ಹಾವೇರಿ

ಕೃಷಿ ಸಾಲನೀತಿ ಅವೈಜ್ಞಾನಿಕ: ಬೊಮ್ಮಾಯಿ

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಡಿ. 16
ಕೇಂದ್ರದ ಕೃಷಿ ಸಾಲ ನೀತಿ ಅವೈಜ್ಞಾನಿಕವಾಗಿದೆ. ಸಹಕಾರಿ ಬ್ಯಾಂಕುಗಳ ಸಾಲದ ವ್ಯವಸ್ಥೆ ರೈತರ ಆತ್ಮಹತ್ಯೆಗೆ ಎಡೆ ಮಾಡಿಕೊಟ್ಟಿದೆ. ನೂತನ ಸಾಲ ನೀತಿಯನ್ನು ತಕ್ಷಣ ಕೇಂದ್ರ ಜಾರಿಗೆ ತರಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಸೋಮವಾರ ನಡೆದ ಕೃಷಿ ಉತ್ಸವ ಉದ್ಘಾಟಿಸಿದ ಅವರು, ದೇಶದಲ್ಲಿ ಶೇ. 70ರಷ್ಟು ಜನಸಂಖ್ಯೆ ಕೃಷಿ ಆಧಾರಿತವಾಗಿದೆ. ಕೇಂದ್ರಕ್ಕೆ ಶೇ. 60ರಷ್ಟು ಆದಾಯ ಕೃಷಿಯಿಂದ ಬರುವ ಕಾಲವಿತ್ತು. ಕಳೆದ 65 ವರ್ಷಗಳಲ್ಲಿ ಕೃಷಿಗೆ ಕೇವಲ ಶೇ. 5ರಷ್ಟು ಮೂಲ ಬಂಡವಾಳ ಹೂಡಿಕೆಯಾಗಿದ್ದರಿಂದ ಆದಾಯ ಶೆ. 18ಕ್ಕಿಳಿದಿದೆ. ಕೇಂದ್ರದ ನಿರ್ಲಕ್ಷ್ಯದಿಂದ ರೈತರು ಸಾವಿನ ಮನೆ ಬಾಗಿಲಲ್ಲಿ ನಿಲ್ಲುವಂತಾಗಿದೆ ಎಂದು ವಿಷಾದಿಸಿದರು.
ಕೇಂದ್ರ ಒಂದೆಡೆ ಮಾರುಕಟ್ಟೆ ಆಧಾರಿತ ಕೃಷಿ ನೀತಿಯನ್ನು ಹೇಳುತ್ತಿದೆ. ಅದು ನಮ್ಮ ರೈತರಿಗೆ ಲಾಭದಾಯಕವಾಗಿಲ್ಲ. ವಿದೇಶ ವ್ಯಾಪಾರಿಗಳ ಅನುಕೂಲ ಮಾಡಿಕೊಡುವತ್ತ ಚಿಂತಿಸಿರುವ ಸರ್ಕಾರ ನಮ್ಮ ರೈತರಿಗೆ ಸರಿಯಾದ ಮಾರುಕಟ್ಟೆ ಸೌಲಭ್ಯ, ಬೆಳೆಗೆ ಸೂಕ್ತ ಬೆಂಬಲ ಬೆಲೆ, ಬೆಳೆ ಸಂರಕ್ಷಣೆ ವ್ಯವಸ್ಥೆ ಕಲ್ಪಿಸಿಲ್ಲ. ತೋರಿಕೆಗೆ ಬೆಂಬಲ ಬೆಲೆ ನಿಗದಿ ಮಾಡುವುದು ಸರಿಯಲ್ಲ. ರೈತರ ಪರವಾದ ದಿಟ್ಟ ಇಚ್ಛಾಶಕ್ತಿ ರಾಷ್ಟ್ರಮಟ್ಟದಲ್ಲಿ ಪ್ರದರ್ಶನವಾಗಬೇಕು ಎಂದು ಬೊಮ್ಮಾಯಿ ಪ್ರತಿಪಾದಿಸಿದರು.
