ನಗರಸಭೆ ಸಾಮಾನ್ಯ ಸಭೆಯಲ್ಲಿ ಕೋಲಾಹಲ
ಕೊಪ್ಪಳ: ಸ್ಥಳೀಯ ನಗರಸಭೆಯ ಪ್ರಸಕ್ತ ಅವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಸುರೇಶ ದೇಸಾಯಿ ಹಾಗೂ ಸದಸ್ಯ ಚಂದ್ರು ಕವಲೂರು ನಡುವೆ ಜಟಾಪಟಿ ನಡೆದರೆ, ಸದಸ್ಯ ವೀರಣ್ಣ ಹಂಚಿನಾಳ ಅವರು ನಗರಸಭೆ ಆಡಳಿತವನ್ನು ಹೇಡಿ ಆಡಳಿತ ಎಂದರು. ಸಾಲದ್ದಕ್ಕೆ ಅಧ್ಯಕ್ಷ ಸುರೇಶ ದೇಸಾಯಿ ಅವರು ನಗರಸಭೆಯಲ್ಲಿ ಟೈಪಿಸ್ಟ್‌ನಿಂದ ಹಿಡಿದು ಎಲ್ಲರೂ ಅಯೋಗ್ಯರಿದ್ದಾರೆ. ಇವರಿಂದ ಸುಧಾರಣೆ ಸಾಧ್ಯವಿಲ್ಲ ಎಂದು ಜರಿದರು.
ತರಾಟೆ, ವಾಗ್ಯುದ್ಧ: ಅವಧಿ ಪೂರ್ಣಗೊಳ್ಳುವ ಮುನ್ನ ಬುಧವಾರ ನಡೆಸಿದ ಸಾಮಾನ್ಯ ಸಭೆ ಸಾಂಕೇತಿಕವಾಗಿ ಆಗಬೇಕಾಗಿತ್ತು. ಆದರೆ, ಎಲ್ಲರಿಗೂ ಜ್ಞಾನೋದಯವಾದವರಂತೆ ಯರ್ರಾಬಿರ್ರಿಯಾಗಿ ತರಾಟೆಗೆ ತೆಗೆದುಕೊಳ್ಳುವುದು, ವಾಗ್ಯುದ್ಧ ಮಾಡುವುದು ನಡೆದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಹೀಗಾಗಿ, ಸಭೆಯಲ್ಲಿ ಕೋಲಾಹಲ ಉಂಟಾಯಿತು. ಇನ್ನು ಕೆಲ ಸದಸ್ಯರು ಅಸಹಾಯಕತೆ ವ್ಯಕ್ತಪಡಿಸಿದರು.
ಹೆಚ್ಚಿನ ಕರ ವಸೂಲಿ: ಸಭೆ ಪ್ರಾರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಕರ ಹೆಚ್ಚಳವಾಗಿದೆ. ಇದನ್ನು ಕಡಿಮೆ ಮಾಡಿ ಎಂದು ನಗರಸಭೆಯಲ್ಲಿ ಗೊತ್ತುವಳಿ ಮಂಡಿಸಿದರೂ ಅಧಿಕಾರಿಗಳು ಜಾರಿ ಮಾಡಿಲ್ಲ. ರು. 70ಗೆ ನಿಗದಿ ಮಾಡಿ ಎಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿದರೂ ಕಿಮ್ಮತ್ತು ನೀಡದೆ ಮತ್ತೆ ರು. 120 ವಸೂಲಿ ಮಾಡುತ್ತಿದ್ದಾರೆಂದು ದೂರಿದರು.
ತರಾಟೆ: ಕರ ಹೆಚ್ಚಳ ವಿಷಯ ಬಗೆಹರಿಸಿದ ಬಳಿಕವೇ ಮುಂದಿನ ವಿಷಯ ಚರ್ಚಿಸಿ ಎಂದು ಸದಸ್ಯರಾದ ಮಾನ್ವಿ ಪಾಶಾ, ಕಾಟನ್ ಪಾಶಾ, ಮೈಹಬೂಬಸಾಬ ನಾಲಬಂದ್ ಪಟ್ಟು ಹಿಡಿದರು. ಇದಕ್ಕೆ ಸಮರ್ಪಕ ಉತ್ತರ ನೀಡದ ಬಿ.ಎಂ. ಅಶ್ವಿನಿ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಪೌರಾಯುಕ್ತ ಮಾತನಾಡಿ, ನಾವೇ ನೇರವಾಗಿ ಸರ್ಕಾರಕ್ಕೆ ಪ್ರಸ್ತಾವನೆ, ಗೊತ್ತುವಳಿಯನ್ನು ಕಳುಹಿಸಲು ಬರುವುದಿಲ್ಲ. ಜಿಲ್ಲಾಧಿಕಾರಿ ಮೂಲಕ ಕಳುಹಿಸಬೇಕು. ಅದರಂತೆ ಡಿಸಿಯವರಿಗೆ ನೀಡಲಾಗಿದೆ. ರಾಜ್ಯಾದ್ಯಂತ ಈ ಸಮಸ್ಯೆ ಇದ್ದು, ಎಲ್ಲಾ ನಗರಸಭೆಯಲ್ಲಿಯೂ ನೀರಿನ ಕರ ಹೆಚ್ಚಳ ಮಾಡಲಾಗಿದೆ ಎಂದರು.
