ದೈಹಿಕ ಸಮತೋಲನಕ್ಕೆ ಕ್ರೀಡೆ ಸಹಕಾರಿ: ಆಂಜನಪ್ಪ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 29
ವರ್ಷದ ಎಲ್ಲ ಕಾಲಗಳಲ್ಲಿ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಶ್ರಮಿಸುವ ಪೊಲೀಸರಿಗೆ ದೈಹಿಕ ಸಮತೋಲನ ಕಾಪಾಡಿಕೊಳ್ಳಲು ಕ್ರೀಡೆ ಅಗತ್ಯ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಪೊಲೀಸರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಆಂಜನಪ್ಪ ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಜಿಲ್ಲಾ ಪೊಲೀಸ್ ಇಲಾಖೆ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪೊಲೀಸರು ವಿರಾಮ ಇಲ್ಲದಂತೆ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಹೀಗಾಗಿ, ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಸೂಕ್ತ ಎಂದರು.
ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಮಾತನಾಡಿ, ತಂತ್ರಜ್ಞಾನದ ಇಂದಿನ ದಿನಗಳಲ್ಲಿ ಪೊಲೀಸರು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ದೈಹಿಕ ಸಮತೋಲನ ಕಾಪಾಡಿಕೊಳ್ಳಲು ಕಸರತ್ತು ನಡೆಸುವುದು ಅಗತ್ಯ. ಈ ರೀತಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಒಗ್ಗಟ್ಟು ಹೆಚ್ಚಾಗುತ್ತದೆ. ವೈಯಕ್ತಿಕ ಸಮಸ್ಯೆಗಳನ್ನು ಬದಿಗೊತ್ತಿ ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆಗೆ ನಿರಂತರ ಶ್ರಮಿಸುವ ಪೊಲೀಸರ ಕಾರ್ಯ ಶ್ಲಾಘನೀಯ. ಎಲ್ಲ ಪೊಲೀಸ್ ಸಿಬ್ಬಂದಿ ತಮಗೆ ಇಷ್ಟವಿರುವ ಆಟದ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆನೀಡಿದರು. ತಾವೂ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದನ್ನು ನೆನಪಿಸಿಕೊಂಡರು.
ಎಸ್ಪಿ ಎನ್. ಶಶಿಕುಮಾರ್, ಎಎಸ್ಪಿ ಡಿ.ಎಸ್. ಜಗಮೈನವರ ಇದ್ದರು. ರಾಣಿಬೆನ್ನೂರು ಡಿಎಸ್ಪಿ ಎಸ್.ಎಚ್. ಗಡಾದ ವಂದಿಸಿದರು. ಇದಕ್ಕೂ ಮುನ್ನ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲೆಯ ಎಲ್ಲ ಠಾಣೆಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು.
ಕ್ರೀಡಾಕೂಟದ ಫಲಿತಾಂಶ
ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಪೊಲೀಸ್ ಕ್ರೀಡಾಕೂಟದಲ್ಲಿ ಭಾನುವಾರ ನಡೆದ ಸ್ಪರ್ಧೆಯ ಫಲಿತಾಂಶ ಹೀಗಿದೆ:
100 ಮೀ. ಓಟ- (ಸಿಪಿಐ) ಆರ್.ಎಂ. ಕುರುಬಗಟ್ಟಿ, ಎಸ್.ಕೆ. ಪವಾರ. (ಪಿಎಸ್ಐ) ಮಹಾಂತೇಶ ಎಂ.ಎಂ., ಎಂ.ಐ. ಗೌಡಪ್ಪಗೌಡ್ರ ಗುತ್ತಲ, ಎಂ.ಎಸ್. ಮುರಳಿ. (ಡಿವೈಎಸ್ಪಿ) ಎಸ್.ಎಸ್. ಗಡಾದ, ಎಸ್.ಬಿ. ಅಂಬಿಗೇರ. ಎತ್ತರ ಜಿಗಿತ (ಪಿಸಿಗಳಿಗೆ): ಪ್ರವೀಣ ನವಲೆ, ಬಾಬು ಲಮಾಣಿ, 400 ಮೀ. ಓಟ: ಎಸ್.ಎಲ್. ರವಿ, ಸಿ.ಐ. ಅಜ್ಜನಗೌಡ್ರ. 200 ಮೀ. ಓಟ: ಪ್ರವೀಣ ನಾಯಕ, ಎನ್.ಎಸ್. ಬಳ್ಳಾರಿ. ಗುಂಡು ಎಸೆತ (ಪಿಎಸ್ಐ): ಸಂತೋಷ ಪಾಟೀಲ, ಮಹಾಂತೇಶ ಎಂ.ಎಂ., ಎನ್.ಸಿ. ಕಾಡದೇವರ. (ಪಿಸಿ): ಯು.ಬಿ. ನಂದಿಗೌಡರ, ಎಲ್.ಡಿ. ಹನುಮಂತ. ಜಾವಲಿನ್ ಎಸೆತ (ಸಿಪಿಐ): ಯೋಗೇಶ ಎಸ್.ಟಿ., ಹಾಲಮೂರ್ತಿ ರಾವ್. ಡಿವೈಎಸ್ಪಿ: ಗೋಪಾಲ ಬ್ಯಾಕೋಡ್, ದೊಡ್ಡಮನಿ ಬಾಲಚಂದ್ರ.
