ಹಾವೇರಿ

ಹಣಕ್ಕಾಗಿ ಅನಾರೋಗ್ಯಕ್ಕೀಡಾಗುವ ಜನತೆ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ.11
ದುಡ್ಡು ಜೀವನದ ಒಂದು ಭಾಗ ಮಾತ್ರ, ಆದರೆ, ಆರೋಗ್ಯ ಲೆಕ್ಕಿಸದೆ ಹಣದ ಬೆನ್ನು ಹತ್ತಿರುವ ಜನರು ಯಾಂತ್ರಿಕ ಬದುಕು ಸಾಗಿಸುತ್ತಿದ್ದು, ಇದರಿಂದ ಮನುಷ್ಯ ದೀರ್ಘ ಕಾಲದ ರೋಗಕ್ಕೆ ತುತ್ತಾಗುತ್ತಿದ್ದಾನೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಪುಟ್ಟರಾಜ ಅಭಿಪ್ರಾಯಪಟ್ಟರು.
ಸ್ಥಳೀಯ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಮಣಿಪಾಲ್‌ನ ನಿಯೋಸಾಫ್ಟ್ ಮಾರ್ಕೆಟಿಂಗ್ ಇನ್‌ಫಾರ್ಮೆಷನ್ ಸೆಂಟರ್ ಆಶ್ರಯದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಆರೋಗ್ಯ ಶಿಬಿರ ಉದ್ದೇಶಿಸಿ ಮಾತನಾಡಿದರು. ಸಮೀಕ್ಷೆ ವರದಿಯಂತೆ ಶೇ. 30ರಷ್ಟು ಜನರು ಮಧುಮೇಹ ರೋಗದಿಂದ ಬಳಲುತ್ತಿದ್ದಾರೆ.
ಹಣ ಗಳಿಸಲು ತನ್ನ ಆರೋಗ್ಯವನ್ನೇ ಹಾಳು ಮಾಡಿಕೊಳ್ಳುತ್ತಿರುವ ವ್ಯಕ್ತಿ ಕಳೆದುಕೊಂಡ ಆರೋಗ್ಯವನ್ನು ಪಡೆಯಲು ಗಳಿಸಿದ ಹಣವನ್ನೇ ಬಳಸುತ್ತಿದ್ದಾನೆ ಎಂದು ಮಾರ್ಮಿಕವಾಗಿ ನುಡಿದರು.
ಕ್ರಿಯಾಶೀಲತೆ ಕೊರತೆ: ಆರೋಗ್ಯ ಎಲ್ಲಿದಂಲೋ ಕೊಂಡು ತರುವ ವಸ್ತುವಲ್ಲ ಅಥವಾ ಪಿತ್ರಾರ್ಜಿತ ಆಸ್ತಿಯೂ ಅಲ್ಲ. ಏನಿದ್ದರೂ ಸ್ವತಃ ನಾವೇ ಪಡೆದುಕೊಳ್ಳಬೇಕಾಗಿದೆ. ಈ ದಿಶೆಯಲ್ಲಿ ಸಮಾಜದ ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ ಎಂದರು.
ಯಾಂತ್ರಿಕ ಬದುಕಿಗೆ ಹೊಂದಿಕೊಳ್ಳುತ್ತಿರುವ ಜನರು ದೈಹಿಕ ಶ್ರಮದಿಂದ ದೂರ ಉಳಿಯುವಂತಾಗಿದೆ. ಇದರಿಂದ ಮನುಷ್ಯನಲ್ಲಿ ಕ್ರಿಯಾಶೀಲತೆಯ ಕೊರತೆ ಎದ್ದು ಕಾಣುತ್ತಿದ್ದು, ವಾಯು ವಿಹಾರ, ವ್ಯಾಯಾಮ, ಪ್ರಾಣಾಯಾಮ ಸೇರಿದಂತೆ ಪ್ರತಿನಿತ್ಯ ಶ್ರಮದ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಅತ್ಯವಶ್ಯ ಎಂದರು.
ಡಾ. ಮಂಜುಳಾ ಮಾತನಾಡಿ, ತರಕಾರಿ, ಹಣ್ಣು, ಬೇಳೆ ಕಾಳುಗಳ ಜಾಗವನ್ನು ಐಸ್‌ಕ್ರೀಂ, ಡ್ರೈಫುಡ್, ಚಿಪ್ಸ್‌ಗಳು ಅಕ್ರಮಿಸಿದ್ದು, ಬದಲಾದ ಆಹಾರ ಪದ್ಧತಿಯಲ್ಲಿ ಪೌಷ್ಟಿಕಾಂಶಗಳ ಕೊರತೆ ಎದ್ದು ಕಾಣುತ್ತಿದೆ. ಪಾಲಕರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಆರೋಗ್ಯದ ಅರಿವು ನೀಡುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣ ಕೈಜೋಡಿಸುವಂತೆ ಕರೆ ನೀಡಿದರು.
ಮಕ್ಕಳಿಗೆ ತಿಳಿವಳಿಕೆ ಒದಗಿಸಿ: ಡಾ. ದೇವರಾಜ್ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆರೋಗ್ಯ ವೃದ್ಧಿಸುವ ಮತ್ತು ದುಶ್ಚಟಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡುವ ಕೆಲಸವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಶಾಲಾ ಪಠ್ಯಕ್ರಮದ ಆರೋಗ್ಯ ವಿಷಯ ಸೇರ್ಪಡೆ ಮಾಡುವ ಮೂಲಕ ಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡುವಂತಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಚಿನ್ನಮ್ಮ ಫಾಸಿ ಮಾತನಾಡಿ, ಹಿಂದೆ ಪ್ರತಿಯೊಬ್ಬ ವ್ಯಕ್ತಿ ಕೃಷಿ ಹಾಗೂ ಶ್ರಮದಾಯಕ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದು, ಮಧುಮೇಹ ಸೇರಿದಂತೆ ಇನ್ನಿತರ ದೀರ್ಘ ಕಾಯಿಲೆಗಳ ಸುಳಿವಿರಲಿಲ್ಲ. ಇತ್ತೀಚೆಗೆ ಎಲ್ಲದಕ್ಕೂ ಯಂತ್ರ ಅವಲಂಬಿಸುತ್ತಿರುವ ಮನುಷ್ಯನಲ್ಲಿ ಕ್ರಿಯಾಶೀಲತೆ ಮಾಯವಾಗುತ್ತಿವೆ ಎಂದರು. ವೇದಿಕೆಯಲ್ಲಿ ಕ್ಷೇತ್ರಾಭಿವೃದ್ಧಿ ಅಧಿಕಾರಿ ಗಣೇಶ, ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ, ಮಾಲತೇಶ, ಸಾತೇಗೌಡ, ದೀಪಕ್, ಸಿದ್ದೇಶ, ಮಂಗಳಾ ಚಪ್ಪರದಹಳ್ಳಿಮಠ, ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.