ಲೆಕ್ಕಪತ್ರಗಳ ಅನುಮೋದನೆ ಪಡೆಯುವ ವೇಳೆಯಲ್ಲಿ ತಪ್ಪಾಗಿ ಮುದ್ರಿಸಿರುವ ಕುರಿತು ಮಾನ್ವಿ ಪಾಶಾರು ಪ್ರಸ್ತಾಪಿಸಿದಾಗ ಸಿಟ್ಟಿಗೆದ್ದ ಅಧ್ಯಕ್ಷ ಸುರೇಶ ದೇಸಾಯಿ, ನೀವು ಮಾಡುವ ತಪ್ಪಿಗೆ ನಾವು ಬೈಸಿಕೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡರು. ನಗರಸಭೆಯಲ್ಲಿ ಟೈಪಿಸ್ಟ್‌ನಿಂದ ಹಿಡಿದು ಎಲ್ಲರೂ ಅಯೋಗ್ಯರಿದ್ದಾರೆ. ಇಲ್ಲಿ ಯಾರು ಕೆಲಸ ಮಾಡಬೇಕು ಎನ್ನುವವರೇ ಇಲ್ಲ ಎಂದು ತಮ್ಮ ಸಿಬ್ಬಂದಿಯನ್ನೇ ತರಾಟೆಗೆ ತೆಗೆದುಕೊಂಡರು.
ಅಧ್ಯಕ್ಷ ಸುರೇಶ ದೇಸಾಯಿ ಮತ್ತು ಚಂದ್ರು ಕವಲೂರು ನಡುವೆ ವಾಗ್ಯುದ್ಧ ನಡೆಯಿತು. ಅವರು ನಮ್ಮ ಶಾಸಕರು, ಸಂಸದರು ಆಗಿದ್ದಾರೆ. ಹೀಗಾಗಿ, ಅವರು ಹೆಸರು ಹಾಕಲಾಗಿದೆ ಎಂದು ಹೇಳಿದರಾದರೂ ಅಂತಿಮ ತೀರ್ಮಾನಕ್ಕೆ ಬರಲಿಲ್ಲ.
ಈ ಸಂದರ್ಭ ಶಕುಂತಲಾ ಹುಡೇಜಾಲಿ, ಇಂದಿರಾ ಬಾವಿಕಟ್ಟಿ, ಸದಸ್ಯ ವೀರಣ್ಣ ಹಂಚಿನಾಳ, ಉಪಾಧ್ಯಕ್ಷ ಅಮ್ಜಾದ್ ಪಟೇಲ ಉಪಸ್ಥಿತರಿದ್ದರು.
ಕ್ಷಮೆ ಯಾಚಿಸಿದ ಹಂಚಿನಾಳ: ಮೂವತ್ತು ತಿಂಗಳಿಂದ ನಗರಸಭೆಯಲ್ಲಿ ಅತ್ಯಂತ ಹೇಡಿ ಆಡಳಿತ ಇದೆ. ಇಲ್ಲಿ ಯಾರಿಗೂ ಏನೂ ಗೊತ್ತಿಲ್ಲ. ಜನರ ಸೇವೆ ಮಾಡುವ ಆಸಕ್ತಿ ಇಲ್ಲ. ಹೀಗಾಗಿ, ಸದಸ್ಯನಾಗಿಯೂ ನಾನು ಜನರ ಸೇವೆ ಮಾಡುವುದಕ್ಕೆ ಅಷ್ಟಾಗಿ ಆಗಲಿಲ್ಲ. ಹೀಗಾಗಿ, ನಾನು ನಗರದ ಜನತೆ ಕ್ಷಮೆ ಯಾಚಿಸುತ್ತೇನೆ. ನಾನು ಸಭೆಯಿಂದ ಹೋಗುತ್ತೇನೆ. ರು. 70 ಕೋಟಿ ಬಂದಿದ್ದರೂ ಏನೂ ಮಾಡಲಾಗಿಲ್ಲ. ಇನ್ನು 3 ವಾರ್ಡ್‌ಗಳಿಗೆ ಸಿಂಹಪಾಲು ಬಳಕೆಯಾಗಿದೆ ಎನ್ನುತ್ತಾ ವೀರಣ್ಣ ಹಂಚಿನಾಳ ಹೊರ ನಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

