ಹಾವೇರಿ

ದುಶ್ಚಟದಿಂದ ದೂರವಿದ್ದರೆ ಸುಖೀ ಸಮಾಜ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಡಿ. 16
ಸುಳ್ಳು, ಕಳ್ಳತನ, ದುಶ್ಚಟಗಳಿಂದ ದೂರವಾಗಿ ಮನುಷ್ಯ ಪ್ರಬುದ್ಧ ಮನಸ್ಸು ಹೊಂದಿ ಉತ್ತಮ ಜೀವನ ವಿಧಾನವನ್ನು ಅನುಸರಿಸಿದರೆ ಸಮಾಜ ಸುಖಿಯಾಗಿರಲು ಸಾಧ್ಯ ಎಂದು ಬೆಳಗಾವಿ ರಾಜೂರು ಮಠದ ಕುಮಾರ ದೇವರು ತಿಳಿಸಿದರು.
ಹಾನಗಲ್ಲಿನಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ಆಶ್ರಯದಲ್ಲಿ ಕ್ರಿಸ್ತ ಜಯಂತಿ ಅಂಗವಾಗಿ ಏರ್ಪಡಿಸಿದ ವ್ಯಸನ ಮುಕ್ತರಿಗೆ ಸನ್ಮಾನ ಹಾಗೂ ಮಾರ್ಗದರ್ಶನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಾಷ್ಟ್ರದ ಪುನರ್ ನಿರ್ಮಾಣ ಕಾರ್ಯದಲ್ಲಿ ಯುವಶಕ್ತಿ ಮುಖ್ಯವಾದುದು. ಆದರೆ ಯುವಕರೇ ದುಶ್ಚಟಗಳಿಗೆ ಬಲಿಯಾಗಿ ಸಾಮಾಜಿಕ ಸ್ಥಿತಿ ಅವನತಿಯತ್ತ ಸಾಗಿರುವುದು ದೌರ್ಭಾಗ್ಯ. ಒಂದೆಡೆ ಸರ್ಕಾರವೇ ಸಾರಾಯಿ ಅಂಗಡಿಗಳಿಗೆ ಪರವಾನಗಿ ನೀಡಿ, ಮತ್ತೊಂದೆಡೆ ಸಾರಾಯಿಮುಕ್ತ ಸಮಾಜದ ಘೋಷಣೆ ಮಾಡಿದರೆ ಫಲವೇನು? ನಾನು ಸುಧಾರಿಸುವ ಜತೆಗೆ ನಾಡು ಸುಧಾರಿಸಲು ಮುಂದಾದರೆ ಮಾತ್ರ ಸುಖಿ ಸಮಾಜದ ಕನಸು ನನಸಾದೀತು ಎಂದರು.
ತ್ಯಾಗದಿಂದ ಭಾಗ್ಯ: ಕ್ರಿಸ್ತ ಸಂದೇಶ ನೀಡಿದ ಅಸಂಗಿ ಝೇವಿಯರ್ ದೇವಾಲಯದ ಸಂತ ಫಾನ್ಸಿಸ್ ರಾಜಪ್ಪ ಮಾತನಾಡಿ, ಈ ದೇಶ ಅಧ್ಯಾತ್ಮದ ಬಂಜರು-ಬರಡು ನಾಡಾಗುತ್ತಿದೆ. ಉಡಲು ಉಣ್ಣಲು ಉಳಿಯಲು ಸ್ವಾತಂತ್ರ್ಯ ಬೇಕು. ದೌರ್ಬಲ್ಯಗಳ ಮೇಲೆ ಸವಾರಿ ಮಾಡುವುದು ಸರಿಯಲ್ಲ. ತ್ಯಾಗವಿಲ್ಲದೆ ಭಾಗ್ಯವಿಲ್ಲ, ಶಿಸ್ತು ಇಲ್ಲದೆ ಸ್ವಾಸ್ಥ್ಯವಿಲ್ಲ. ಪಾಪರಹಿತ ಜೀವನದಿಂದ ಮಾತ್ರ ಪುಣ್ಯ ಪ್ರಾಪ್ತಿಯಾದೀತು ಎಂದರು.
ಹಾನಗಲ್ಲ ಮಖಬೂಲಿಯಾ ನಗರದ ಮೌಲಾನಾ ಸೈಯದ್ ಮಹ್ಮದ್ ಹುಸೇನ್ ಮಾತನಾಡಿ, ಶಾಂತಿ ಹಾಗೂ ಮಾನವೀಯ ಮೌಲ್ಯಗಳು ಉಸಿರಾಡುವ ಬದಲು ಮೃಗಗಳ ರೂಪದಲ್ಲಿ ದ್ವೇಷ- ಅಸೂಯೆಗಳು ಜೀವ ತಳೆಯುತ್ತಿವೆ. ಜಿಹಾದ್ ಎಂಬುದನ್ನು ಅನರ್ಥಗೊಳಿಸಲಾಗುತ್ತಿದೆ. ಎಲ್ಲ ಧರ್ಮಗಳು ಶಾಂತಿ ಸಂದೇಶ ನೀಡಿವೆಯೇ ಹೊರತು ಹಿಂಸೆಯನ್ನಲ್ಲ. ಧರ್ಮದ ಹೆಸರಿನಲ್ಲಿ ಭೇದ ಮೂಡಿಸಿ ದುರಾಚಾರಕ್ಕೆ ಅವಕಾಶ ನೀಡಬಾರದು ಎಂದರು.
