ಹಾವೇರಿ

ನೋಡಬನ್ನಿ ಡಂಬಳದ ತೋಂಟದಾರ್ಯರ ರೊಟ್ಟಿ ಜಾತ್ರೆ

Published On :

 ಶರಣು ಸೊಲಗಿ
ಮುಂಡರಗಿ: ತಾಲೂಕಿನ ಡಂಬಳದ ತೋಂಟದಾರ್ಯ ಮಠದಲ್ಲಿ ಫೆ. 25ರಿಂದ 4 ದಿನ ಜಾತ್ರಾ ಮಹೋತ್ಸವ ನಡೆಯಲಿದ್ದು, ಫೆ. 26ರಂದು ನಡೆಯುವ ರೊಟ್ಟಿ ಜಾತ್ರೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ತೋಂಟದಾರ್ಯ ಮಠ ಎಂದಾಕ್ಷಣ ಕೋಮು ಸೌಹಾರ್ದ ಹಾಗೂ ಬಸವಣ್ಣನವರ ವಚನಗಳ ಸಾರವನ್ನು ನಾಡಿನ ತುಂಬ ಪಸರಿಸುವ ಕಾಯಕ. ಗದುಗಿನ ತೋಂಟದಾರ್ಯ ಮಠ ಪ್ರಖ್ಯಾತವಾಗಿದ್ದರೂ, ಮೂಲ ಮಠ ಇರುವುದು ಡಂಬಳದಲ್ಲಿ. ಇದು ರೊಟ್ಟಿ ಜಾತ್ರೆಗೆ ಪ್ರಸಿದ್ಧ. ಸುತ್ತಲಿನ ಗ್ರಾಮಸ್ಥರು ಸೇರಿಕೊಂಡು ಸಂಭ್ರಮದಿಂದ ರೊಟ್ಟಿ ಜಾತ್ರೆ ಆಯೋಜಿಸುವುದು ಪ್ರತಿ ವರ್ಷದ ವಿಶೇಷ. ಈ ಜಾತ್ರೆ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದೆ.
90 ಸಾವಿರ ರೊಟ್ಟಿ ಸಂಗ್ರಹ: ಮಠದ ಭಕ್ತರೆಲ್ಲರೂ ಜಾತಿ, ಮತ, ಪಂಥ, ವರ್ಗ, ವರ್ಣಗಳ ಭೇದ ಎಣಿಸದೆ ಸಮಭಾವದಿಂದ ಕೂಡಿಕೊಂಡು ರೊಟ್ಟಿ ಜಾತ್ರೆಯ ದಾಸೋಹದಲ್ಲಿ ಪಾಲ್ಗೊಳ್ಳುವುದು ವಿಶೇಷ. ಈ ಜಾತ್ರೆಯಲ್ಲಿ ಸುಮಾರು 90 ಸಾವಿರಕ್ಕೂ ಅಧಿಕ ರೊಟ್ಟಿಗಳು ಮಠಕ್ಕೆ ಬಂದು ಸಂಗ್ರಹವಾಗುತ್ತವೆ. 4 ದಿನಗಳ ವರೆಗೆ ಜರುಗುವ ರೊಟ್ಟಿ ದಾಸೋಹ ಹಬ್ಬದ ಮೆರುಗನ್ನು ತಂದುಕೊಟ್ಟಿದೆ.
ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರ ಪರಂಪರೆಯ ತೋಂಟದಾರ್ಯ ಮಠದ ಸದ್ಯದ 19ನೇ ಪೀಠಾಧಿಪತಿ, ತ್ರಿವಿಧ ದಾಸೋಹಿ ತೋಂಟದ ಡಾ೤ ಸಿದ್ಧಲಿಂಗ ಶ್ರೀಗಳು. 1974ರಲ್ಲಿ ಪೀಠಾಧಿಕಾರ ವಹಿಸಿಕೊಂಡಂದಿನಿಂದ ಅವಿರತ ಪರಿಶ್ರಮಿಸಿ ಶ್ರೀ ಮಠದ ಉನ್ನತಿಗೆ ಶ್ರಮಿಸಿದ್ದಾರೆ. ಪೀಠಾಧಿಕಾರದ ಸಮಯದಲ್ಲಿ ಡಂಬಳದ ಮಠ ಮತ್ತು ಗದುಗಿನ ಮಠ ಕರುಣಾಜನಕ ಸ್ಥಿತಿಯಲ್ಲಿರುವಾಗ ಸೇವಾದೀಕ್ಷೆ ಪಡೆದ ತೋಂಟದ ಶ್ರೀಗಳು ಜಿಲ್ಲೆಯ ಪ್ರತಿ ಹಳ್ಳಿಗೂ ಪಾದಯಾತ್ರೆ ಕೈಗೊಂಡು, ಜನರಲ್ಲಿ ಜಾಗೃತಿ ಮೂಡಿಸಿ ಮಠದ ಉನ್ನತಿಗೆ ಶ್ರಮಿಸಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಪಾದಿಸಿದ ಕಾಯಕ-ದಾಸೋಹ-ಸಮಾನತೆ-ದಲಿತೋದ್ಧಾರದ ತತ್ವಗಳನ್ನು 15ನೇ ಶತಮಾನದಲ್ಲಿ ಎಡೆಯೂರು ತೋಂಟದ ಡಾ೤ ಸಿದ್ಧಲಿಂಗ ಶಿವಯೋಗಿಗಳು ಮುಂದುವರಿಸಿದ್ದಾರೆ. ಅವರ ತತ್ವಗಳನ್ನೇ ತೋಂಟದ ಸಿದ್ಧಲಿಂಗ ಶ್ರೀಗಳು ಪರಿಪಾಲಿಸುತ್ತ ಬಸವತತ್ವಗಳನ್ನು ತಮ್ಮ ನಡೆ-ನುಡಿಗಳಿಂದ ಪ್ರತಿಪಾದಿಸಿ, ಜನರನ್ನೂ ಬಸವತತ್ವಗಳ ಬಗೆಗೆ ಜಾಗೃತಗೊಳಿಸುವಲ್ಲಿ ಪ್ರಾಮಾಣಿಕರಾಗಿ ಶ್ರಮಿಸುತ್ತಿದ್ದಾರೆ.
ಜಾತ್ರೆಗಳೆಂದರೆ ಕಾಟಾಚಾರಕ್ಕೆ ಆಚರಣೆ ಮಾಡುವುದಲ್ಲ. ಅವು ಸಮಾಜ ಸುಧಾರಣೆ, ಸಮಾನತೆ, ಜ್ಞಾನ ಸಂಪತ್ತು, ಕೋಮು ಸೌಹಾರ್ದ, ಕೃಷಿ ಮುಂತಾದ ಮಾನವೀಯ ಮೌಲ್ಯಗಳನ್ನು ಜನತೆಯಲ್ಲಿ ಬಿತ್ತುವಂತಿರಬೇಕು ಎಂದು ಪ್ರತಿಪಾದಿಸಿ, ಮಾದರಿ ಜಾತ್ರೆಗಳನ್ನಾಗಿ ಪರಿವರ್ತಿಸಿದ್ದಾರೆ. ವಿಶಿಷ್ಟವಾದ ರೊಟ್ಟಿ ಜಾತ್ರೆಯ ಸವಿಯನ್ನು ಸವಿಯಲು ಹೋಗೋಣ ಬನ್ನಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.