ಮಹಿಳಾ ವಿಭಾಗದ ಗುಂಡೆಸೆತದಲ್ಲಿ ಶ್ವೇತಾ ನಾಯಕ, ನೇತ್ರಾವತಿ ಕೆ.ಎಸ್. ಪಿಎಸ್ಐ: ರೋಹಿಣಿ ಪಾಟೀಲ, ಅನ್ನಪೂರ್ಣ ಹುಲಗೂರ, ಎಸ್.ಎಚ್. ಗರಗ. 100 ಮೀ. ಓಟ: ಶ್ವೇತಾ ನಾಯಕ, ಡಿ.ಎಚ್. ವಡ್ಡರ. ಚಕ್ರ ಎಸೆತ: ಶ್ವೇತಾ ನಾಯಕ, ಜಿ.ಪಿ. ಲಮಾಣಿ ಬಹುಮಾನ ಗಳಿಸಿದರು. ಸೋಮವಾರ ಗುಂಪು ಆಟಗಳ ಫೈನಲ್ ಪಂದ್ಯಗಳು ಹಾಗೂ ಬಾಕಿ ಉಳಿದ ಸ್ಪರ್ಧೆಗಳು ಜರುಗಲಿವೆ.
ಕ್ರಿಕೆಟ್: ಮಾಧ್ಯಮ ತಂಡದ ವಿರುದ್ಧ ಪೊಲೀಸರಿಗೆ ಗೆಲವು
ಹಾವೇರಿ: ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಪೊಲೀಸ್ ಕ್ರೀಡಾಕೂಟದ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ಮಾಧ್ಯಮ ತಂಡವನ್ನು ಪೊಲೀಸ್ ತಂಡ ಮೂರು ವಿಕೆಟ್ಗಳಿಂದ ಸೋಲಿಸಿತು.
ಮಾಲತೇಶ ಅಂಗೂರ ನೇತೃತ್ವದ ಮಾಧ್ಯಮ ತಂಡ 12 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿತು. ರವಿ ಹೂಗಾರ, ವೀರೇಶ ಮಡ್ಲೂರ 18, ಸಂತೋಷ 14 ರನ್ ಗಳಿಸಿದರು. ಎಸ್ಪಿ ಎನ್. ಶಶಿಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಅವರ ಕರಾರುವಾಕ್ಕಾದ ಬೌಲಿಂಗ್ ದಾಳಿಗೆ ಮಾಧ್ಯಮ ತಂಡ ನಿರುತ್ತರವಾಯಿತು. ಉತ್ತರಿಸಲು ಇಳಿದ ಪೊಲೀಸ್ ತಂಡವೂ ಆರಂಭಿಕ ಕುಸಿತ ಕಂಡಿತು. ಒಂದು ಹಂತದಲ್ಲಿ ಶೂನ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡಿದ್ದ ಪೊಲೀಸ್ ತಂಡ, ಐದು ರನ್ ಸೇರಿಸುವಷ್ಟರಲ್ಲಿ ಮತ್ತೆರಡು ಹುದ್ದರಿ ನಷ್ಟ ಮಾಡಿಕೊಂಡಿತು. ಬೌಲಿಂಗ್ನಲ್ಲಿ ಮಿಂಚಿದ್ದ ಶಶಿಕುಮಾರ್ ಹಾಗೂ ಕುರೇರ ಬ್ಯಾಟಿಂಗ್ನಲ್ಲಿ ಶೂನ್ಯ ಸಂಪಾದನೆ ಮಾಡಿದರು. ಬಳಿಕ ಮೈದಾನಕ್ಕಿಳಿದ ಕಾಶಿ (28) ತಂಡಕ್ಕೆ ಆಸರೆಯಾಗಿ, ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಮೂರು ಓವರ್ ಬಾಕಿ ಇರುವಾಗಲೇ ಪೊಲೀಸ್ ತಂಡ ಮೂರು ವಿಕೆಟ್ಗಳಿಂದ ವಿಜಯದ ನಗೆ ಬೀರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

