ಮಾಧ್ಯಮ ತ್ವರಿತ ಮಾಹಿತಿಯಿಂದ ಜ್ಞಾನ ವೃದ್ಧಿ
ಹಾವೇರಿ: ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಪ್ರಭಾವಿ ಹಾಗೂ ತ್ವರಿತ ಮಾಹಿತಿ ಕಣಜಗಳಾಗಿದ್ದು, ಅವುಗಳ ಪರಿಣಾಮಕಾರಿ ಬಳಕೆಯಿಂದ ನಮ್ಮ ಜ್ಞಾನ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ವಿಜ್ಞಾನಿ ಡಾ. ನಾ. ಸೋಮೇಶ್ವರ ಅಭಿಪ್ರಾಯಪಟ್ಟರು.
ಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ದಾರ್ಶನಿಕ ಸಮೂಹ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್, ವಿವಿಧ ಇಲಾಖೆ ಹಾಗೂ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿದ್ಯಾರ್ಥಿ-ವಿಜ್ಞಾನಿ ಸಂವಾದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ತ್ವರಿತ ನಿರ್ಧಾರದಿಂದ ತಪ್ಪು
ದೂರದರ್ಶನಗಳು ಬಿತ್ತರಿಸುವ ವಿಷಯಗಳನ್ನು ಚಿಕ್ಕ ಮಕ್ಕಳು ಬೇಗನೆ ತಮ್ಮದಾಗಿಸಿಕೊಳ್ಳುತ್ತಾರೆ. ಹೀಗಾಗಿ ಮಾಧ್ಯಮ ಒಂದು ದೇಶ ಕಟ್ಟಬಹುದು, ನಾಶ ಮಾಡಲೂ ಬಹುದಾಗಿದೆ. ಈ ಕುರಿತು ಜವಾಬ್ದಾರಿ ಕಾರ್ಯ ನಿರ್ವಹಿಸಿಬೇಕಿದೆ. ದೇಶ ಕಟ್ಟುವ ಕಾರ್ಯದತ್ತ ಎಲ್ಲರ ಚಿತ್ತ ನೆಡಬೇಕಿದೆ. ಮಾಧ್ಯಮಗಳಿಂದ ಉತ್ತಮ ಕಾರ್ಯಗಳಾಗಿದ್ದು, ಆದರೆ, ಇತ್ತೀಚಿನ ವರ್ಷಗಳಿಂದ ಮಾಧ್ಯಮಗಳು ತಮ್ಮ ವ್ಯಾಪಾರಿ ಧೋರಣೆಯಿಂದ ಹಾದಿ ತಪ್ಪುತ್ತಿರುವುದು ದುರಂತಮಯ ಎಂದು ವಿಷಾದಿಸಿದರು.
ಮಕ್ಕಳು ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಷಯಗಳನ್ನು ನೇರ ಸ್ವೀಕಾರ ಮಾಡದೇ ಪರಾಮರ್ಶಿಸಿ, ಹಿರಿಯರು ಹಾಗೂ ಸ್ನೇಹಿರೊಂದಿಗೆ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಬಳಿಕ ಜೀವನದಲ್ಲಿ ಅಳವಡಿಸಿಕೊಳ್ಳುವತ್ತ ಗಮನಹರಿಸಬೇಕೆಂದರು.
ಮಕ್ಕಳ ಸಬಲೀಕರಣಕ್ಕೆ ಶ್ರಮಿಸಿ
ಇಸ್ರೋ ವಿಜ್ಞಾನಿ ಡಾ. ಬಿ.ಆರ್. ಗುರುಪ್ರಸಾದ ಮಾತನಾಡಿ, ಇಂದಿನ ಮಕ್ಕಳಲ್ಲಿ ಅದ್ಭುತವಾದ ಜಾಣ್ಮೆ ಹಾಗೂ ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯ ಅಡಗಿದೆ. ಇಂಥ ಕಾರ್ಯಕ್ರಮಗಳಿಂದ ಮಕ್ಕಳು ಒಳ್ಳೆಯ ವಿಜ್ಞಾನಿಗಳು ಆಗುವಂತೆ ಹಾಗೂ ಮಕ್ಕಳು ಸಬಲೀಕರಣವಾಗುದಕ್ಕೆ ದಾರಿ ಮಾಡಿಕೊಡುವಂತೆ ಶಿಕ್ಷಕರು, ಪಾಲಕರಿಗೆ ಸಲಹೆ ಮಾಡಿದರು.
ಇಸ್ರೋದ ನಿವೃತ್ತ ವಿಜ್ಞಾನಿ ಪ್ರಭಾಕರ ಕುಲಕರ್ಣಿ ಮಾತನಾಡಿ, ಮುಂದುವರಿದ ರಾಷ್ಟ್ರಗಳನ್ನು ಗಮನಿಸಿದರೆ ಭಾರತ ಬಾಹ್ಯಾಕಾಶ ರಂಗದಲ್ಲಿ ಹಿಂದುಳಿದಿದೆ. ಅದಕ್ಕಾಗಿ ಯುವ ವಿಜ್ಞಾನಿಗಳು ದೇಶವನ್ನು ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ದೇಶ ನಿಲ್ಲಿಸಲು ಸಜ್ಜಾಗಬೇಕಾಗಿದೆ ಎಂದರು.
ಈ ಸಂದರ್ಭ ಕೆ.ಸಿ. ಕುಲಕರ್ಣಿ, ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ.ವಿ. ಘನಶ್ಯಾಮ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಸ್.ಎನ್. ತಿಮ್ಮನಗೌಡರ, ಪಿ.ಎಸ್. ಯಲಿಗಾರ ಉಪಸ್ಥಿತರಿದ್ದರು. ಎಂ.ಜಿ. ಹಿರೇಮಠ ಸ್ವಾಗತಿಸಿದರು. ಪಿ.ಎಂ. ಗಡ್ಡದೇವರಮಠ ವಂದಿಸಿದರು. ಶೋಭಾ ಜಾಗಟಗೇರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

