ಹಾವೇರಿ

ಪಂಚಾಯ್ತಿ ನೌಕರರ ಕಳ್ಳ ರಜೆಗೆ ಬೀಳಲಿದೆ ಬ್ರೇಕ್

Published On :

ಹಾವೇರಿ: ಕಚೇರಿಯಲ್ಲಿ ಅಧಿಕಾರಿಗಳು, ನೌಕರರು ಇರುವುದೇ ಇಲ್ಲ. ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂಬ ದೂರು ಸಾಮಾನ್ಯ. ಆದರೆ ಇನ್ಮುಂದೆ ನೌಕರರ ಕಳ್ಳ ರಜೆಗೆ ಕಡಿವಾಣ ಬೀಳಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳು, ಸಿಬ್ಬಂದಿಗೆ ಬಯೋವುಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶಿಸಿದೆ.
ಡಿ. 31ರಿಂದ ಪಂಚಾಯತ್ ರಾಜ್ ವ್ಯವಸ್ಥೆಯ ಮೂರೂ ಹಂತದ ಸಂಸ್ಥೆಗಳ ನೌಕರಿಗೆ ಬಯೋವುಟ್ರಿಕ್ ಪದ್ಧತಿಯಲ್ಲಿ ಹಾಜರಾತಿ ಹಾಕಬೇಕು. ಈ ಸಂಬಂಧವಾಗಿ ಇಲಾಖೆ ನ. 14ರಂದು ಸುತ್ತೋಲೆ ಹೊರಡಿಸಿದೆ. ಇದರಿಂದ ಅಧಿಕಾರಿಗಳು, ನೌಕರರು ಸಾರ್ವಜನಿಕರಿಗೆ ಸುಳ್ಳು ಹೇಳಿ ಕಚೇರಿಗೆ ಸಮಯಕ್ಕೆ ಸರಿಯಾಗಿ ಬರದೇ ನಿರ್ಲಕ್ಷ್ಯ ವಹಿಸುವುದಕ್ಕೆ ಕಡಿವಾಣ ಬೀಳಲಿದೆ.
ಚಲನವಲನ ಪುಸ್ತಕ ನಿರ್ವಹಣೆ: ಬಯೋವುಟ್ರಿಕ್ ಹಾಜರಾತಿ ಜತೆಗೆ ಅಧಿಕಾರಿ, ಸಿಬ್ಬಂದಿ ಚಲನ-ವಲನ ಪುಸ್ತಕವನ್ನು ಕಡ್ಡಾಯವಾಗಿ ನಿರ್ವಹಿಸಲು ಸೂಚನೆ ನೀಡಲಾಗಿದೆ. ಹೀಗಾಗಿ, ಕಚೇರಿಯಿಂದ ಅನ್ಯ ಕಾರ್ಯ ನಿಮಿತ್ತ ಹೊರ ಹೋಗುವ ಸಮಯವನ್ನು ನಮೂದಿಸುವುದು ಅನಿವಾರ್ಯವಾಗಿದೆ. ಸರ್ಕಾರದ ಸಚಿವಾಲಯಗಳಲ್ಲಿ ಈಗಾಗಲೇ ಬಯೋವುಟ್ರಿಕ್ ಅಳವಡಿಸಲಾಗಿದೆ. ಆದರೆ, ಈ ವ್ಯವಸ್ಥೆ ಅಳವಡಿಸದ ಕೆಳ ಹಂತದ ಕಚೇರಿಗಳ ಅಧಿಕಾರಿಗಳು ಹಾಗೂ ನೌಕರರ ಹಾಜರಾತಿಯಲ್ಲಿ ಏರುಪೇರು, ಸಮಯ ಪಾಲನೆಯಲ್ಲಿ ಅಶಿಸ್ತು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ. ಹೀಗಾಗಿ, ಇನ್ಮುಂದೆ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿ ಕಚೇರಿಗೆ ವಿಳಂಬವಾಗಿ ಬರುವುದನ್ನು ಅಲ್ಪ ಪ್ರಮಾಣದಲ್ಲಿ ತಗ್ಗಿಸಬಹುದಾಗಿದೆ.
