ಹಾವೇರಿ

ಸಮಾವೇಶಕ್ಕೆ ವರ್ಷ: ಕೆಜೆಪಿ ಹೊಸ ಹಾದಿ!

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 8
ಕಟ್ಟಿ ಬೆಳೆಸಿದ ಬಿಜೆಪಿಯಿಂದ ಸಿಡಿದೆದ್ದು ಬಿ.ಎಸ್. ಯಡಿಯೂರಪ್ಪ ಕಟ್ಟಿದ ಕರ್ನಾಟಕ ಜನತಾ ಪಕ್ಷ ಒಂದು ವರ್ಷ ಪೂರೈಸಿದೆ. ಕೆಜೆಪಿ ಉದಯಕ್ಕೆ ಕಾರಣವಾದ ಹಾವೇರಿ ಸಮಾವೇಶಕ್ಕೂ ಡಿ. 9ಕ್ಕೆ ಸರಿಯಾಗಿ ಒಂದು ವರ್ಷವಾಗಿದೆ.
ಹೊಸ ಹುಟ್ಟು ಪಡೆಯೋಣ, ಹೊಸ ನಾಡ ಕಟ್ಟೋಣ ಎಂಬ ಘೋಷ ವಾಕ್ಯದೊಂದಿಗೆ ಜನ್ಮ ತಾಳಿದ ಕೆಜೆಪಿ, ಈ ಒಂದು ವರ್ಷದ ಅವಧಿಯಲ್ಲಿ ಹಲವು ಏಳುಬೀಳುಗಳನ್ನು ಕಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ 6 ಜನರು ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರೊಂದಿಗಿದ್ದು, ಆನಂತರವೂ ಅವರನ್ನು ಬೆಂಬಲಕ್ಕೆ ನಿಂತಿದ್ದ ಅನೇಕರು ಕೆಜೆಪಿ ಸೇರಿ ಈಗ ಮಾಜಿ ಆಗಿದ್ದಾರೆ. ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆ ನಡೆಸುತ್ತಿರುವ ಮಧ್ಯೆಯೇ ಮರಳಿ ಗೂಡಿಗೆ ಸೇರುವ ನಿಟ್ಟಿನಲ್ಲಿಯೂ ಪ್ರಯತ್ನಗಳು ಸಾಗಿವೆ. ಹಿಂದೆ ಬಿಜೆಪಿ ವಿರುದ್ಧವೇ ಸೆಟೆದು ನಿಂತಿದ್ದವರು ಈಗ ಮಾತೃಪಕ್ಷದ ಬಗ್ಗೆ ಒಲವು ತೋರುತ್ತಿದ್ದಾರೆ. ಇದೆಲ್ಲವೂ ಒಂದೇ ವರ್ಷದ ಅವಧಿಯಲ್ಲಿ ಆಗಿರುವ ರಾಜಕೀಯ ಸ್ಥಿತ್ಯಂತರ ಎನ್ನಬಹುದು.
ಆಗ ಹಾವು-ಮುಂಗುಸಿ
ಕೆಜೆಪಿ ಉದಯಕ್ಕೂ ಮುನ್ನ ನಡೆದ ಅನೇಕ ರಾಜಕೀಯ ಬೆಳವಣಿಗೆಗಳಿಂದ ಬಿಜೆಪಿ ಹಾಗೂ ಯಡಿಯೂರಪ್ಪ ನಡುವಿನ ಸಂಬಂಧ ಹಳಸಲಾರಂಭಿಸಿತ್ತು. ಬಿಜೆಪಿ ನಾಯಕರು ಬಿಎಸ್ವೈ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ಬಿಎಸ್ವೈ ತಾವು ಜೈಲಿಗೆ ಹೋಗಲು, ತಮ್ಮ ವಿರುದ್ಧ ಆರೋಪಗಳಿಗೆಲ್ಲ ಬಿಜೆಪಿ ನಾಯಕರೇ ಕಾರಣ ಎಂದು ಹೇಳುತ್ತಿದ್ದರು. ಯಡಿಯೂರಪ್ಪ ಇಲ್ಲದೆ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ ಎಂಬ ಹಮ್ಮು ಬಿಜೆಪಿ ನಾಯಕರಲ್ಲಿತ್ತು. ಯಡಿಯೂರಪ್ಪ ಬೆಂಬಲಿಗರನೇಕರನ್ನು ಬಿಜೆಪಿ ಅಮಾನತುಗೊಳಿಸಿತು. ಅವರನ್ನು ಹಣಿಯಲು ಸಾಧ್ಯವಾದ ಎಲ್ಲ ರೀತಿಯ ಕಸರತ್ತು ಬಿಜೆಪಿಯಿಂದ ಆಯಿತು. ಆಗ ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿದ ಯಡಿಯೂರಪ್ಪ ಅದರ ಅಧಿಕೃತ ಚಾಲನೆಗೆ ಮುಹೂರ್ತ ನಿಕ್ಕಿ ಇಟ್ಟದ್ದು ಡಿ. 9ರಂದು, ಹಾವೇರಿಯಲ್ಲಿ.
