ಕೆರೆಗೆ ನೀರು, ಬೆಳೆವಿಮೆಗೆ ರೈತರ ಆಗ್ರಹ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.11
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತುಂಗಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಬಿಸುವುದು ಹಾಗೂ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಕೂಡಲೇ ಬೆಳೆವಿಮೆ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಇಲ್ಲಿನ ಹೊಸಮನಿ ಸಿದ್ದಪ್ಪ ಸರ್ಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳೆವಿಮೆ ಬಿಡುಗಡೆಗೊಳಿಸಿ: ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಈಗಾಗಲೇ ಜಿಲ್ಲೆ ಬರಗಾಲಪೀಡಿತ ಎಂದು ಘೋಷಣೆಯಾಗಿದ್ದರೂ ಸರ್ಕಾರ ಇದುವರೆಗೆ ಜಿಲ್ಲೆಯ ರೈತರಿಗೆ ಬೆಳೆವಿಮೆ ಬಿಡುಗಡೆ ಮಾಡದಿರುವುದು ವಿಷಾದನೀಯ ಎಂದರು.
ಕೆರೆಗೆ ನೀರು ಹರಿಸಿ: ಈಗಾಗಲೇ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಕೂಡಲೇ ಸರ್ಕಾರ ಬೆಳೆವಿಮೆ ಬಿಡುಗಡೆ ಮಾಡಬೇಕು. ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗಳಿಂದ ಒಣಗಿ ಬರಡಾಗಿರುವ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಮೂಲಕ ಮತ್ತೆ ಜಿಲ್ಲೆ ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕೆಂದು ಆಗ್ರಹಿಸಿದರು.
ನಿರಂತರ ವಿದ್ಯುತ್ ಒದಗಿಸಿ: ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಸಿ.ಸಿ. ಸಣ್ಣಗೌಡ್ರ ಮಾತನಾಡಿ, ರಾಜ್ಯ ಸರ್ಕಾರ ರಾಜಕೀಯ ಕಿತ್ತಾಟದಲ್ಲಿ ತೊಡಗಿ ರೈತರನ್ನು ಕಡೆಗಣಿಸಿದೆ. ಕೇವಲ ಕುರ್ಚಿ ರಾಜಕಾರಣ ಮಾಡಿಕೊಂಡು ರೈತರನ್ನು ಕಡೆಗಣಿಸುತ್ತಿರುವುದು ರೈತ ವಿರೋಧಿ ನೀತಿಯಾಗಿದ್ದು, ಕೂಡಲೇ ರೈತರ ಪಂಪ್‌ಸೆಟ್‌ಗಳಿಗೆ ಅನುಕೂಲವಾಗುವಂತೆ ನಿರಂತರ 12 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು.
ಪರಿಹಾರ ಒದಗಿಸಿ: ಹಲವಾರು ವರ್ಷಗಳಿಂದ ಅರಣ್ಯಭೂಮಿ, ಬಗರಹುಕುಂ, ಗೋಮಾಳ, ಕಂದಾಯ ಭೂಮಿಗಳನ್ನು ಸಾಗುವಳಿ ಮಾಡಿಕೊಂಡು ಬಂದು ಜೀವನ ನಿರ್ವಹಿಸುತ್ತಿರುವ ರೈತರಿಗೆ ಆ ಭೂಮಿಗಳ ಹಕ್ಕುಪತ್ರ ನೀಡಬೇಕು. ತನ್ಮೂಲಕ ಇಂಥ ರೈತರಿಗೆ ಬದುಕಿನ ಭದ್ರತೆ ಕಲ್ಪಿಸಬೇಕು. ತುಂಗಾ ಮೇಲ್ದಂಡೆ ನೀರಾವರಿ ಯೋಜನೆಯಿಂದ ಭೂಮಿ ಕಳೆದುಕೊಂಡಿರುವ ರೈತರಿಗೆ ಯೋಗ್ಯ ಪ್ರಮಾಣದಲ್ಲಿ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಕ್ರಮ ಜರುಗಿಸಿ: ಯಕಲಾಸಪುರ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸುವಂತೆ, ಸುವರ್ಣಭೂಮಿ ಯೋಜನೆ ಫಲಾನುಭವಿಗಳಿಗೆ 2ನೇ ಕಂತಿನ ಹಣ ಬಿಡುಗಡೆ, ಜಿಂಕೆ, ಮಂಗ, ಆನೆ, ಚಿರತೆ ಹಾಗೂ ಕರಡಿಗಳಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದು, ಕೂಡಲೇ ಕ್ರಮ ಜರುಗಿಸುವಂತೆ ಆಗ್ರಹಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮನವಿಯನ್ನು ಶಿರಸ್ತೇದಾರರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಸವಣ್ಣೆಪ್ಪ ನಲವಾಗಲ, ಬಿ.ಕೆ. ರಾಜನಹಳ್ಳಿ, ಸತೀಶ ಈಳಗೇರ, ಪರಮೇಶ ಚಿನ್ನಣ್ಣನವರ, ನಾಗರಾಜ ದೊಡ್ಡಮನಿ, ಕೊಟೆಪ್ಪ ಬೊಮ್ಮನಕಟ್ಟಿ, ಶಿವಬಸಪ್ಪ ಬಸೇಗಣ್ಣಿ, ನಾಗಪ್ಪ ಲಾಠಿ, ಕೊಟ್ರೇಶ ಕರ್ಜಗಿ, ಶಿವಪುತ್ರಪ್ಪ ಶಿವಣ್ಣನವರ, ರೈತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

