ವಾಲ್ಮೀಕಿ ಸಮ್ಮೇಳನಕ್ಕೆ 50 ಸಾವಿರ ಜನ
ಶಿಗ್ಗಾಂವಿ: ರಾಜ್ಯ ಮಟ್ಟದ ವಾಲ್ಮೀಕಿ ಮಹಾಸಮ್ಮೇಳನ ಜ. 11ರಂದು ಚಿತ್ರದುರ್ಗದಲ್ಲಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆಯಲಿದ್ದು, ಜಿಲ್ಲೆಯಿಂದ ಸಮಾಜದ 50 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕೆಪಿಸಿಸಿ ಎಸ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮಾರುತಿ ಹಾದಿಮನಿ ಹೇಳಿದರು. ಮಹಾಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮೀಸಲಾತಿ, ತಳವಾರ ಹಾಗೂ ಪರಿವಾರ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು, ಪ್ರತ್ಯೇಕ ಸಚಿವಾಲಯ, ವಿಶ್ವವಿದ್ಯಾಲಯ ಹಾಗೂ ವಾಲ್ಮೀಕಿ ಪ್ರಾಧಿಕಾರ, ಮದಕರಿ ಉತ್ಸವ ಆಚರಣೆ ಕುರಿತು ಈ ಸಮಾವೇಶದ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹಾದಿಮನಿ ತಿಳಿಸಿದರು. ಜಿಲ್ಲಾ ಅಧ್ಯಕ್ಷ ಬಸವರಾಜ ಹಾದಿಮನಿ, ಸುಭಾಸ ತಳವಾರ, ಈರಪ್ಪ ಮಡ್ಲೂರ, ಚಂದ್ರಣ್ಣ ಬೇಡರ, ಶ್ರೀಧರ ದೊಡ್ಡಮನಿ, ರಾಮಣ್ಣ ವಾಲ್ಮೀಕಿ, ಬಸವರಾಜ ಎಲ್ಲಕ್ಕನವರ, ರಾಜು ಆನವಟ್ಟಿ, ಶಿವಣ್ಣಾ ಅಂಬಲಿ ಇದ್ದರು.
ರಾಣಿಬೆನ್ನೂರು: ಬಿಜೆಪಿ ಕಚೇರಿ ಉದ್ಘಾಟನೆ
ರಾಣಿಬೆನ್ನೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬದ ನಿಮಿತ್ತ ನಗರದ ಸಂಗಮ ವೃತ್ತದಲ್ಲಿ ಬುಧವಾರ ತಾಲೂಕು ಬಿಜೆಪಿ ಕಾರ್ಯಾಲಯ ಉದ್ಘಾಟನೆ ಹಾಗೂ ವಾಜಪೇಯಿ ಅವರ 90ನೇ ಜನ್ಮದಿನ ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಭೋಜರಾಜ ಕರೂದಿ ಚಾಲನೆ ನೀಡಿದರು. ಬಿಜೆಪಿ ಪರಿಶಿಷ್ಟ ಪಂಗಡಗಳ ರಾಜ್ಯ ಕಾರ್ಯದರ್ಶಿ ಮಂಜುನಾಥ ಓಲೇಕಾರ, ಮಹಿಳಾ ಅಧ್ಯಕ್ಷೆ ಭಾರತಿ ಜಂಬಗಿ, ಜಿಲ್ಲಾ ವಕೀಲ ಕ್ಷೇತ್ರದ ಅಧ್ಯಕ್ಷ ಕೆ.ಎನ್. ಕೋರಧಾನ್ಯಮಠ, ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಲಕ್ಷ್ಮೆಶ್ವರ, ನಗರಾಧ್ಯಕ್ಷ ಈರಣ್ಣ ಅಂಗಡಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಶ್ವನಾಥ ಪಾಟೀಲ, ಯುವ ಮೋರ್ಚಾ ಅಧ್ಯಕ್ಷ ಕಿರಣ ಅಂಗಡಿ, ಮೈತ್ರಾ ಹದಡಿ, ಪೂರ್ಣಿಮಾ ಕುರುವತ್ತಿ, ಮೈಲಪ್ಪ ಗುಡಗೂರು, ನೀಲಪ್ಪ ದೇವರಗುಡ್ಡ, ರಮೇಶ ನಾಯ್ಕ, ವಿಶ್ವನಾಥ ಹೊಳೆಬಾಗಿಲ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಶಂಕರಗೌಡ ಎಂ. ಹೊರಕೇರಿ, ಮಲ್ಲಪ್ಪಯ್ಯ ಒಡೆಯರ ಇದ್ದರು.
