ಹಾವೇರಿ

ಸಮಯಪ್ರಜ್ಞೆಯಿಂದ ಕ್ಷೇತ್ರ ಅಭಿವೃದ್ಧಿ

Published On :

ಕನ್ನಡಪ್ರಭ ವಾರ್ತೆ, ಸವಣೂರು, ಫೆ.13
ನಾಲ್ಕು ವರ್ಷಗಳ ಆಡಳಿತಾವಧಿಯನ್ನು ತಾಳ್ಮೆ, ವಿನಯತೆಯೊಂದಿಗೆ ಪೂರ್ಣಗೊಳಿಸಿದ್ದು, ಸ್ಥಿತಪ್ರಜ್ಞತೆ ಹಾಗೂ ಸಮಯಪ್ರಜ್ಞೆಯೊಂದಿಗೆ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಲಾಗಿದೆ. ವಿಧೇಯತೆ, ವಿನಯತೆ ನಮ್ಮ ದೌರ್ಬಲ್ಯಗಳಲ್ಲ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಅಸೈಡ್ ಹಾಗೂ ಆರ್‌ಕೆವಿವೈ ಯೋಜನೆಯಡಿ ಕೈಗೊಳ್ಳಲಾಗಿರುವ ರು. 7.60 ಕೋಟಿ ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕ್ಷೇತ್ರದ ರೈತರಿಗೆ ಸಮರ್ಪಿಸಿ ಮಾತನಾಡಿದರು.
ನಿರಂತರ ಸಂಪರ್ಕ: ತಮ್ಮ ಸಾಧನೆಗಳಿಗೆ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿಯಾಗಿವೆ. ತಮಗೆ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಲಭ್ಯವಾಗಿದೆ. ಅಧಿಕಾರದ ಹಂಗು ಇಲ್ಲದಿದ್ದರೂ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೇನೆ ಎಂದರು.
ನಂಜುಡಪ್ಪ ವರದಿಯನ್ವಯ ಗರಿಷ್ಠ ಪ್ರಯೋಜನವನ್ನು ಸವಣೂರು-ಶಿಗ್ಗಾಂವಿ ಕ್ಷೇತ್ರ ಪಡೆಯಲಿವೆ. ಎಲ್ಲ ಮೂಲಭೂತ ಸೌಲಭ್ಯಗಳೊಂದಿಗೆ ಸುಸಜ್ಜಿತವಾದ ಸವಣೂರಿನ ಮಾರುಕಟ್ಟೆ ಪ್ರಾಂಗಣ ರೈತರಿಗೆ ವರದಾನ ಆಗಲಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ರು. 6 ಕೋಟಿ ವೆಚ್ಚದಲ್ಲಿ ಐಟಿಐ ಕಾಲೇಜು ಸವಣೂರಿನಲ್ಲಿ ಕಾರ್ಯಾರಂಭ ಮಾಡಲಿದೆ.
ಕಾನೂನಿನನ್ವಯ ನಿವೇಶನ: ವಾಜಪೇಯಿ ವಸತಿ ಯೋಜನೆಯಡಿ ಒಂದು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಮಾಲಿ ಕಾರ್ಮಿಕರಿಗೆ, ಡಿ ದರ್ಜೆ ನೌಕರರಿಗೆ ಕಾನೂನಿನನ್ವಯ ನೀಡುವಂತೆ ಸೂಚಿಸಲಾಗಿದೆ. ಸವಣೂರು-ಬಂಕಾಪುರ ರಸ್ತೆಯನ್ನು ದ್ವಿಮುಖ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಮಂಜೂರಾತಿ ಪಡೆಯಲಾಗಿದೆ.
ಆಡಳಿತಾತ್ಮಕ ಅನುಮೋದನೆ: ವಿನೂತನ ಬಜೆಟ್ ಮಂಡಿಸಿರುವ ಸರ್ಕಾರ ಕಲ್ಯಾಣ ಕರ್ನಾಟಕದ ಆಶಯಗಳನ್ನು ಸಾಕಾರಗೊಳಿಸಲಿದೆ ಎಂದರು. 2ನೇ ಹಂತದ ನೀರಾವರಿಗೆ ಈ ವಾರದಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆಯಲಿದೆ. ಇದರೊಂದಿಗೆ ಉಳಿದ 30 ಸಾವಿರ ಹೆಕ್ಟೇರ್ ಕೃಷಿ ಭೂಮಿ ನೀರಾವರಿಗೆ ಒಳಪಡಲಿದೆ.
ಕಾಂಕ್ರಿಟ್ ರಸ್ತೆ ನಿರ್ಮಾಣ: ಅಸೈಡ್ ಯೋಜನೆಯಡಿ ರು. 5 ಕೋಟಿ ವೆಚ್ಚದಲ್ಲಿ ಶಿಗ್ಗಾಂವಿ ಎಪಿಎಂಸಿ ಅಭಿವೃದ್ಧಿಯನ್ನೂ ಕೈಗೊಳ್ಳಲಾಗುತ್ತದೆ. ಸವಣೂರು ನಗರದ ಪ್ರಮುಖ ರಸ್ತೆಗಳನ್ನು ರು. 5 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ಮಾಡಲಾಗುತ್ತದೆ ಎಂದರು.
ಎಪಿಎಂಸಿ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಸವರಾಜ ಸಿಂಧೂರ, ತಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಶಂಕ್ರಣ್ಣ ದೊಡ್ಡಮನಿ, ದೇವಣ್ಣ ಚಾಕಲಬ್ಬಿ, ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ, ಸುಭಾಸ ಗಡೆಪ್ಪನವರ, ವಿರೂಪಾಕ್ಷಪ್ಪ ಸಿಂಧೂರ, ಚಂದ್ರಣ್ಣ ಗುದಗಿ, ಎಸ್.ಜಿ. ಕಲ್ಮಠ, ಗಂಗಪ್ಪ ಬಿದರಿ, ಮಲ್ಲಾರೆಪ್ಪ ತಳ್ಳಿಹಳ್ಳಿ, ಗಂಗಾಧರ ಬಾಣದ, ಗದಿಗೇಶ ಕುಲಕರ್ಣಿ, ಸಿದ್ದಪ್ಪ ಗುಂಜಳ, ವಿ.ಆರ್. ಪಾಟೀಲ್, ಲಲಿತವ್ವ ಯಲವಿಗಿ, ಇನ್ನಿತರರು ಉಪಸ್ಥಿತರಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಹಮಾಲಿ ಕಾರ್ಮಿಕ ಸಂಘದಿಂದ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಫಕ್ಕಣ್ಣ ಅರಗೋಳ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.