ಹಾವೇರಿ

ಸರ್ಕಾರ ಮಠಗಳ ಮುಟ್ಟಿದರೆ ರಾಜ್ಯದಲ್ಲಿ ಧಾರ್ಮಿಕ ಕ್ರಾಂತಿ

Published On :

ಬ್ಯಾಡಗಿ: ಸರ್ಕಾರ ಮಠಗಳನ್ನು ಮುಟ್ಟಿದರೆ ರಾಜ್ಯದಲ್ಲಿ ಧಾರ್ಮಿಕ ಕ್ರಾಂತಿಗೆ ನಾಂದಿಯಾಗಲಿದೆ. ಧಾರ್ಮಿಕ ದತ್ತಿ ಇಲಾಖೆ ಮಠಗಳ ಮೇಲೆ ಬ್ರಹ್ಮಾಸ್ತ್ರ ಹೂಡುವುದು ಸರಿಯಲ್ಲ, ಎಲ್ಲ ಮಠಗಳು ಸಂವಿಧಾನಾತ್ಮಕವಾಗಿ ಕೆಲಸ ನಿರ್ವಹಿಸುತ್ತಿವೆ ಎಂದು ಹರಿಹರ ಪಂಚಮಸಾಲಿ ಪೀಠದ ಸಿದ್ಧಲಿಂಗಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮೋಟೆಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾದಿರಾಜ ಮಠದ ಪ್ರಕರಣದ ಹಿನ್ನೆಲೆಯನ್ನಿಟ್ಟುಕೊಂಡು ಸರ್ಕಾರ ಈ ರೀತಿ ಸರ್ಕಾರ ಹೆಜ್ಜೆಯನ್ನಿಡುವುದು ತಪ್ಪು, ಮಠಗಳಿಂದ ಧಾರ್ಮಿಕ ಸೇರಿದಂತೆ ಶೈಕ್ಷಣಿಕ ಅನುಕೂಲತೆಗಳನ್ನು ಜಾತಿ ಮತ ಭೇದಗಳನ್ನು ಮರೆತು ನೀಡುತ್ತಿವೆ. ಇದನ್ನೇಕೆ ಸರ್ಕಾರ ಪರಿಗಣಿಸುತ್ತಿಲ್ಲವೇಕೆ ಎಂದರು.
ನಿಡುಮಾಮಿಡಿಶ್ರೀ ವೈಯಕ್ತಿಕ ವಿಚಾರ
ಉತ್ತರ ಕರ್ನಾಟಕದ ಬಹುತೇಕ ಮಠಗಳು ಮಟಕಾ ದಂಧೆ ನಡೆಸುವ ಮಠಗಳಾಗಿವೆ ಎಂದು ನಿಡುಮಾಮಿಡಿಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಇದು ಅವರ ವೈಯಕ್ತಿಕ ವಿಚಾರವಾಗಿದ್ದು, ಎಲ್ಲ ಮಠಗಳು ಆ ರೀತಿಯಾಗಿವೆ ಎಂದಲ್ಲ, ಕೆಲ ಮಠಗಳಲ್ಲಿ ಜನರಿಂದ ನೇಮಕವಾಗದ ಕೆಲ ಸ್ವಯಂಘೋಷಿತ ಸ್ವಾಮಿಗಳು ನಡೆಸುತ್ತಿರುವ ಮಠಗಳಲ್ಲಿ ನಡೆಯುತ್ತಿರಬಹುದು. ಅವುಗಳನ್ನು ನಾವು ಕೂಡ ವಿರೋಧಿಸುತ್ತೇವೆ.
ಮೂಢನಂಬಿಕೆ ನಿಷೇಧಿಸಲಿ
