ಹಾವೇರಿ

ಸಾಲ ನೀಡದ ಬ್ಯಾಂಕ್ ಅಧಿಕಾರಿಗೆ ದಿಗ್ಬಂಧನ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಡಿ. 6
ರೈತರಿಗೆ ಸಾಲ ನೀಡುವುದಾಗಿ ಹೇಳಿ 4-5 ತಿಂಗಳಿಂದ ಅಲೆದಾಡಿಸಿ, ಆ ಬಳಿಕ ಸ್ಪಂದಿಸದ ಖಾಸಗಿ ಬ್ಯಾಂಕೊಂದರ ಅಧಿಕಾರಿಗಳನ್ನು ತಾಲೂಕಿನ ತಾವರೆಗೊಪ್ಪ ಗ್ರಾಮಸ್ಥರು ದೇವಸ್ಥಾನದಲ್ಲಿ ಕೂಡಿ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆದಿದೆ.
ತಾವರೆಗೊಪ್ಪ ಹಾಗೂ ಪಕ್ಕದ ಹೇರೂರು, ಹಿರೇಬಾಸೂರು ಗ್ರಾಮಗಳಿಗೆ ಭೇಟಿ ನೀಡಿದ ಬ್ಯಾಂಕಿನ ಅಧಿಕಾರಿಗಳು ಪ್ರತಿ ಎಕರೆಗೆ ರು. 1 ಲಕ್ಷದ ವರೆಗೆ ಸಾಲ ನೀಡುವುದಾಗಿ ಹೇಳಿ ರೈತರಿಂದ ಹತ್ತಾರು ಬಗೆಯ ದಾಖಲೆ ಪತ್ರಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಸಾಲ ಸಿಗುವ ಆಸೆಯಿಂದ ರೈತರು ಹಲವು ತಿಂಗಳಿಂದ ಸಾವಿರಾರು ರುಪಾಯಿ ಖರ್ಚು ಮಾಡಿ ಎಲ್ಲ ರೀತಿಯ ಕಾಗದಪತ್ರಗಳನ್ನು ಸಂಗ್ರಹಿಸಿ ಬ್ಯಾಂಕಿಗೆ ನೀಡಿದ್ದಾರೆ. ಇದೀಗ ರೈತರಿಗೆ ಕಾಗದ ಪತ್ರಗಳನ್ನು ಮರಳಿಸಿರುವ ಅಧಿಕಾರಿಗಳು ಸಾಲ ನೀಡುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೆರಳಿದ ರೈತರು ಬ್ಯಾಂಕಿನ ಮೂವರು ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿಕೊಂಡು ಅವರನ್ನು ಮಾರುತಿ ದೇವಸ್ಥಾನದಲ್ಲಿ ಕೂಡಿ ಹಾಕಿ ತರಾಟೆಗೆ ತೆಗೆದುಕೊಂಡರು.
ನಾವೇನೂ ಸಾಲ ಕೊಡಿ ಎಂದು ನಿಮ್ಮ ಬಳಿ ಬಂದಿಲ್ಲ. ನೀವೇ ನಮ್ಮ ಬಳಿ ಬಂದು ಸಾಲ ನೀಡುವುದಾಗಿ ಹೇಳಿದ್ದೀರಿ. ನೀವು ಹೇಳಿದಂತೆ ಸಾವಿರಾರು ರುಪಾಯಿ ಖರ್ಚು ಮಾಡಿ ಕಾಗದಪತ್ರಗಳನ್ನೆಲ್ಲ ಸಂಗ್ರಹಿಸಿದ್ದೇವೆ. ಇದೀಗ ಕಾಗದಪತ್ರಗಳನ್ನು ಮರಳಿಸಿ ಸಾಲ ನೀಡುವುದಿಲ್ಲ ಎಂದರೆ ನಮ್ಮ ಗತಿಯೇನು? ಕಾಗದಪತ್ರಗಳನ್ನು ಹೊಂದಿಸಿಕೊಳ್ಳಲು ಖರ್ಚು ಮಾಡಿರುವ ಹಣ ನೀಡುವವರು ಯಾರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳು, ಈ ಕುರಿತು ಬ್ಯಾಂಕಿನ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಮುಂದಾದಾಗ ಮಾಧ್ಯಮದವರಿಗೆ ತಾವು ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದು ರೈತರನ್ನು ಮತ್ತಷ್ಟು ಕೆರಳಿಸಿತು. ಬ್ಯಾಂಕಿನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಕಾಗದಪತ್ರಗಳನ್ನು ಸಿದ್ಧಪಡಿಸಿಕೊಂಡಿರುವ ರೈತರಿಗೆ ತಲಾ ರು. 1 ಲಕ್ಷ ಪರಿಹಾರ ನೀಡಬೇಕು. ಅಲ್ಲಿಯವರೆಗೆ ಬ್ಯಾಂಕಿನ ಅಧಿಕಾರಿಗಳನ್ನು ಕೂಡಿಹಾಕಿ ಪ್ರತಿಭಟನೆ ನಡೆಸುವುದಾಗಿ ಗ್ರಾಮದ ರೈತರು ಎಚ್ಚರಿಸಿದರು.
