ಹಾವೇರಿ

ರೈತರಲ್ಲಿ ಹರ್ಷ

Published On :

ಬ್ಯಾಡಗಿ: 3 ವರ್ಷದ ಹಿಂದೆ ಅನುಷ್ಠಾನಗೊಳಿಸಿದ ಭೂಚೇತನ ಯೋಜನೆಯನ್ನು ಪ್ರಸಕ್ತ ವರ್ಷವೂ ಸರ್ಕಾರ ಮುಂದುವರಿಸಿದ್ದು, ಲಾಭದಾಯಕ ಕೃಷಿಗೆ ಸಹಕಾರಿಯಾದ ಈ ಯೋಜನೆಗೆ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಒದಗಿಸಿದೆ. ಹೀಗಾಗಿ ತಾಲೂಕಿನ ರೈತರ ಮೊಗದಲ್ಲಿ ಹರ್ಷ ತುಂಬಿದ್ದು, ಯೋಜನೆಯನ್ನು ಖುಷಿಯಿಂದ ಸ್ವಾಗತಿಸಿದ್ದಾರೆ.
ಸರ್ಕಾರದಿಂದ ಸ್ಪಂದನೆ: ಕೃಷಿಯನ್ನು ಆದ್ಯತಾ ವಲಯವನ್ನಾಗಿ ಪರಗಣಿಸಬೇಕು. ಇದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುದು ರೈತರ ಕೂಗು. ಆದರೆ, ಪ್ರಸಕ್ತ ಬಜೆಟ್‌ನಲ್ಲಿ ರು. 22,310 ಕೋಟಿ ಅನುದಾನ ಕೃಷಿಗೆ ಮೀಸಲಿಡುವ ಮೂಲಕ ಸರ್ಕಾರ ಸ್ಪಂದಿಸಿದೆ. ಪ್ರತಿವರ್ಷ ಒಂದಿಲ್ಲೊಂದು ಕಾರಣಕ್ಕೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಉತ್ತಮ ಯೋಜನೆ ನೀಡುವ ಮೂಲಕ ಕೃಷಿ ಕ್ಷೇತ್ರವನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು. ಇದು ಸರ್ಕಾರದ ಆದ್ಯ ಕರ್ತವ್ಯ ಹಾಗೂ ಅನಿವಾರ್ಯ ಕೂಡ.
ಏನಿದು ಭೂಚೇತನ?: ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ಹಾಗೂ ಅಸಮರ್ಪಕ ಮಳೆಯಿಂದಾಗಿ ಮಣ್ಣಿನ ಫಲವತ್ತತೆ ಕಳೆದುಕೊಳ್ಳುತ್ತಿರುವ ಕೃಷಿಭೂಮಿಗೆ ಜಿಂಕ್, ಸಲ್ಫೇಟ್, ಜಿಪ್ಸಂ, ಬೋರಾನ್, ಟ್ರೈಕೋಡರ್ಮಾ, ಪಿಎಸ್‌ಬಿ ಮುಂತಾದ ಪೋಷಕಾಂಶಗಳನ್ನು ಕೃಷಿಭೂಮಿಗೆ ನೀಡುವ ಮೂಲಕ ಭೂಮಿಯಲ್ಲಿ ತೇವಾಂಶ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂದರ್ಭಗಳಲ್ಲಿಯೂ ಕನಿಷ್ಠ ಇಳುವರಿಯನ್ನಾದರೂ ರೈತ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಮೇಲಿನ ಎಲ್ಲ ಪರಿಕರಗಳನ್ನು ಕೃಷಿ ಇಲಾಖೆ ಮೂಲಕ ಶೇ. 50ರ ಸಹಾಯಧನದಲ್ಲಿ ರೈತರಿಗೆ ಒದಗಿಸಲಾಗುತ್ತದೆ.