ಸಿದ್ದಪ್ಪ ವಾರ್ತಿ ನಿಧನ
ಹಾವೇರಿ: ತಾಲೂಕಿನ ಶೀಲವಂತ ಆಲದಕಟ್ಟಿ ಗ್ರಾಮದ ಪ್ರಗತಿಪರ ರೈತ ಸಿದ್ದಪ್ಪ ಗಂಗಪ್ಪ ವಾರ್ತಿ (64) ಬುಧವಾರ ನಿಧನ ಹೊಂದಿದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿಯರು ಹಾಗೂ ಅಪಾರ ಬಂಧುಗಳಿದ್ದಾರೆ. ಮೃತರ ಅಂತ್ಯಕ್ರಿಯೆ ಡಿ. 26ರಂದು ಬೆಳಗ್ಗೆ 11 ಗಂಟೆಗೆ ಶೀಲವಂತ ಆಲದಕಟ್ಟಿ ಗ್ರಾಮದ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೋದಿ ಪರ ಹರಿಹರ ಶ್ರೀಗಳ ಹೇಳಿಕೆಗೆ ಖಂಡನೆ
ಹಾನಗಲ್ಲ: ಧರ್ಮ ಸಭೆಯಲ್ಲಿ ರಾಜಕೀಯ ಬೆರೆಸಿ, ನರೇಂದ್ರ ಮೋದಿ ಅವರನ್ನು ಈ ದೇಶದ ಪ್ರಧಾನಿಯನ್ನಾಗಿಸಿ ಎಂದು ಉಪದೇಶ ನೀಡಿದ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಡಾ ಸಿದ್ಧಲಿಂಗ ಮಹಾಸ್ವಾಮಿಗಳ ಹೇಳಿಕೆ ಖಂಡನಾರ್ಹ ಎಂದು ಹಾನಗಲ್ಲ ವಿರಕ್ತಮಠ ದಾಸೋಹ ಸಮಿತಿ ಸದಸ್ಯ ನಾಗಪ್ಪ ಸೌದತ್ತಿ ತಿಳಿಸಿದ್ದಾರೆ. ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದ ಧರ್ಮಸಭೆಯಲ್ಲಿ ಪಂಚಮಸಾಲಿ ಶ್ರೀಗಳು ಒಂದು ಪಕ್ಷದ ಪರವಾಗಿ ನಿಲುವು ಪ್ರಕಟಿಸಿದಂತಾಗಿದೆ. ಪಕ್ಷಾತೀತ ಸಭೆಯಲ್ಲಿ ಮಠಾಧೀಶರು ಇಂಥ ಹೇಳಿಕೆ ನೀಡುವುದು ಸರಿಯಲ್ಲ ಎಂದರು. ಡಾ ಸಿದ್ಧಲಿಂಗ ಸ್ವಾಮೀಜಿ ಅವರ ಧಾರ್ಮಿಕ - ಜನಪರ ಕಾಳಜಿ ಕುರಿತು ನಮಗೆ ಗೌರವವಿದೆ. ಜಾತ್ಯತೀತವಾಗಿರುವ ಹಾನಗಲ್ಲ ಕುಮಾರೇಶ್ವರ ವಿರಕ್ತ ಮಠದ ಧಾರ್ಮಿಕ ವೇದಿಕೆಯಲ್ಲಿ ರಾಜಕೀಯ ಮಾತನಾಡಿದ್ದರಿಂದ ಭಕ್ತ ಸಮುದಾಯಕ್ಕೆ ನೋವಾಗಿದೆ. ಮಠದ ಪಕ್ಷಾತೀತ ಚಟುವಟಿಕೆಗೆ ಶ್ರೀಗಳ ಹೇಳಿಕೆಯಿಂದ ಹಿನ್ನಡೆಯಾಗಿದೆ. ಪ್ರತ್ಯೇಕ ಸಭೆಯಲ್ಲಿ, ಮೋದಿ ಪರ ಶ್ರೀಗಳು ಹೇಳಿಕೆ ನೀಡಿದರೆ ವೈಯಕ್ತಿಕ ಎಂದು ಪರಿಗಣಿಸಬಹುದಿತ್ತು ಎಂದರು. ದಾಸೋಹ ಸಮಿತಿ ಸದಸ್ಯರಾದ ಪ್ರಕಾಶ ಸಿಂಧೂರ, ಕಾಶೀನಾಥ ನ್ಯಾಮತಿ, ಶಿವಯೋಗಿ ಸೌದತ್ತಿ ಇದ್ದರು.