ನಂಬಿಕೆ ಹಾಗೂ ಭಕ್ತಿಯ ಮೇಲೆ ಸಮಾಜ ನಿಂತಿದೆ. ಆದರೆ, ಧಾರ್ಮಿಕ ಆಚರಣೆಯ ನೆಪದಲ್ಲಿ ನಡೆಯುವ ಅನಿಷ್ಟ ಪದ್ಧತಿಗಳನ್ನು ವಿರೋಧಿಸಬೇಕಾಗುತ್ತದೆ. ಪ್ರಾಣಿಬಲಿ, ದೇವದಾಸ, ಸತಿ ಸಹಗಮನ, ನಿಧಿ ಆಸೆಗೆ ನರಬಲಿ, ಮಲಹೊರುವ ಪದ್ಧತಿಗಳನ್ನು ಸರ್ಕಾರ ಈಗಾಗಲೇ ನಿಷೇಧಿಸಿದೆ, ಕಾನೂನುಗಳಿಂದಲೇ ಸಮಾಜವನ್ನು ನಿಯಂತ್ರಿಸುವುದಾದರೇ ನಮ್ಮದೇನೂ ಅಭ್ಯಂತರವಿಲ್ಲ ಎಂದರು. ಮನುಷ್ಯ ಜೀವಂತವಾಗಿದ್ದಾಗ ಆತನನ್ನು ಇನ್ನೊಬ್ಬ ಹೊರುವುದು ಮಲ ಹೊರುವ ಪದ್ಧತಿಗೆ ಸಮ. ಹೀಗಾಗಿ ಅಡ್ಡಪಲ್ಲಕ್ಕಿಯನ್ನು ನಾವು ಖಂಡಿತವಾಗಿ ವಿರೋಧಿಸುತ್ತೇವೆ ಎಂದರು. ಭಕ್ತರ ಬೇಕುಬೇಡಗಳನ್ನು ಕೇಳುವುದು ಸ್ವಾಮೀಜಿಗಳ ಕೆಲಸವೇ ಹೊರತು ಅವರ ತಲೆ ಮೇಲೆ ಕುಳಿತು ಸವಾರಿ ಮಾಡುವುದಲ್ಲ, ಭಕ್ತಿಯ ಪರಾಕಾಷ್ಠೆಗೆ ಬೇಡರ ಕಣ್ಣಪ್ಪನನ್ನು ದೃಷ್ಟಾಂತದ ಹಿನ್ನೆಲೆಯನ್ನಿಟ್ಟು ಬಿಂಬಿಸಲಾಗಿದೆ ಎಂದರು.
ಮಠಗಳ ಉತ್ತರಾಧಿಕಾರಿ ವಿಷಯಗಳು ನ್ಯಾಯಾಲಯದ ಕಟಕಟೆ ಏರುತ್ತಿವೆಯಲ್ಲದೇ, ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಕ್ಕೂ ನಡೆಯದಷ್ಟು ಲಾಬಿ ಈ ವಿಷಯದಲ್ಲಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಠಗಳು ಭಕ್ತಿ ಸಂಬಂಧಿಗಳಾಗಿರಬೇಕೆ ಹೊರತು ರಕ್ತ ಸಂಬಂಧಿಯಾಗಿರಬಾರದು, ಭಕ್ತರು ಇಚ್ಛೆಪಟ್ಟವರೇ ಮಠದ ಮುಂದಿನ ಉತ್ತರಾಧಿಕಾರಿಯಾಗುವುದು ಸೂಕ್ತ ಎಂದರು.
 ಜಿ.ಪಂ. ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಶಂಕರಗೌಡ ಪಾಟೀಲ, ಶೇಖರಗೌಡ ಗೌಡ್ರ, ನಾಗನಗೌಡ ಪಾಟೀಲ, ಕರಬಸಪ್ಪ ಬಳ್ಳಾರಿ, ಪುಟ್ಟನಗೌಡ ಪಾಟೀಲ, ಹಾಲೇಶಪ್ಪ ಬ್ಯಾಡಗಿ, ಶಿವಬಸಪ್ಪ ಕುಳೇನೂರ, ನಾಗರಾಜ ಬಳ್ಳಾರಿ, ಮಲ್ಲಿಕಾರ್ಜುನ ಬಳ್ಳಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.