ಹಳೆ ನೆನಪಿಗೆ ವೇದಿಕೆಯಾದ ವಿದ್ಯಾಸಂಸ್ಥೆ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಫೆ.18
ಹಳೆಯ ವಿದ್ಯಾರ್ಥಿಗಳ ಹಾಗೂ ಅವರಿಗೆ ವಿದ್ಯಾದಾನ ಮಾಡಿದ ಎಲ್ಲ 80ಕ್ಕೂ ಹೆಚ್ಚು ಶಿಕ್ಷಕರ ವೃಂದ ಸಮಾಗಮದ ಅಭೂತಪೂರ್ವ ಹೃದಯಂಗಮ ಕ್ಷಣಕ್ಕೆ ಸೋಮವಾರ ತಾಲೂಕಿನ ರಟ್ಟಿಹಳ್ಳಿಯ ಕುಮಾರೇಶ್ವರ ವಿದ್ಯಾಸಂಸ್ಥೆ ಸಾಕ್ಷಿಯಾಯಿತು.
1991ರಲ್ಲಿ ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಹಳೆಯ ವಿದ್ಯಾರ್ಥಿಗಳು ಸೋಮವಾರ ತಮ್ಮ ಎಲ್ಲ ಹುದ್ದೆಗಳ ಕಾರ್ಯಗಳನ್ನೂ ಬದಿಗಿರಿಸಿ ಎಲ್ಲ ಹಳೆಯ ಗೆಳೆಯರ ಪುನರ್ಮಿಲನಕ್ಕೆ ಹೆಜ್ಜೆ ಹಾಕಿದ್ದು, ಮನಸ್ಸುಗಳ ಪುನರ್ಮಿಲನದ ಕ್ಷಣ ರೋಮಾಂಚಕಾರಿ ಎನಿಸಿದರೆ, ಮತ್ತೊಂದೆಡೆ ಕಣ್ಣಂಚಿನಲ್ಲಿ ಸಂತಸದ ಕಂಬನಿ ಹರಿದವು.
ಇದೇ ಸಂದರ್ಭ ತಾವು ಕಲಿತ ವಿದ್ಯಾಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಹಾಗೂ ಗುರುವಂದನಾ ಸಮಾರಂಭಕ್ಕೆ ಸಾಕ್ಷಿಯಾದ ಎಲ್ಲ ಹಳೆ ಗೆಳೆಯರು ತಾವು ಕಳೆದ ವಿದ್ಯಾರ್ಥಿ ಜೀವನದ ಮೆಲುಕು ಹಾಕಿದರು.
ಗುರುವೃಂದಕ್ಕೆ ಸನ್ಮಾನ: ಇದರ ವೇದಿಕೆ ನಿರ್ಮಿಸಿದ ರೂವಾರಿ ರಾಜು ವೇರ್ಣೇಕರ. ಹಳೆಯ ಗೆಳೆಯರನ್ನು ಕಲೆಹಾಕುವ, ತಮಗೆ ಸಂಸ್ಕಾರ ನೀಡಿದ ಗುರುಗಳನ್ನು ಒಂದೆಡೆ ಸೇರಿಸಿ ನಮಿಸಿ, ಪುನಃ ಆಶೀರ್ವಾದ ಪಡೆಯುವ ಹಂಬಲದೊಂದಿಗೆ ಎಲ್ಲ ಗೆಳೆಯರ ಪೂರ್ಣ ವಿವರ ಮುದ್ರಿಸಿ ಅದನ್ನು ಕಂಪು ಎಂಬ ಸ್ಮರಣ ಸಂಚಿಕೆ ಮಾಡಿ ಬಿಡುಗಡೆಗೊಳಿಸಿದರು. ರಟ್ಟಿಹಳ್ಳಿ ಕುಮಾರೇಶ್ವರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎನ್.ಸಿ. ಕಠಾರೆ ಅಧ್ಯಕ್ಷತೆ ವಹಿಸಿ ಗುರುವರ್ಯರನ್ನು ಸನ್ಮಾನಿಸಿ ಕಣ್ತುಂಬಿಕೊಂಡರು.
ಪುನರ್ಜನ್ಮವಿದ್ದರೆ ಶಿಕ್ಷಕವಾಗುವೆ: ಸನ್ಮಾನಿತ ನಿವೃತ್ತ ಗುರವೃಂದ ಪರ ಹೆಗ್ಗಪ್ಪ ಮಡಿವಾಳರ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದುದು. ನನಗೆ ಪುನರ್ಜನ್ಮ ಇದ್ದರೆ ಪುನಃ ಶಿಕ್ಷಕನಾಗುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುವ ಆಶಯ ವ್ಯಕ್ತಪಡಿಸಿದರು. ನಿರ್ವಂಚನೆ, ಗುಣಾತ್ಮಕ ಶಿಕ್ಷಣ, ಮಕ್ಕಳೇ ದೇವರು ಎನ್ನುವುದನ್ನು ತಿಳಿದಾಗ ಶಿಕ್ಷಣ, ಸಂಸ್ಕಾರಗಳಿಗೆ ಅರ್ಥ ಮೂಡುತ್ತದೆ ಎಂದರು. ನಿವೃತ್ತ ಉಪನ್ಯಾಸಕ ಎಂ.ಎಚ್. ಹರವಿಶೆಟ್ಟರ ಮಾತನಾಡಿದರು. ಮಕ್ಕಳ ಶಿಕ್ಷಣ ತಜ್ಞ ಕೆ. ಪ್ರಕಾಶರಾವ್ ಉಪನ್ಯಾಸ ನೀಡಿದರು.
ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ವೈ.ಎಲ್. ಬಾಜಿರಾಯರ, ಎಂ.ಎಸ್. ಬೆಟ್ಟಣ್ಣನವರ, ಬಿ.ಜಿ. ಅಮೋಘಿಮಠ ಉಪಸ್ಥಿತರಿದ್ದರು. ವಿದ್ಯಾರ್ಥಿ ಬಳಗದ ಪರ ಅನಿಲ ಹೊಸಮನಿ, ವಿಜಯ ಮೊಟೇಬೆನ್ನೂರು, ಸುಭಾಶ್ಚಂದ್ರ, ಇನ್ನಿತರರು ಮಾತನಾಡಿ, ಗುರುಪ್ರೇರಣಾ ಟ್ರಸ್ಟ್ ಸ್ಥಾಪನೆ ಮಾಡಿ ಸಮಾಜ ಸೇವೆಗೆ ಅರ್ಪಣಾ ಮನೋಭಾವದಿಂದ ಕೆಲಸ ಮಾಡುವುದಾಗಿ ತಿಳಿಸಿದರು. ಎಚ್.ಎಸ್. ಚಪ್ಪರದಳ್ಳಿಮಠ ಸ್ವಾಗತಿಸಿದರು. ಚನ್ನವೀರ ಚಕ್ರಸಾಲಿ ನಿರ್ವಹಿಸಿದರು. ಸಿ.ಎಸ್. ಕಬ್ಬಿಣಕಂತಿಮಠ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