ಕೈಕೊಟ್ಟವರು ಅನೇಕರು
ದಶಕಗಳ ಕಾಲ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಲು ಅವಿರತ ಶ್ರಮಿಸಿದ ಯಡಿಯೂರಪ್ಪ, ಹಲವು ಆರೋಪಗಳ ಕಾರಣದಿಂದ ತಮ್ಮ ಪಕ್ಷದವರಿಂದಲೇ ವಿರೋಧ ಎದುರಿಸಬೇಕಾಯಿತು. ಅನಿವಾರ್ಯವಾಗಿ ಮಾತೃ ಪಕ್ಷ ತೊರೆಯಬೇಕಾಯಿತು. ಯಡಿಯೂರಪ್ಪ ಸಿಎಂ ಆಗಿದ್ದಾಗ ಬಲಗೈ, ಎಡಗೈ ಎಂದು ಕರೆಸಿಕೊಳ್ಳುತ್ತಿದ್ದ ಅನೇಕರು ಆರಂಭದಲ್ಲಿ ಅವರ ಬೆಂಬಲಕ್ಕೆ ನಿಂತಿದ್ದರು. ಕೆಲವರು ಬಿಎಸ್ವೈ ಜತೆ ಕೆಜೆಪಿಗೆ ಬಂದರೆ, ಮತ್ತೆ ಕೆಲವರು ಬಿಜೆಪಿಯಲ್ಲೇ ಉಳಿದರು. ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಶೇ. 10ರಷ್ಟು ಮತ ಪಡೆದು ಗಮನಾರ್ಹ ಸಾಧನೆಯನ್ನೇ ಮಾಡಿತು. ಆ ಮೂಲಕ ಪ್ರಾದೇಶಿಕ ಪಕ್ಷದ ಮಾನ್ಯತೆಯನ್ನೂ ಪಡೆಯಿತು. ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೂ ಹೋರಾಟ ಕೈಬಿಟ್ಟಿರಲಿಲ್ಲ. 6 ಶಾಸಕರು, ಮಾಜಿ ಶಾಸಕರ ಪಡೆಯನ್ನು ಕಟ್ಟಿಕೊಂಡು ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸವನ್ನೂ ಮಾಡಿದರು. ಈಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲೂ ಏಕಾಂಗಿ ಹೋರಾಟ ನಡೆಸುವ ಮೂಲಕ ತಮ್ಮಲ್ಲಿನ್ನೂ ಹೋರಾಟದ ಕಿಚ್ಚು ಇದೆ ಎಂಬುದನ್ನು ಸಾಬೀತುಪಡಿಸಿದರು.
