ಸತ್ತ ರೈತರ ಕುಟುಂಬಕ್ಕೆ ಪರಿಹಾರವಿಲ್ಲವೇ?
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 5
ಬೆಳೆ ವೈಫಲ್ಯ, ಕೃಷಿ ಉತ್ಪನ್ನಗಳಿಗೆ ಅವೈಜ್ಞಾನಿಕ ಬೆಲೆಯಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ನಡೆದೇ ಇದೆ. ಆದರೆ, ಮೂರು ವರ್ಷಗಳಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾದ ಹಾಗೂ ಕೃಷಿ ಚಟುವಟಿಕೆಯಲ್ಲಿದ್ದಾಗ ಹಾವು ಕಚ್ಚಿ ಮೃತಪಟ್ಟ ರೈತರ ಕುಟುಂಬಕ್ಕೆ ಸರ್ಕಾರದ ನೆರವು ಸಿಕ್ಕಿದ್ದು ಮಾತ್ರ ನಗಣ್ಯ.
ಜಿಲ್ಲೆಯ ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿದ್ದು, ಬೆಲೆ ಕುಸಿತ ಹಾಗೂ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದಾಗ ಮಾಡಿದ ಸಾಲ ತೀರಿಸಲಾಗದೆ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ತಮ್ಮದು ರೈತಪರ ಸರ್ಕಾರ ಎಂದು ಹೇಳುವ ಯಾವ ಸರ್ಕಾರವೂ ರೈತರ ಕೈ ಹಿಡಿದಿಲ್ಲ ಎಂಬುದಕ್ಕೆ ಪತ್ರಿಕೆಗೆ ದೊರೆತ ಅಂಕಿಅಂಶಗಳೇ ಸಾಕ್ಷಿ. ಕಷ್ಟ ಕಾಲದಲ್ಲಿ ಸ್ಪಂದಿಸಬೇಕಿದ್ದ ಸರ್ಕಾರ ಹಾಗೂ ಜನಪ್ರತಿನಿಧಿಗಳು ರೈತ ಕುಟುಂಬಗಳ ಬಗ್ಗೆ ಕಾಳಜಿ ವಹಿಸಿಲ್ಲ ಎಂಬ ಸಂಗತಿ ಬೇಸರ ತರಿಸುತ್ತದೆ. ವಿವಿಧ ಕಾರಣಗಳಿಂದ ಸತ್ತ ರೈತನ ಕುಟುಂಬ ವರ್ಗದವರ ಎದುರು ಕಣ್ಣೀರು ಸುರಿಸಿ ಬರುವ ನಮ್ಮ ಜನಪ್ರತಿನಿಧಿಗಳು ಸರ್ಕಾರದಿಂದ ಕೊಡಿಸಿದ ಸೌಲಭ್ಯಗಳು ಏನೇನೂ ಇಲ್ಲ. ಅಲ್ಲದೇ ಸರ್ಕಾರದ ನಿಯಮಗಳೇ ಅನೇಕ ವೇಳೆ ಪರಿಹಾರ ಒದಗಿಸಲು ಅಡ್ಡಿಯಾಗುತ್ತಿದೆ.
ಪರಿಹಾರ ವಿಳಂಬ: ಆತ್ಮಹತ್ಯೆ ಮಾಡಿಕೊಂಡ ಹಾಗೂ ಹಾವು ಕಚ್ಚಿ ಮೃತಪಟ್ಟ ರೈತರ ಕುಟುಂಬಗಳಿಗೆ ಶೀಘ್ರವಾಗಿ ಪರಿಹಾರ ಸಿಗುತ್ತಿಲ್ಲ. ಸರ್ಕಾರದ ಹಲವು ನಿಯಮಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ಪೊಲೀಸ್ ಪ್ರಕರಣವಾಗಿ, ಕೃಷಿ ಇಲಾಖೆಗೆ ಅರ್ಜಿ ಸಲ್ಲಿಕೆಯಾದ ಬಳಿಕ ಪರಿಶೀಲನೆ ನಡೆಯುತ್ತದೆ. ಸಾಲಬಾಧೆಯಿಂದ ಆತ್ಮಹತ್ಯೆ ಎಂದಾದರೆ ಆತನಿಗೆ ಇರುವ ಸಾಲವೆಷ್ಟು, ಬ್ಯಾಂಕ್ಗಳಿಂದ ನೋಟಿಸ್ ಜಾರಿಯಾಗಿದೆಯೇ ಇತ್ಯಾದಿ ಹತ್ತಾರು ಪ್ರಶ್ನೆಗಳಿಗೆ ಹೌದು ಎಂಬ ಉತ್ತರ ಸಿಕ್ಕರೆ ಮಾತ್ರ ಪರಿಹಾರಕ್ಕೆ ಆ ಅರ್ಜಿ ಅರ್ಹವಾಗುತ್ತದೆ. ಇಲ್ಲದಿದ್ದರೆ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅದು ತಿರಸ್ಕೃತಗೊಳ್ಳುತ್ತದೆ. ಹಾವಾದರೂ ರೈತ ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದಾಗ ಕಡಿದರೆ ಮಾತ್ರ ಪರಿಹಾರ ಎಂಬ ನಿಯಮವಿದೆ. ಇಂಥ ಕಾನೂನು ತೊಡಕುಗಳಿಂದಾಗಿ ಸಾವಿನಿಂದ ನೊಂದ ಕುಟುಂಬ ಪರಿಹಾರಕ್ಕೆ ಅಲೆದಾಡುವಂತಾಗುತ್ತಿದೆ.
ಈ ಕುರಿತು ಹಾವೇರಿ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾ ಪರಿಹಾರ ಸಮಿತಿ ಅಧ್ಯಕ್ಷ ಮಹ್ಮದ್ ಜುಬೇರ್ ಅವರನ್ನು ಕೇಳಿದಾಗ, ಕೃಷಿ ಇಲಾಖೆ ಅಧಿಕಾರಿಗಳು ನೀಡುವ ವರದಿ ಆಧಾರದಲ್ಲಿ ಸಮಿತಿ ಸಭೆ ನಡೆಸಿ ಅರ್ಹ ಪ್ರಕರಣಗಳಿಗೆ ಪರಿಹಾರ ಕೋರಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.
ಒಂದು ಪ್ರಕರಣದಲ್ಲಿ ಮಾತ್ರ ಪರಿಹಾರ ಬಾಕಿ ಇದೆ. ಆದರೆ, ರೈತನ ಆತ್ಮಹತ್ಯೆ ಹಾಗೂ ಹಾವು ಕಡಿದು ಮೃತಪಟ್ಟ ಪ್ರಕರಣಗಳ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕವೇ ಪರಿಹಾರಕ್ಕೆ ಪರಿಗಣಿಸಲಾಗುತ್ತದೆ ಎಂದರು.
ಸಾಲಬಾಧೆಯಿಂದ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರದ ನಿಯಮಗಳು ಆತನ ಕುಟುಂಬಕ್ಕೆ ನೆರವು ನೀಡಲು ಅಡ್ಡಿಯಾಗುತ್ತಿವೆ. ಎಷ್ಟೋ ಪ್ರಕರಣಗಳಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬರುತ್ತಾರೆ. ಇದು ರೈತನ ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ ಉಂಟು ಮಾಡುತ್ತದೆ.
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