ಬಿಳಿ ಹಾಳೆ ಮೇಲೆ ಸಹಿ
ಉತಾರ, ವಂಶವೃಕ್ಷ, ಹಾತ್ ನಕಾಶೆ ಮುಂತಾದ ಹಲವು ಬಗೆಯ ಕಾಗದಪತ್ರಗಳ ಜತೆಯಲ್ಲಿ ಬ್ಯಾಂಕಿನ ಅಧಿಕಾರಿಗಳು ರೈತರಿಂದ ಬಿಳಿ ಹಾಳೆಯ ಮೇಲೆ ಸಹಿ ಮತ್ತು ಹೆಬ್ಬೆಟ್ಟು ಗುರುತು ಹಾಕಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಬಿಳಿ ಹಾಳೆಯ ಮೇಲೆ ರೈತರಿಂದ ಸಹಿ ಮಾಡಿಸಿಕೊಂಡಿರುವ ಕುರಿತು ಗ್ರಾಮಸ್ಥರು ಬ್ಯಾಂಕಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಎಪಿಎಂಸಿ ನಿರ್ದೇಶಕ ಮೋಹನ ಕೋಟಿ, ಗ್ರಾಪಂ ಸದಸ್ಯ ಜಾಫರಸಾಬ ಮದಿಗಾರ, ರೈತರಾದ ಯಲ್ಲಪ್ಪ ಬಣಕಾರ, ಬಸಪ್ಪ ಬಣಕಾರ, ಕರಬಸಪ್ಪ ಬಣಕಾರ, ಶಾಂತಪ್ಪ ಕೋಟಿ, ಜಗದೀಶ ಕೋಟಿ, ಚನ್ನಬಸಪ್ಪ ಕೋಟಿ, ಬಸಪ್ಪ ಮಲ್ಲಣ್ಣನವರ, ಬಸವರಾಜ ಕೋಟಿ, ಬರಮಣ್ಣ ಕೋಟಿ, ಹಾಲಪ್ಪ ಕೋಟಿ, ಸಿ.ಬಿ. ಪಾಟೀಲ, ಚನ್ನವೀರಗೌಡ ಪಾಟೀಲ, ಉಮೇಶ ಕೋಟಿ, ಈಶ್ವರಪ್ಪ ಬಣಕಾರ, ಬಸವಣ್ಣೆಪ್ಪ ಕೋಟಿ, ಮಂಜುಗೌಡ ಪಾಟೀಲ, ಗದಿಗೆಪ್ಪಗೌಡ ಪಾಟೀಲ, ಭರಮಗೌಡ ಪಾಟೀಲ, ಗುಂಡಪ್ಪ ಕೋಟಿ, ನಾಗಪ್ಪ ಕೋಟಿ ಉಪಸ್ಥಿತರಿದ್ದರು.
ನಡೆದಿದ್ದೇನು?
ತಾವರೆಗೊಪ್ಪ, ಹೇರೂರು, ಹಿರೇಬಾಸೂರು ಗ್ರಾಮಗಳಿಗೆ ಭೇಟಿ ನೀಡಿದ ಬ್ಯಾಂಕಿನ ಅಧಿಕಾರಿಗಳು ಪ್ರತಿ ಎಕರೆಗೆ ರು. 1 ಲಕ್ಷದ ವರೆಗೆ ಸಾಲ ನೀಡುವುದಾಗಿ ಹೇಳಿ ರೈತರಿಂದ ಹತ್ತಾರು ಬಗೆಯ ದಾಖಲೆ ಪತ್ರಗಳನ್ನು ಸಂಗ್ರಹಿಸಿದ್ದಾರೆ. ಈಗ ರೈತರ ಕಾಗದಪತ್ರ ಮರಳಿಸಿದ ಅಧಿಕಾರಿಗಳು ಸಾಲ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಕೆರಳಿದ ರೈತರು ಬ್ಯಾಂಕಿನ ಮೂವರು ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿಕೊಂಡು ಅವರನ್ನು ಮಾರುತಿ ದೇವಸ್ಥಾನದಲ್ಲಿ ಕೂಡಿ ಹಾಕಿ ತರಾಟೆಗೆ ತೆಗೆದುಕೊಂಡರು. ಕಾಗದಪತ್ರಗಳನ್ನು ಸಿದ್ಧಪಡಿಸಿಕೊಂಡಿರುವ ರೈತರಿಗೆ ತಲಾ ರು. 1 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.