ರೈತರ ಪ್ರತಿಭಟನೆ 4ನೇ ದಿನಕ್ಕೆ
ಹಾನಗಲ್ಲ: ಇಲ್ಲಿನ ಕೆಸಿಸಿ ಬ್ಯಾಂಕ್ ಶಾಖೆ ಎದುರು ರೈತರು ನಡೆಸುತ್ತಿರುವ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ರಸ್ತೆ ತಡೆ ನಡೆಸಿದರು.
ಧಾರವಾಡದ ಕೆಸಿಸಿ ಬ್ಯಾಂಕ್ ರೈತರಿಗೆ ಬಿಡುಗಡೆಗೊಂಡಿರುವ ಬೆಳೆವಿಮೆ ಪರಿಹಾರವನ್ನು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಬದಲು ತಮ್ಮ ಶಾಖೆಗಳ ಮೂಲಕವೇ ವಿತರಿಸುವುದಾಗಿ ಪಟ್ಟು ಹಿಡಿದಿರುವುದು ರೈತರನ್ನು ಕೆರಳಿಸಿದೆ. ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಚನ್ನಬಸನಗೌಡ ಪಾಟೀಲ, ಕೆಸಿಸಿ ಬ್ಯಾಂಕುಗಳಲ್ಲಿ ಹೊಸದಾಗಿ ರು. 500 ಠೇವಣಿ ಇಟ್ಟು ಖಾತೆ ತೆರೆಯುವುದು ರೈತರಿಗೆ ಆರ್ಥಿಕ ಹೊರೆಯಾಗುತ್ತದೆ. ಹಾವೇರಿ ಜಿಲ್ಲೆಯಲ್ಲಿ ಲಕ್ಷಕ್ಕೂ ಅಧಿಕ ರೈತರು ಬೆಳೆವಿಮೆ ಪರಿಹಾರ ಪಡೆಯುತ್ತಿದ್ದಾರೆ. ಹೊಸ ಖಾತೆಗಳನ್ನು ತೆರೆಯುವುದರಿಂದ ಕೆಸಿಸಿ ಬ್ಯಾಂಕಿಗೆ ಭಾರಿ ಹಣ ಉಳಿಕೆಯಾಗುತ್ತದೆ. ಕೆಸಿಸಿ ಬ್ಯಾಂಕ್ ನೀಡಿರುವ ನಿರ್ದೇಶನ ರೈತ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಸಂಘಟನಾ ಕಾರ್ಯದರ್ಶಿ ಅಡಿವೆಪ್ಪ ಆಲದಕಟ್ಟಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಎಸ್ಸೆಸ್ ಬ್ಯಾಂಕುಗಳ ಮೂಲಕ ರೈತರಿಗೆ ಪರಿಹಾರ ಬಿಡುಗಡೆಗೊಳ್ಳುತ್ತಿದೆ. ಈ ಕುರಿತು ವಿಮಾ ಕಂಪನಿ ಲಿಖಿತ ಆದೇಶ ನೀಡಿದೆ. ಆದರೆ ಧಾರವಾಡ ಕೆಸಿಸಿ ಬ್ಯಾಂಕ್ ವಿಮಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕೆಸಿಸಿ ಬ್ಯಾಂಕ್ ಮೂಲಕವೇ ಪರಿಹಾರ ಬಿಡುಗಡೆ ಮಾಡುವಂತೆ ಪ್ರತ್ಯೇಕ ಆದೇಶವನ್ನು ಪಡೆದುಕೊಂಡಿದೆ. ಇದು ಕೆಸಿಸಿ ಬ್ಯಾಂಕ್ ಹಾಗೂ ವಿಮಾ ಕಂಪನಿ ರೈತರಿಗೆ ಮಾಡುತ್ತಿರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಮಸ್ಯೆಯನ್ನು ಕೆಸಿಸಿ ಬ್ಯಾಂಕ್ ಗಂಭೀರವಾಗಿ ಪರಿಗಣಿಸಿ ಬಗೆಹರಿಸದಿದ್ದರೆ ಇನ್ನೂ ಉಗ್ರ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದರು.
ರೈತ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಅಕ್ಕಿವಳ್ಳಿ, ಗದಿಗೆಪ್ಪ ಗುಡಗೆರಿ, ರಮೇಶ ಕೂಡಲ, ಪರಮೇಶ ಪೂಜಾರ, ನಾಗರಾಜ ಗಡೆಪ್ಪನವರ, ಬಸವರಾಜ ಗಡೆಪ್ಪನವರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

