ಹಾವೇರಿ

ಸಂಚಾರಿ ಠಾಣೆ ಆರಂಭಿಸಲು ಸಹಿ ಸಂಗ್ರಹ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 6
ಜಿಲ್ಲಾ ಕೇಂದ್ರವಾಗಿ 15 ವರ್ಷ ಕಳೆದರೂ ಇದುವರೆಗೆ ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ಆರಂಭವಾಗಿಲ್ಲ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಶೀಘ್ರದಲ್ಲಿ ಠಾಣೆ ಆರಂಭಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಸಹಿ ಸಂಗ್ರಹಿಸಿದರು.
ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಮುಳ್ಳೂರ ನೇತೃತ್ವದಲ್ಲಿ ನಗರದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ, ಶಹರ ಠಾಣೆ ಸಿಪಿಐ ಸಂತೋಷ ಪವಾರ್‌ಗೆ ಸಲ್ಲಿಸಿದರು. ಹಾವೇರಿ ನಗರ ಜಿಲ್ಲಾ ಕೇಂದ್ರವಾಗಿದ್ದು, 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ನಗರದ ಪ್ರತಿಷ್ಠಿತ ಬಸವೇಶ್ವರ ನಗರದಲ್ಲಿ ದಿನಂಪ್ರತಿ ಸರಗಳ್ಳರ ಕಾಟ ಹೆಚ್ಚಾಗುತ್ತಿದೆ. ಮನೆ ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲಾ ಕೇಂದ್ರವಾಗಿ ಇಷ್ಟು ವರ್ಷಗಳಾದರೂ ಸಂಚಾರಿ ಪೊಲೀಸ್ ಠಾಣೆ ಅಥವಾ ಬಡಾವಣೆಗಳಲ್ಲಿ ಪೊಲೀಸ್ ಔಟ್‌ಪೋಸ್ಟ್‌ಗಳನ್ನು ತೆರೆಯದಿರುವುದು ವಿಷಾದನೀಯ ಸಂಗತಿ. ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಲು ಔಟ್ ಪೋಸ್ಟ್‌ಗಳನ್ನು ಶೀಘ್ರದಲ್ಲಿ ಪ್ರಾರಂಭಿಸಿ ಹೆಣ್ಣು ಮಕ್ಕಳು, ವೃದ್ಧರು ನೆಮ್ಮದಿಯಿಂದ  ಜೀವನ ಸಾಗಿಸಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕಳ್ಳತನ, ದರೋಡೆ, ಸರಗಳ್ಳರ ಹಾವಳಿಯಿಂದ ಜನರಿಗೆ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಬಸವೇಶ್ವರ ನಗರದಲ್ಲಿ ಒಂದು ಪೊಲೀಸ್ ಹೊರಠಾಣೆ ಆರಂಭಿಸಬೇಕು ಎಂದು ಸಿಪಿಐ ಸಂತೋಷ ಪವಾರ್ ಮೂಲಕ ಎಸ್ಪಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬಸವೇಶ್ವರ ನಗರ ಹಾಗೂ ಮಂಜುನಾಥ ನಗರಗಳಲ್ಲಿ ಮನೆ ಮನೆಗೆ ತೆರಳಿ ಅಲ್ಲಿ ನೆಲೆಸಿರುವ ನಾಗರಿಕರಿಗೆ ಮನವಿಯ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟು, ಅವರಿಂದ ಸಹಿಯನ್ನು ಪಡೆದರು. ಪ್ರಮುಖರಾದ ವಿ.ಎಂ. ಪತ್ರಿ, ಬಿ.ಎಚ್. ಕಲಾಲ, ಅಶೋಕ ಕಾಶೆಟ್ಟಿ, ಪ್ರದೀಪ ಶೇಷಗಿರಿ, ಎಸ್,ಎನ್. ದೇಸಾಯಿ, ಪಿ.ಎಸ್. ಮಾಗನೂರ, ಡಾ೤ ಗಣೇಶ, ಡಾ೤ ಅಶ್ವಿನಿ, ರೂಪಾ ಗೊಂಬಿ, ಪೂಜಾ ಹೇರೂರ ಮುಂತಾದವರು ಮನವಿ ಪತ್ರಕ್ಕೆ ಸಹಿ ಮಾಡುವ ಮೂಲಕ ಯುವ ಮೋರ್ಚಾ ಕಾರ್ಯಕರ್ತರ ಈ ಕಾರ್ಯಕ್ಕೆ ಬೆಂಬಲ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.