ಮನವೊಲಿಕೆ ಮುಖ್ಯ: ಹುಬ್ಬಳ್ಳಿಯ ಕಿಮ್ಸ್ ಮಾನಸಿಕ ತಜ್ಞ ಡಾ೤ ಮಹೇಶ ದೇಸಾಯಿ ವ್ಯಸನಮುಕ್ತಿ ವಾಸ್ತವಗಳನ್ನು ಬಿಚ್ಚಿಟ್ಟು, ಹವ್ಯಾಸಗಳು ವ್ಯಸನಗಳಾಗಿ ಹತೋಟಿ ತಪ್ಪಿ ಕಾಯಿಲೆಯಾಗಿ ಮನುಷ್ಯ ಮಾರಕ ಆಘಾತಕ್ಕೆ ತುತ್ತಾಗುತ್ತಾನೆ. ಚಿಂತೆಗಳಿಗೆ ಮದ್ಯಸೇವನೆ ಪರಿಹಾರವಲ್ಲ. ವ್ಯಸನದಿಂದ ಕೌಟುಂಬಿಕ ವ್ಯವಸ್ಥೆಯೆ ಹಾಳಾಗಿ ಸಮಾಜದಲ್ಲಿ ನೈತಿಕ ಸಂಬಂಧಗಳೇ ಸಾಯುವಂತಾಗಿವೆ. ಮನವೊಲಿಕೆ ಮೂಲಕ ತಪ್ಪು ತಿದ್ದಬೇಕು ಎಂದರು.
ಹುಬ್ಬಳ್ಳಿಯ ರೋಶನಿ ಸಂಸ್ಥೆಯ ಪ್ರಾಂತಾಧಿಕಾರಿಣಿಯ ಸಲಹೆಗಾರ್ತಿ ಸಿಸ್ಟರ್ ಸುನೀತಾ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಳ್ಳಿ, ರೋಶನಿ ಸಮಾಜ ಸೇವಾ ಸಂಸ್ಥೆ ನಿರ್ದೇಶಕಿ ಅನಿತಾ ಡಿಸೋಜಾ, ಪತ್ರಕರ್ತ ವಿಜಯಕುಮಾರ ಪಾಟೀಲ, ಸಾಹಿತಿ ಮಾರುತಿ ಶಿಡ್ಲಾಪುರ ಇದ್ದರು. ಮಲ್ಲಿಗ್ಗಾರ ಸಿದ್ದೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಂಗಯ್ಯ ಹಿರೇಮಠ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗಿರೀಶ ದೇಶಪಾಂಡೆ, ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ರವಿ ಲಕ್ಷ್ಮೇಶ್ವರ, ಬರಹಗಾರರಾದ ಮಾರುತಿ ಪೇಟಕರ, ಸತೀಶ ಕುಲಕರ್ಣಿ ಪಾಲ್ಗೊಂಡಿದ್ದರು.

ಏಳು ವ್ಯಸನಮುಕ್ತರಿಗೆ ರೋಶನಿ ಸನ್ಮಾನ
ಹಾನಗಲ್ಲ:  ವ್ಯಸನಮುಕ್ತರಾಗಿ ಪುನರ್ವಸತಿ ಪಡೆದು ಕೌಟುಂಬಿಕ ಸಾಮರಸ್ಯ ಉಳಿಸಿಕೊಂಡು ದುಡಿಮೆ ಮೂಲಕ ಬದುಕು ಸಾಗಿಸುತ್ತಿರುವ ಏಳು ಜನರನ್ನು ಇಲ್ಲಿನ ರೋಶನಿ ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರ ಸನ್ಮಾನಿಸಿ ಅಭಿನಂದಿಸಿತು. ಪಟ್ಟಣದಲ್ಲಿ ಕ್ರಿಸ್ತ ಜಯಂತಿ ಅಂಗವಾಗಿ ರೋಶನಿ ಸಂಸ್ಥೆ ಏರ್ಪಡಿಸಿದ ವ್ಯಸನಮುಕ್ತಿ ಮತ್ತು ಪುನರ್ವಸತಿ ಸಮಾರಂಭದಲ್ಲಿ ರೋಶನಿ ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಪುನರ್ವಸತಿ ಪಡೆದ ಗುಲ್ಬರ್ಗ ನಗರದ ಮಲ್ಲಿಕಾರ್ಜುನ ಪೂಜಾರ, ಹುಬ್ಬಳ್ಳಿಯ ಗಂಗಾಧರ ಜವಳಿ, ಕಬ್ಬೂರಿನ ಶಿವಪ್ಪ ಮಂತಗಿ, ಮಹರಾಜಪೇಟೆಯ ಪರಸಪ್ಪ ಅಂಗಡಿ, ಕಬನೂರಿನ ಸಂಜೀವ ಸೆಟ್ಟೆಪ್ಪನವರ, ಯಲ್ಲಾಪುರದ ಆಂಟೋನಿ ಹಾಗೂ ಬೆಳವಿಗಿಯ ವೀರನಗೌಡ ನಿಂಗನಗೌಡ್ರ ಅವರನ್ನು ಸನ್ಮಾನಿಸಲಾಯಿತು. ವ್ಯಸನ ಮುಕ್ತಿಗೊಳಿಸುವಲ್ಲಿ ವಿಶೇಷ ಕಾಳಜಿ ವಹಿಸುತ್ತಿರುವ ಧಾರವಾಡದ ಸಮಾಜ ಸೇವಕರಾದ ಹನುಮಂತಪ್ಪ -ಗೌರಮ್ಮ ಕುರುಬರ ಅವರನ್ನೂ ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.