ಮತ್ತೆ ನಂಟು
ಬಿಜೆಪಿ ಹಾಗೂ ಯಡಿಯೂರಪ್ಪ ನಡುವಿನ ಗುದ್ದಾಟ ಈಚೆಗೆ ಸ್ವಲ್ಪ ಕಡಿಮೆಯಾಗುತ್ತ ಬಂತು. ಬಿಜೆಪಿ ವಿರುದ್ಧ ಬಿಎಸ್ವೈ ತೋರಿದ್ದ ಆಕ್ರೋಶಗಳು ಲೋಕಸಭೆ ಚುನಾವಣೆ ಸಮೀಪಿಸುತ್ತಲೇ ತಣ್ಣಗಾಗುತ್ತ ಬಂದವು. ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಬಿಜೆಪಿಗೂ ಯಡಿಯೂರಪ್ಪ ಅನಿವಾರ್ಯತೆ ಕಂಡುಬಂತು. ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಘೋಷಣೆಯಾಗುತ್ತಿದ್ದಂತೆ ಯಡಿಯೂರಪ್ಪನವರನ್ನು ಪಕ್ಷಕ್ಕೆ ಮರಳಿ ತರುವ ಪ್ರಯತ್ನವೂ ನಡೆಯಿತು. ಈ ಪ್ರಕ್ರಿಯೆ ಈಗಲೂ ಮುಂದುವರಿದಿದೆ. ಮತ್ತೆ ಡಿ. 9 ಬಂದಿದೆ. ಬಿಜೆಪಿಗೆ ಸೇರಬೇಕೋ ಅಥವಾ ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕೋ ಎಂಬ ನಿಟ್ಟಿನಲ್ಲಿ ಚರ್ಚಿಸಲು ಕೆಜೆಪಿ ಸಭೆ ಕರೆಯಲಾಗಿದೆ. ಈ ಸಭೆ ಕೆಜೆಪಿ ಹಾಗೂ ಬಿಜೆಪಿ ಎರಡಕ್ಕೂ ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ವರ್ಷದ ಹಸುಗೂಸು ಕೆಜೆಪಿ ಆಯಸ್ಸನ್ನೂ ಸೋಮವಾರ ನಡೆಯುವ ಸಭೆ ನಿರ್ಧರಿಸಲಿದೆ.
ಗಮನ ಸೆಳೆದ ಹಾವೇರಿ
ಪಕ್ಷದ ಅಧಿಕೃತ ಉದ್ಘಾಟನೆಗಾಗಿ ಕಳೆದ ವರ್ಷ ಡಿ. 9ರಂದು ಹಾವೇರಿಯಲ್ಲಿ ಕೆಜೆಪಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆಗ ಹಾವೇರಿ ರಾಜ್ಯದ ಗಮನ ಸೆಳೆದಿತ್ತು. ಎಷ್ಟು ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ, ಎಷ್ಟು ಲಕ್ಷ ಜನ ಸೇರುತ್ತಾರೆ ಎಂಬ ಕುತೂಹಲ ಸೃಷ್ಟಿಸಿತ್ತು. ಸಮಾವೇಶದಲ್ಲಿ ಜನ ಸೇರಿದರು, ಹಾವೇರಿ ಜಿಲ್ಲಾ ಬಿಜೆಪಿಯ ಬಹುತೇಕ ಜನಪ್ರತಿನಿಧಿಗಳು ಕೆಜೆಪಿ ಸೇರಿದ್ದರು. ಅಂಥ ಐತಿಹಾಸಿಕ ಸಮಾವೇಶಕ್ಕೆ ಹಾವೇರಿ ಜನತೆಯೂ ಸಾಕ್ಷಿಯಾಗಿದ್ದರು.




ಇಂದಿನ ಸಭೆಯಲ್ಲಿ ನಿರ್ಧಾರ
ಯಡಿಯೂರಪ್ಪನವರ ಉತ್ತಮ ನಾಯಕತ್ವವನ್ನು ಜನ ಬೆಂಬಲಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲೂ ಕೆಜೆಪಿ ಗಣನೀಯ ಸಾಧನೆ ಮಾಡಿದೆ. ಆದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ 6 ತಿಂಗಳಲ್ಲೇ ಜನರಿಗೆ ಕಾಂಗ್ರೆಸ್ ಆಡಳಿತ ಬೇಸರ ತಂದಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೋದಿ ಪ್ರಧಾನಿ ಆಗಲು ಎಲ್ಲರೂ ಕೈಜೋಡಿಸುವ ಅಗತ್ಯವಿದೆ. ಸೋಮವಾರ ನಡೆಯುವ ಕೆಜೆಪಿ ಸಭೆಯಲ್ಲಿ ಈ ನಿಟ್ಟಿನಲ್ಲಿ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುವುದು.
ಣ ನೆಹರೂ ಓಲೇಕಾರ
ಮಾಜಿ ಶಾಸಕ
ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.