ಹಾವೇರಿ

ನೀತಿ ಸಂಹಿತೆ ಉಲ್ಲಂಘಿಸಿದರೆ ಸೂಕ್ತ ಕ್ರಮ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.21
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಹಾಗೂ ವಿವಿಧ ಪಕ್ಷಗಳಿಗೆ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಕೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾದರಿ ನೀತಿ ಸಂಹಿತೆ, ವೆಚ್ಚದ ಪರಿಶೀಲನೆ ಹಾಗೂ ಶ್ರವಣ ದೃಶ್ಯ ಮಾಧ್ಯಮಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀತಿ ಸಂಹಿತೆ ಮಾ. 11ರ ವರೆಗೆ ಜಾರಿಯಲ್ಲಿರುವುದಾಗಿ ತಿಳಿಸಿದ ಅವರು, ಸ್ಪರ್ಧಿಗಳು ಮತಯಾಚನೆ ಸಂದರ್ಭ ಪ್ರತಿಸ್ಪರ್ಧಿಯನ್ನು ವೈಯಕ್ತಿಕವಾಗಿ ಟೀಕಿಸುವುದಾಗಲಿ, ಉದ್ವೇಗದ ಹೇಳಿಕೆ ನೀಡುವುದಾಗಲಿ ಮಾಡುವಂತಿಲ್ಲ. ದೇವಾಲಯ, ಮಸೀದಿ, ಚರ್ಚೆ ಹಾಗೂ ಪೂಜಾ ಸ್ಥಳಗಳಲ್ಲಿ ಪ್ರಚಾರ ಹಾಗೂ ಮತಯಾಚನೆ ಮಾಡುವುದು ನಿಷೇಧಿಸಿದೆ ಎಂದರು.
ರಾಜಕೀಯ ಪಕ್ಷಗಳನ್ನು ಟೀಕಿಸುವಾಗ ಸಂಬಂಧಿಸಿದ ಪಕ್ಷಗಳ ಕಾರ್ಯನೀತಿ, ಕಾರ್ಯಕ್ರಮ ನೀತಿಗಳಿಗೆ ಮಾತ್ರ ಸೀಮಿತವಾಗಿರಬೇಕು. ಇತರೆ ಪಕ್ಷದ ನಾಯಕರ ಅಥವಾ ಕಾರ್ಯಕರ್ತರ ಖಾಸಗಿ ಜೀವನದ ಯಾವುದೇ ಅಂಶಗಳ ಕುರಿತು(ಪಕ್ಷವಾಗಲಿ, ಅಭ್ಯರ್ಥಿಗಳಾಗಲಿ) ಟೀಕೆ ಮಾಡತಕ್ಕದ್ದಲ್ಲ. ರುಜುವಾತಾಗದ ಆಪಾದನೆ ಅಥವಾ ವಿರೂಪಗೊಳಿಸುವ ಸಂಗತಿಗಳ ಕುರಿತು ಕಾರ್ಯಕರ್ತರನ್ನು ಟೀಕಿಸುವಂತಿಲ್ಲ ಎಂದರು.
ಜಾತಿ, ಮತ ಮತ್ತು ಕೋಮುಭಾವನೆ ಆಧಾರದಲ್ಲಿ ಮತ ಕೇಳುವಂತಿಲ್ಲ. ಎಲ್ಲಾ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳು ಮತದಾರರಿಗೆ ಲಂಚದ ಆಮಿಷ, ಬೆದರಿಕೆ, ಬೇರೊಬ್ಬರ ಹೆಸರಿನಲ್ಲಿ ಮತ ಚಲಾವಣೆ ಮಾಡು ವಂತಿಲ್ಲ. ಮತಗಟ್ಟೆಯಿಂದ 100 ಮೀ. ಅಂತರದಲ್ಲಿ ಪ್ರವೇಶಿಸಿ ಪ್ರಚಾರ ಮಾಡುವಂತಿಲ್ಲ. ಮತದಾನ ಆರಂಭದ 48 ಗಂಟೆಗೂ ಮುನ್ನ ಸಾರ್ವಜನಿಕ ಸಭೆ ನಡೆಸುವುದನ್ನು ಸ್ಥಗಿತಗೊಳಿಸಬೇಕು, ಮತದಾರರನ್ನು ವಾಹನದಲ್ಲಿ ಮತ ಗಟ್ಟೆಗೆ ಕರೆತರುವುದು ಹಾಗೂ ಕರೆದುಕೊಂಡು ಹೋಗಲು ಅವಕಾಶವಿಲ್ಲ ಎಂದರು.
ಎಸ್‌ಪಿ ಡಾ. ಚೇತನಸಿಂಗ್ ರಾಠೋರ್, ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಪರವಾಗಿ ಪ್ರಕಟಿಸುವ ಯಾವುದೇ ಪೋಸ್ಟರ್‌ಗಳು, ಪತ್ರಿಕೆ, ಪ್ರಕಟಣಾಪತ್ರ, ಸುತ್ತೋಲೆ ಮತ್ತು ಜಾಹೀರಾತಿನಲ್ಲಿ ಮುದ್ರಕರ ಮತ್ತು ಪ್ರಕಟಿಸುವವರ ಹೆಸರು ಹಾಗೂ ವಿಳಾಸ ತಪ್ಪದೇ ನಮೂದಿಸಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸಿಬ್ಬಂದಿ, ಅಂತಹ ಸಂಸ್ಥೆಗಳಿಗೆ ಸೇರಿದ ಕಟ್ಟಡ, ಮೂಲ ಸೌಕರ್ಯ, ಸಿಬ್ಬಂದಿ, ನಿಧಿ, ವಾಹನಗಳು ಅಥವಾ ಇನ್ನಿತರೆ ಸಾಮಗ್ರಿ ಚುನಾವಣೆಗೆ ಬಳಸಿಕೊಳ್ಳುವಂತಿಲ್ಲ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ, ಉಪ ವಿಭಾಗಾಧಿಕಾರಿಗಳಾದ ಕೆ. ಚನ್ನಬಸಪ್ಪ, ಸತೀಶಕುಮಾರ, ತಾಲೂಕಿನ ತಹಸೀಲ್ದಾರರು, ಡಿವೈಎಸ್‌ಪಿಗಳಾದ ಸಿ.ಸಿ. ಪಾಟೀಲ, ವಿ.ಎ. ಪೂಜಾರ, ಪ್ರಶಾಂತ ನಾಯ್ಕ, ಅಬಕಾರಿ ಇಲಾಖೆಯ ಹೊನ್ನಪ್ಪ ಓಲೇಕಾರ, ಇನ್ನಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.