಂಸ್ಥೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಈ ತೀರ್ಮಾನದಂತೆ ಬಿಟಿ ಹತ್ತಿ ಬೆಳೆಹಾನಿ ಕುರಿತು ಹಾನಿಗೊಳಗಾದ ರೈತರ ಜಮೀನು ಸಮೀಕ್ಷೆ ನಡೆಸಲು ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು (ಕಂದಾಯ, ಕೃಷಿ, ಜಲಾನಯನ ಮತ್ತು ತೋಟಗಾರಿಕೆ ಇಲಾಖೆ), ಮಹಿಕೋ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಕೃಷಿ ವಿವಿಯ ವಿಜ್ಞಾನಿಗಳನ್ನು ಒಳಗೊಂಡ ಮೂವರು ಅಧಿಕಾರಿಗಳ ತಂಡವನ್ನು ರಚಿಸಬೇಕು. ಈ ಸಮೀಕ್ಷೆಯನ್ನು ನ. 30ರೊಳಗೆ ಮುಕ್ತಾಯಗೊಳಿಸಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿತ್ತು.
ನಿಧಾನಗತಿಯ ಸಮೀಕ್ಷೆ
ಹಾವೇರಿ ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಳಪೆ ಬಿಟಿ ಹತ್ತಿ ಬೀಜದಿಂದ ಬೆಳೆ ಹಾನಿಯಾದ ಬಗ್ಗೆ 26 ಸಾವಿರ ರೈತರು ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದುವರೆಗೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಸಮೀಕ್ಷೆ ಮಾಡಿರುವುದು 13 ಸಾವಿರ ಹೆಕ್ಟೇರ್ ಮಾತ್ರ. ಇನ್ನೂ ಶೇ. 50ರಷ್ಟು ಪ್ರದೇಶದಲ್ಲಿ ಸಮೀಕ್ಷೆ ಆಗಿಲ್ಲ. ಸರ್ಕಾರ ನ. 30ರೊಳಗೆ ಸಮೀಕ್ಷಾ ವರದಿ ಸಲ್ಲಿಸಲು ಆದೇಶಿಸಿದ್ದರೂ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಕೃಷಿ ಇಲಾಖೆಯಿಂದ ಸಾಧ್ಯವಾಗಿಲ್ಲ. ಈ ತಿಂಗಳಾತ್ಯಕ್ಕೂ ಸಮೀಕ್ಷೆ ಮುಕ್ತಾಯ ಅಸಾಧ್ಯ ಎನ್ನಲಾಗುತ್ತಿದೆ.
ರೈತರು ಕಂಗಾಲು
ಅನೇಕ ರೈತರು ಈಗಾಗಲೇ ಅಲ್ಪ ಪ್ರಮಾಣದಲ್ಲಿ ಬಂದಿರುವ ಹತ್ತಿಯನ್ನು ಬಿಡಿಸಿ ಬೇರೆ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. ಆದರೆ ಸಮೀಕ್ಷಾ ಕಾರ್ಯ ಮುಗಿಯದ್ದರಿಂದ ಬೇರೆ ಬೆಳೆ ಬೆಳೆಯಲೂ ಅಡ್ಡಿಯಾಗಿದೆ. ಸಮೀಕ್ಷಾ ಕಾರ್ಯ ಮುಗಿಯದ ಹೊರತು ಹತ್ತಿ ಗಿಡಗಳನ್ನು ಕೀಳುವಂತಿಲ್ಲ. ಕಿತ್ತರೆ ಸಿಗಬಹುದಾದ ಪರಿಹಾರವೂ ದೊರೆಯುವುದಿಲ್ಲ. ಕೃಷಿ ಇಲಾಖೆಯ ನಿಧಾನಗತಿ ಸಮೀಕ್ಷೆಯು ರೈತರನ್ನು ಸಂದಿಗ್ಧತೆಯಲ್ಲಿ ಸಿಲುಕಿಸಿದೆ. ರೈತರನ್ನು ಒಳಗೊಂಡು ಫೋಟೋ ಹಾಗೂ ವೀಡಿಯೋ ದಾಖಲೀಕರಣ ಮಾಡುವಂತೆ ಸೂಚಿಸಿದ್ದರೂ ಸಮೀಕ್ಷಾ ತಂಡದಿಂದ ಈ ಕಾರ್ಯ ಆಗುತ್ತಿಲ್ಲ. ಸಮೀಕ್ಷಾ ವಿಧಾನಕ್ಕೆ ರೈತರ ಅಸಮಾಧಾನದ ಕೂಗು ಮತ್ತೆ ಕೇಳಿಬರುತ್ತಿದೆ. ಸಮೀಕ್ಷೆ ಕಾರ್ಯ ವಿಳಂಬವಾಗುತ್ತಿದ್ದು, ಬೆಳೆಹಾನಿ ಸಂಭವಿಸಿ ನಷ್ಟದಲ್ಲಿರುವ ರೈತರು ಬೇರೆ ಬೆಳೆಯುವುದು ಅನಿವಾರ್ಯವಾಗಿದೆ. ಸಮೀಕ್ಷೆ ಮುಗಿಯುವವರೆಗೆ ಕಾಯುವುದು ಸಾಧ್ಯವಿಲ್ಲ. ಆದ್ದರಿಂದ ಹತ್ತಿ ಬೀಜ ಖರೀದಿಸಿದ ಬಗ್ಗೆ ರಸೀದಿ ಪಡೆದು ಪರಿಹಾರ ನೀಡಬೇಕು ಎಂಬುದು ರೈತರ ವಾದ.
ಈ ಕುರಿತು ಜಂಟಿ ಕೃಷಿ ನಿರ್ದೇಶಕ ಗಣೇಶ ನಾಯಕ ಅವರನ್ನು ಕೇಳಿದಾಗ, 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಳಪೆ ಬೀಜದಿಂದಾದ ಬೆಳೆಹಾನಿಯಾದ ಬಗ್ಗೆ ರೈತರಿಂದ ಅರ್ಜಿ ಬಂದಿವೆ. ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