ಮೂಲವ್ಯಾಧಿ ಚಿಕಿತ್ಸಾ ಶಿಬಿರ
ಹಾವೇರಿ: ನಗರದ ವರದಾ ಹೆಲ್ತ್ ಫೌಂಡೇಶನ್ ಮತ್ತು ವರದಾ ಆಯುರ್ವೇದಿಕ್ ಆಸ್ಪತ್ರೆ ಆಶ್ರಯದಲ್ಲಿ ಡಿ. 29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ಮೂಲವ್ಯಾಧಿ ಉಚಿತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ. ತಜ್ಞ ವೈದ್ಯರಾದ ಡಾ ಜಿ.ಬಿ. ಹೂಲಿಕಟ್ಟಿ ಚಿಕಿತ್ಸೆ ನೀಡಲಿದ್ದಾರೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಪ್ರತಿಷ್ಠಾನದ ಉಪಾಧ್ಯಕ್ಷ ಹಕೀಂ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9945144202 ಸಂಪರ್ಕಿಸಿ.
ಶೈಕ್ಷಣಿಕ ಸುಧಾರಣೆಗೆ ಸಹಕರಿಸಿ: ವೀರಣ್ಣ
ಶಿಗ್ಗಾಂವಿ: ಶೈಕ್ಷಣಿಕ ಸುಧಾರಣೆಗೆ ಸರ್ಕಾರ ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ವೀರಣ್ಣ ಮಹಾಜನಶೆಟ್ರ ಹೇಳಿದರು. ತಾಲೂಕಿನ ದುಂಡಶಿ ಗ್ರಾಮದ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕಲಿಕೋತ್ಸವ ಉದ್ಘಾಟಸಿ, ಸರ್ಕಾರ ವಿದ್ಯಾರ್ಥಿಗಳಿಗಾಗಿ ಹಲವಾರು ಯೋಜನೆ ರೂಪಿಸಿದ್ದು, ಅವುಗಳ ಮೂಲಕ ಬದುಕು ರೂಪಿಸಿಕೊಳ್ಳಬೇಕೆಂದರು. ಎಸ್ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಚಕ್ರಸಾಲಿ ಅಧ್ಯಕ್ಷತೆ ವಹಿಸಿದ್ದರು. ಬಿಆರ್ಪಿ ಟಿ.ಕೆ. ಪಾಟೀಲ ಕಲಿಕೋತ್ಸವ ಕುರಿತು ಮಾಹಿತಿ ನೀಡಿದರು. ಮುಖ್ಯಾಧ್ಯಾಪಕಿ ಕೆ.ಜಿ. ಶೇಠ, ಬಾಬು ಧರಣೆಪ್ಪವರ, ಸುಧೀರ ಬಿದರಳ್ಳಿ, ಧರಣೇಂದ್ರ ಪುಟ್ಟಣ್ಣವರ, ಈರವ್ವ ಮೈಸೂರ, ದಾಕ್ಷಾಯಣಿ ಕೌದಿ, ಶಿವೂರ ಇದ್ದರು. ಶಿಕ್ಷಕ ಪಿ.ಎಸ್. ನಾಯಕ ನಿರೂಪಿಸಿದರು. ಸಿಆರ್ಪಿ ಆರ್.ಕೆ. ಭಜಂತ್ರಿ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