ಹತ್ಯೆ ಸಂಸ್ಕೃತಿಗೆ ಚಾಲನೆ: ಜೋಶಿ
ಸಂಸದ ಪ್ರಹ್ಲಾದ ಜೋಶಿ ವಿಚಾರಗೋಷ್ಠಿಗಳಿಗೆ ಚಾಲನೆ ನೀಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಕ್ಷಣ ಗೋಹತ್ಯೆ ನಿಷೇಧ ಮಸೂದೆ ಹಿಂಪಡೆಯವ ಮೂಲಕ ಹತ್ಯೆ ಸಂಸ್ಕೃತಿಗೆ ಚಾಲನೆ ನೀಡಿದೆ. ಸಾವಿರಾರು ಗೋವುಗಳನ್ನು ಹತ್ಯೆ ಮಾಡಿ, ಅದರ ಚರ್ಮ ಹಾಗೂ ಮಾಂಸವನ್ನು ಕೇರಳ ಗಡಿಯಿಂದ ವಿದೇಶಕ್ಕೆ ಸಾಗಿಸಲಾಗುತ್ತಿದೆ. ಗೋ ಸಂಸತಿಯ ಅವನತಿಗೆ ಕಾರಣವಾಗುತ್ತಿರುವ ಕಾಂಗ್ರೆಸ್ ಸರ್ಕಾರ ಕಸಾಯಿಖಾನೆಗಳಿಗೆ ಸಬ್ಸಿಡಿ ನೀಡುತ್ತಿದೆ. ಗಾಂಧಿ ನೀತಿ ಪಾಲಿಸುವುದಾಗಿ ಹೇಳುತ್ತಿರುವವರು ಅಹಿಂಸೆಗೆ ಬದ್ಧರಾಗಲಿ ಎಂದು ಸವಾಲೆಸೆದರು.
ದೇಶದ ಇಪ್ಪತ್ತು ಕುಬೇರರು ರು. 40 ಸಾವಿರ ಕೋಟಿ, 40 ಉದ್ಯಮಿಗಳು ರು. 60 ಸಾವಿರ ಕೋಟಿ ಹಣವನ್ನು ಸರ್ಕಾರಕ್ಕೆ ಟೋಪಿ ಹಾಕಿದ್ದಾರೆ. ಅವರಿಂದ ಒತ್ತೆ ಇರಿಸಿಕೊಂಡ ಆಸ್ತಿ ರು. 10 ಲಕ್ಷ ಕೋಟಿ ಇದ್ದರೂ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಮಠಗಳನ್ನು ಮುಜರಾಯಿ ಇಲಾಖೆಗೆ ಸೇರಿಸಲು ಮುಂದಾಗಿದ್ದು ಸರಿಯಲ್ಲ ಎಂದರು.
ಪರಿಹಾರ ಕಲ್ಪಿಸಿ
ವಸ್ತು ಪ್ರದರ್ಶನ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಬಿತ್ತನೆ ಸಮಯದಲ್ಲಿ ರೈತನಿಗೆ ಆಗುತ್ತಿರುವ ಮೋಸ, ವಂಚನೆ, ಕಳಪೆ ಬೀಜ ಪೂರೈಕೆ ತಪ್ಪಿಸಬೇಕು. ಆತ್ಮಹತ್ಯೆ ಮಾಡಿಕೊಂಡ ಮೇಲೆ ಮೊಸಳೆ ಕಣ್ಣೀರು ಸುರಿಸುವ ಬದಲು, ಸಂಕಷ್ಟದಲ್ಲಿರುವಾಗಲೇ ರೈತರ ನೆರವಿಗೆ ಧಾವಿಸಿ. ಕಳಪೆ ಕನಕ ಬೀಜದಿಂದ ಹಾನಿ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ಸರ್ಕಾರ, ಕಂಪನಿ ಮುಂದಾಗಬೇಕು. ಇಲ್ಲವಾದಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಬಿತ್ತುವ ಮೊದಲೇ ಅಡ ಏಕೆ?
ಯೋಜನೆಯ ಪ್ರಾದೇಶಿಕ ನಿರ್ದೇಶಕ ಎನ್. ಜಯಶಂಕರ ಶರ್ಮ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ಬಿತ್ತುವ ಮುನ್ನವೇ ಬೆಳೆಯನ್ನು ವ್ಯಾಪಾರಿಗೆ ಅಡ ಇಡುವ ಪದ್ಧತಿಯನ್ನು ರೈತರು ಕೈಬಿಡಬೇಕು. ಕಂಪ್ಯೂಟರ್‌ನಿಂದ ಅನ್ನ ಸಿಗುವುದಿಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಂಡು, ದೇಶಕ್ಕೆ ಅನ್ನ ಹಾಕುವ ರೈತನ ನೆರವಿಗೆ ಮುಂದಾಗಬೇಕು ಎಂದರು.
