ಶುದ್ಧ ಪರಿಸರ ನಮ್ಮದಾಗಲಿ: ಬುಕ್ಕಶೆಟ್ಟಿ
ರಾಣಿಬೆನ್ನೂರು: ಭೂಮಿಯ ಮೇಲೆ ಬಾಳಿ ಬದುಕಲು ಅಗತ್ಯವಾಗಿರುವ ಶುದ್ಧ ಗಾಳಿ ಮತ್ತು ಆಹಾರ ನೀಡುವ ಪರಿಸರದ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಇಲ್ಲಿನ ಮಾರುತಿ ನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಲ್.ಸಿ. ಬುಕ್ಕಶೆಟ್ಟಿ ನುಡಿದರು.
ಪರಿಸರ ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಾಲೇದಿನ ರಾಷ್ಟ್ರೀಯ ಹಸಿರು ಪಡೆ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮನೆಗಳ ಸುತ್ತ ಸ್ವಚ್ಛತೆ ಕಾಪಾಡಿ, ಗಿಡ-ಮರ ಬೆಳೆಸಿ. ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಮರಗಳನ್ನು ಉರುಳಿಸುವುದು ವಿಷಾದನೀಯ. ಮನೆಗೊಂದು ಮರ ಬೆಳೆಸಲು ಮುಂದಾಗಬೇಕು ಎಂದರು.
ಮಾರುತಿ ಭಜಂತ್ರಿ ಪರಿಸರ ರಕ್ಷಣೆ ಕುರಿತು, ರಂಗನಗೌಡರ ಪ್ಲಾಸ್ಟಿಕ್ ಬಳಕೆ ಮತ್ತು ಹಾನಿ ಬಗ್ಗೆ ಉಪನ್ಯಾಸ ನೀಡಿದರು. ಚರ್ಚಾ ಹಾಗೂ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ, ವಿನಾಯಕ ಚಿನ್ನಿಕಟ್ಟಿ ಮಾತನಾಡಿದರು. ರಾಷ್ಟ್ರೀಯ ಹಸಿರುಪಡೆ ಸಂಚಾಲಕ ಬಸವರಾಜಪ್ಪ ಡಿ.ಜಿ., ಬೆಳವಿಗಿ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಎಚ್.ಎಂ. ದೊಡ್ಡಬಿಲ್ಲ, ಎನ್.ಬಿ. ಹಕ್ಕೆರ ಇದ್ದರು.
--
ಹಕ್ಕು ಪಡೆಯಲು ಸಂಘಟಿತ ಹೋರಾಟ
ಹಾನಗಲ್ಲ: ನಾಗರಿಕ ಸಮಾಜದಲ್ಲಿ ಶೋಷಣೆ ಕಾನೂನು ಬಾಹಿರ. ಸಂಘಟಿತ ಹೋರಾಟದ ಮೂಲಕ ನಮ್ಮ ಹಕ್ಕನ್ನು ಪಡೆಯುವುದೂ ಅನಿವಾರ್ಯವಾಗುತ್ತಿದೆ ಎಂದು ನ್ಯಾವಾದಿ ರವಿಬಾಬು ಪೂಜಾರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಸಹಯೋಗದಲ್ಲಿ ನಡೆದ ವಿಶ್ವ ಮಾನವ ಹಕ್ಕು ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಆಡಳಿತ ವ್ಯವಸ್ಥೆ ಜನಪರವಾಗಿರಬೇಕು. ಮನುಷ್ಯನಿಗೆ ಆರ್ಥಿಕ, ಸಾಮಾಜಿಕ, ಪರಿಸರದ ಹಕ್ಕೂ ಇದೆ. ಜೀವಪರ ಆಲೋಚನೆಗೆ ಇಂಬು ನೀಡಿ ಮನುಷ್ಯ ಬದುಕಬೇಕು ಎಂದರು.
ನ್ಯಾಯವಾದಿ ವೀಣಾ ಬ್ಯಾತನಾಳ ಮಾತನಾಡಿ, ಬ್ರಿಟಿಷ್ ಕಾಲದಿಂದಲೇ ನಮ್ಮ ದೇಶದಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ. ಪ್ರಾಮಾಣಿಕ ದುಡಿಮೆ ಇಲ್ಲದೆ ಭ್ರಷ್ಟತನದಿಂದ ಹಣ ಸಂಪಾದಿಸುವ, ಸುಖ ಅನುಭವಿಸುವ ಹಂಬಲ ಹೆಚ್ಚುತ್ತಿದೆ. ಚುನಾವಣೆಗಳು ಪ್ರಾಮಾಣಿಕವಾಗಿ ನಡೆಯಬೇಕು. ಹಣವನ್ನು ಬೆನ್ನಟ್ಟಿದ ಅಧಿಕಾರ ಭ್ರಷ್ಟ ವ್ಯವಸ್ಥೆಗೆ ನಾಂದಿ ಹಾಡುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಾಚಾರ್ಯ ಎಸ್.ಸಿ. ಪೀರಜಾದೆ, ಹಕ್ಕುಗಳ ಉಲ್ಲಂಘನೆ ಆದಾಗ ಪ್ರತಿಭಟಿಸಿ ಕ್ರಾಂತಿಗಳೇ ನಡೆದಿವೆ ಎಂದರು. ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ತಾಲೂಕು ಘಟಕದ ಅಧ್ಯಕ್ಷ ಗಿರೀಶ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು.
ಶಫಿಯಾಬಾನು ಶಿರಮಾಪುರ ಪ್ರಾರ್ಥಿಸಿದರು. ಎನ್ನೆಸ್ಸೆಸ್ ಅಧಿಕಾರಿ ಮಹೇಂದ್ರ ಬಾರಿಕರ ಸ್ವಾಗತಿಸಿದರು. ಸಾಹಿತಿ ಮಾರುತಿ ಶಿಡ್ಲಾಪುರ ನಿರೂಪಿಸಿದರು. ಉಪನ್ಯಾಸಕ ಎಸ್.ಬಿ. ಕಮಾಟಿ ವಂದಿಸಿದರು.
--
ವಲಯ ಮಟ್ಟಕ್ಕೆ ಆಯ್ಕೆ
ಹಿರೇಕೆರೂರು: ತಾಲೂಕಿನ ರಟ್ಟಿಹಳ್ಳಿ ಲಯನ್ಸ್ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸ್ಥಳೀಯ ತರಳಬಾಳು ಕನ್ನಡ ಶಾಲೆಯಲ್ಲಿ ಜರುಗಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉತ್ತಮ ಸಾಧನೆಗೈದು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯರಾದ ಅಂಬಿಕಾ, ಶ್ವೇತಾ, ನಿಸರ್ಗ ಹನಗೋಡಿ, ಪ್ರಿಯಾ, ಕವಿತಾ, ಗೌತಮ ನಾಡಿಗೇರ, ಮನೋಜ ಹಾದಿಮನಿ, ಮನೋಜ ಹುಲ್ಮನಿ, ಮುಬಾರಕ ಅವರನ್ನು ಮುಖ್ಯ ಶಿಕ್ಷಕ ವಿ.ಎಸ್. ಅರ್ಕಾಚಾರಿ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