ಸ್ವಂತ ನಿಧಿಯಿಂದ ವೆಚ್ಚ ಭರಿಸಿ: ಬಯೋವುಟ್ರಿಕ್ ಪದ್ಧತಿಯನ್ನು ಅಳವಡಿಸಿಕೊಳ್ಳಲು ತಗಲುವ ವೆಚ್ಚವನ್ನು ಜಿಪಂ, ತಾಪಂ, ಗ್ರಾಪಂಗಳು ತಮ್ಮ ನಿಧಿಯಿಂದ ಬಳಸಿಕೊಳ್ಳಬಹುದಾಗಿದೆ. ಅಧಿಕಾರಿಗಳು ತಮ್ಮ ಸಿಬ್ಬಂದಿ ಸಂಖ್ಯೆಗಳಿಗೆ ಅನುಗುಣವಾಗಿ ರೀಡರ್ ಅನ್ನು ಖರೀದಿಸಿ ಇದರೊಂದಿಗೆ ಗಣಕಯಂತ್ರ, ಅಂತರ್ಜಾಲ ಸಂಪರ್ಕ ವ್ಯವಸ್ಥೆಗಾಗಿ ಯಂತ್ರಗಳನ್ನು ಇ-ಆಡಳಿತ ಇಲಾಖೆಯು ಗುರುತಿಸುವ ಮಾರಾಟಗಾರರಿಂದ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಬಯೋವುಟ್ರಿಕ್ ಉಪಕರಣಗಳನ್ನು ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮ, 1999 ಮತ್ತು ನಿಯಮಗಳು 2000ನ್ನು ಪಾಲಿಸಬೇಕಿದೆ. ಇದಕ್ಕೆ ಬೇಕಾಗುವ ತಂತ್ರಾಂಶವನ್ನು ಎನ್‌ಐಸಿ-ಇ-ಗೌವರ್ನೆನ್ಸ್ ಇಲಾಖೆಯವರಿಂದ, ಬಯೋವುಟ್ರಿಕ್ ಪದ್ಧತಿಯನ್ನು ತಮ್ಮ ಕಚೇರಿಗಳಲ್ಲಿ ಅನುಷ್ಠಾನಗೊಳಿಸಲು ಸಿಸ್ಟ್‌ಂ ಅನಾಲೈಸ್ಡ್, ಪ್ರೋಗ್ರಾಮರ್ ಸೇವೆಯನ್ನು ತಾತ್ಕಾಲಿಕವಾಗಿ ಇ-ಆಡಳಿತ ಇಲಾಖೆ ಮೂಲಕ ಪಡೆಯಬಹುದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆ ತಿಳಿಸಿದೆ.
ಗ್ರಾಪಂಗಳು ಇಲ್ಲಿವರೆಗೂ ಅಂತರ್ಜಾಲ ಸಂಪರ್ಕ ಹೊಂದಿಲ್ಲ
ಪಂಚಾಯತ್ ರಾಜ್ಯ ಇಲಾಖೆಯ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಡ್ಡಾಯಗೊಳಿಸಿರುವ ಬಯೋವುಟ್ರಿಕ್ ಹಾಜರಾತಿ ಪದ್ಧತಿಯು ರಾಜ್ಯದಲ್ಲಿ ಸಂಪೂರ್ಣವಾಗಿ ಜಾರಿಗೆ ಬರುವುದು ಅಷ್ಟು ಸುಲಭವೇನಲ್ಲ. ರಾಜ್ಯದ ಅನೇಕ ಗ್ರಾಪಂಗಳು ಇಲ್ಲಿವರೆಗೂ ಅಂತರ್ಜಾಲ ಸಂಪರ್ಕ ಹೊಂದಿಲ್ಲ. ಈಗಾಗಲೇ ಜಾರಿಯಲ್ಲಿರುವ ಪಂಚತಂತ್ರ, ಸಕಾಲ, ಉದ್ಯೋಗ ಖಾತ್ರಿ ಯೋಜನೆ ಕೆಲಸ ಕಾರ್ಯಗಳನ್ನು ಅಂತರ್ಜಾಲ ಸಂಪರ್ಕ ಹೊಂದಿರದ ಅನೇಕ ಗ್ರಾಪಂಗಳ ಅಧಿಕಾರಿ, ಸಿಬ್ಬಂದಿ ನಗರ, ಪಟ್ಟಣ ಪ್ರದೇಶಗಳಲ್ಲಿ ಕುಳಿತು ಇಲಾಖೆಯ ವೆಬ್‌ಸೈಟ್‌ಗೆ ಮಾಹಿತಿ ಅಪ್‌ಲೋಡ್ ಮಾಡುತ್ತಾರೆ. ಇಂತಹ ಸಮಯದಲ್ಲಿ ಬಯೋವುಟ್ರಿಕ್ ಹಾಜರಾತಿ ಅಂತರ್ಜಾಲ ಸಿಗ್ನಲ್‌ನ ಕೊರತೆಗೆ ಬಲಿಯಾಗದಂತೆ ತಡೆಯಲು ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ನೌಕರರು ಕಚೇರಿಗೆ ಸರಿಯಾಗಿ ಬರುವಂತೆ ಮಾಡಲು ಈ ವ್ಯವಸ್ಥೆ ಅಗತ್ಯವಾಗಿದ್ದು, ಯೋಜನೆ ಜಾರಿಗೆ ಎದುರಾಗಬಹುದಾದ ತೊಡಕನ್ನು ನಿವಾರಿಸುವ ನಿಟ್ಟಿನಲ್ಲೂ ಸರ್ಕಾರ ಗಮನ ಹರಿಸಬೇಕಿದೆ.

 ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.