ಪ್ರಗತಿಪರ ರೈತ ಜಯದೇವ ಅಗಡಿ, ಕೃಷಿ ಉತ್ಸುವ ಗೌರವಾಧ್ಯಕ್ಷ ಶಂಕರಗೌಡ್ರ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿರಹಟ್ಟಿ ಜಗದ್ಗುರು ಫಕ್ಕೀರ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ, ಉಪಾಧ್ಯಕ್ಷ ನಿಂಗಪ್ಪ ಹರಿಜನ, ಜಿಪಂ ಸದಸ್ಯರಾದ ಶಶಿಧರ ಹೊನ್ನಣ್ಣನವರ, ಸಿ.ಎಸ್. ಪಾಟೀಲ, ಸರೋಜವ್ವ ಆಡಿನ, ಜಂಟಿ ಕೃಷಿ ನಿರ್ದೇಶಕ ಡಾ೤ ಗಣೇಶ ನಾಯ್ಕ, ಎಪಿಎಂಸಿ ಅಧ್ಯಕ್ಷ ವೀರನಗೌಡ ಪಾಟೀಲ ಇದ್ದರು. ಯೋಜನಾ ಅಧಿಕಾರಿ ಗಣಪತಿ ಮಾಳಂಜೆ ಸ್ವಾಗತಿಸಿದರು. ಬಿ. ಗಂಗಮ್ಮ ನಿರೂಪಿಸಿದರು. ಜಿ. ನಾಗರಾಜ ವಂದಿಸಿದರು. ಶಿರಹಟ್ಟಿ ಫಕ್ಕೀರ ಸಿದ್ದರಾಮ ಶ್ರೀಗಳನ್ನು ಪೂರ್ಣಕುಂಭಗಳೊಂದಿಗೆ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು. 20 ಸಾವಿರಕ್ಕೂ ಹೆಚ್ಚು ರೈತರು, ಸ್ವ-ಸಹಾಯ ಸಂಘದ ಪ್ರತಿನಿಧಿಗಳು ಆದ್ಧೂರಿ ಉತ್ಸುವಕ್ಕೆ ಸಾಕ್ಷಿಯಾದರು.

ಮುಜರಾಯಿ ವಶಕ್ಕೆ ಮಠ: ಶಿರಹಟ್ಟಿ ಶ್ರೀಗಳ ಆಕ್ಷೇಪ
ಶಿಗ್ಗಾಂವಿ: ಭಕ್ತರಿಂದ ನಿರ್ಮಾಣವಾದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಜಾಗೃತಿಯನ್ನು ಪ್ರಾಮಾಣಿಕವಾಗಿ ಮುನ್ನಡೆಸುತ್ತಿರುವ ನಾಡಿನ ಮಠಗಳನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದುಕೊಳ್ಳುವ ಸರ್ಕಾರದ ಆಲೋಚನೆಗೆ ಶಿರಹಟ್ಟಿ ಫಕ್ಕೀರ ಸಿದ್ದರಾಮ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕೃಷಿ ಉತ್ಸವದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು, ಅವಿವೇಕಿ ರಾಜ, ಅಪದ್ಧ ಮಂತ್ರಿಯ ಕಥೆಯ ಮೂಲಕ ರಾಜ್ಯ ಸರ್ಕಾರವನ್ನು ಕುಟುಕಿದರು. ಪ್ರಮುಖ ಧಾರ್ಮಿಕ ಮುಖಂಡರ ಮೇಲೆ ಕ್ಯಾತೆ ತೆಗೆಯುತ್ತ ಸರ್ಕಾರ ನಡೆಸುತ್ತಿರುವ ಕೆಲವರು ಮಠಗಳನ್ನು ಸರ್ಕಾರದ ವಶಕ್ಕೆ ಪಡೆಯಲಿ ಎಂದು ಸವಾಲು ಎಸೆದರು. ಸಾಂಪ್ರದಾಯಿಕ ಪದ್ಧತಿಗಳನ್ನು ಮೂಢನಂಬಿಕೆಗಳ ಹೆಸರಿನಲ್ಲಿ ನಿಷೇಧಿಸಲು ಹೊರಟಿರುವ ಸರ್ಕಾರದ ಮುಖಂಡರು ಮೀಸೆ ಹೊತ್ತ ಗಂಡಸರೇ ಆಗಿದ್ದರೆ ಅದನ್ನು ಮಾಡಿ ತೋರಿಸಲಿ ಎಂದು ವಾಗ್ದಾಳಿ ಮಾಡಿದರು.
ತನ್ನನ್ನು ತಾನು ಅಡವಿಟ್ಟು ದೇಶಕ್ಕೆ ಅನ್ನ ಕೊಡುವ ರೈತನ ಬಗ್ಗೆ ಸರ್ಕಾರದ ನಿಷ್ಕಾಳಜಿ ಹೆಚ್ಚಿದೆ. ಮೂಗಿಗೆ ತುಪ್ಪ ಸವರುವ ಉಚಿತ ಯೋಜನೆಗಳನ್ನು ನಿಲ್ಲಿಸಿ. ಸಮರ್ಪಕವಾಗಿ ಬೀಜ, ಗೊಬ್ಬರ, ವಿದ್ಯುತ್ ಮತ್ತು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ತರಲಿ. ರೈತರು, ಸರ್ಕಾರದ ಹಂಗಿನಲ್ಲಿ ಬದುಕಲು ಬಯಸುವುದಿಲ್ಲ. ಅವರು ಸ್ವಾಭಿಮಾನಿಗಳಾಗಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.