ಮಳೆಯಾಶ್ರಿತ ಭೂಮಿಗೆ ಸಹಕಾರಿ: ಬ್ಯಾಡಗಿ ತಾಲೂಕು ಪಶ್ಚಿಮ ಭಾಗದಲ್ಲಿರುವ ಸುಮಾರು 23 ಗ್ರಾಮಗಳು ಅರೆ ಮಲೆನಾಡು ಪ್ರದೇಶದಿಂದ ಕೂಡಿದ್ದರೂ ತಾಲೂಕಿನ ಶೇ. 85ರಷ್ಟು ಕೃಷಿಭೂಮಿ ಮಳೆಯಾಶ್ರಿತವಾಗಿದೆ. ಆದರೆ, ಹೆಚ್ಚು ಇಳುವರಿ ಪಡೆಯುವ ಉದ್ದೇಶದಿಂದ ರೈತರು ಅತಿಯಾಗಿ ರಾಸಾಯನಿಕ ಗೊಬ್ಬರ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಕೃಷಿಭೂಮಿ ಕ್ರಮೇಣ ತನ್ನ ಫಲವತ್ತತೆ ಕಳೆದುಕೊಳ್ಳುವ ಮೂಲಕ ಇಳುವರಿ ಕುಂಠಿತಗೊಂಡಿತ್ತು. ಸಮೀಕ್ಷೆ ನಡೆಸಿದ ಕೃಷಿ ಇಲಾಖೆ, ಭೂಚೇತನ ಯೋಜನೆಯಡಿ ತಾಲೂಕು ಆಯ್ಕೆ ಮಾಡಿದ್ದು, ಕೃಷಿ ಭೂಮಿಗೆ ಚೈತನ್ಯ ತುಂಬುವ ಪ್ರಯತ್ನಕ್ಕೆ ಕೈಹಾಕಿದೆ.
ಯೋಜನೆಯ ವ್ಯಾಪ್ತಿ: ತಾಲೂಕಿನ 44 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಸುಮಾರು 36 ಸಾವಿರ ಹೆಕ್ಟೇರ್ ಮುಂಗಾರು ಬಿತ್ತನೆಯಾಗುವ ನಿರೀಕ್ಷೆಯಿದೆ. ಸುಮಾರು 21 ಸಾವಿರ ಹೆಕ್ಟರ್ ಮೆಕ್ಕೆಜೋಳ ಹಾಗೂ 12 ಸಾವಿರದಲ್ಲಿ ಹತ್ತಿ ಬಿತ್ತನೆಯಾಗಲಿದೆ. ಪ್ರಸಕ್ತ ವರ್ಷ ಒಟ್ಟು 33 ಸಾವಿರ ಹೆಕ್ಟರ್ ಪ್ರದೇಶಕ್ಕೆ ಭೂಚೇತನ ಯೋಜನೆ ಅಳವಡಿಸುವ ಗುರಿಯನ್ನು ಕೃಷಿ ಇಲಾಖೆ ಹೊಂದಿದ್ದು, ಬ್ಯಾಡಗಿ ಹೋಬಳಿಯ 19 ಹಾಗೂ ಕಾಗಿನೆಲೆ ಹೋಬಳಿ ವ್ಯಾಪ್ತಿಯ 14 ಸಾವಿರ ಹೆಕ್ಟರ್ ಕೃಷಿಭೂಮಿ ಯೋಜನೆ ವ್ಯಾಪ್ತಿಗೆ ಒಳಪಡಲಿವೆ.
ತರಬೇತಿ ಕಾರ್ಯಕ್ರಮ: ಭೂಚೇತನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ನಿರ್ಧರಿಸಿರುವ ಕೃಷಿ ಇಲಾಖೆ ನುರಿತ ಅನುವುಗಾರರ ಮೂಲಕ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರಿಗೆ ತಾಂತ್ರಿಕ ಹಾಗೂ ಪ್ರಾಯೋಗಿಕ ತರಬೇತಿ ಶಿಬಿರ ಆಯೋಜಿಸಿದ್ದು, ಬೀಜೋಪಚಾರ, ಮಣ್ಣಿನ ಸಂರಕ್ಷಣೆ ಇನ್ನಿತರ ಮಾಹಿತಿ ಶಿಬಿರದಲ್ಲಿ ನೀಡಲಾಗುವುದು.
ಸಣ್ಣ ಹಿಡುವಳಿದಾರರು: ಸಹಾಯಕ ಕೃಷಿ ನಿರ್ದೇಶಕ ಟಿ.ಎಚ್. ನಟರಾಜ ಈ ಕುರಿತು ಪ್ರತಿಕ್ರಿಯಿಸಿ, 2009-10ರಲ್ಲಿ ಸರ್ಕಾರ ಈ ಯೋಜನೆ ಅನುಷ್ಠಾನಗೊಳಿಸಿದ್ದು, ಕಾರ್ಯಕ್ರಮ ಯಶಸ್ವಿಯತ್ತ ಸಾಗಿದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷವೂ ಯೋಜನೆ ಮುಂದುವರಿಸಿದೆ. ಸಣ್ಣ ಮತ್ತು ಅತೀಸಣ್ಣ ಹಿಡುವಳಿದಾರರಿಗೆ ಶೇ. 50ರ ಸಹಾಯಧನದಲ್ಲಿ ಗೋವಿನಜೋಳ ಹಾಗೂ ಸಸ್ಯ ಸಂರಕ್ಷಣಾ ಔಷಧಿಗಳನ್ನು ಕೃಷಿ ಇಲಾಖೆಯಿಂದ ಪೂರೈಸಲಾಗುವುದು ಎಂದರು.
- ಶಿವಾನಂದ ಮಲ್ಲನಗೌಡರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.