ಹಾವೇರಿ

ಬಿಜೆಪಿ ಬಿಟ್ಟವರಿಗೆ ತಕ್ಕ ಪಾಠ

Published On :

ಹಾನಗಲ್ಲ: ಏಕಾಂಗಿ ಹೋರಾಟದ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ. ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ ಅಧಿಕಾರದ ಆಸೆಗೆ ಪಕ್ಷ ಬಿಟ್ಟು ಹೋದವರಿಗೆ ಬುದ್ಧಿ ಕಲಿಸುತ್ತೇವೆ. ಉತ್ತಮ ಆಡಳಿತ ನೀಡುತ್ತೇವೆ ಎಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ ತಿಳಿಸಿದರು.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಾನಗಲ್ಲ ಪುರಸಭೆ ಕಳೆದ ಅವಧಿಯಲ್ಲಿ ಅತ್ಯುತ್ತಮ ಆಡಳಿತ ನೀಡಿದೆ. ಮತ್ತೆ ಬಿಜೆಪಿ ಅಧಿಕಾರ ಹಿಡಿಯಲಿದೆ. ವಾರ್ಡಿನ ಮತದಾರರೊಂದಿಗೆ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲ ಸಮುದಾಯಕ್ಕೂ ಅವಕಾಶ ನೀಡಲಾಗಿದೆ. ಒಂದು ವಾರ್ಡ್‌ನಲ್ಲಿ ಸುಶಿಕ್ಷಿತ ಅಂಗವಿಕಲೆ ಅಭ್ಯರ್ಥಿಯಾಗಿದ್ದಾರೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಿಲ್ಲ ಎಂದರು. ಕಳೆದ ಬಜೆಟ್‌ನಲ್ಲಿ ಹಾನಗಲ್ಲಿನ ಮೂಲಭೂತ ಸೌಕರ್ಯಕ್ಕಾಗಿ ರು. 15 ಕೋಟಿ ಮೀಸಲಿಡಲಾಗಿತ್ತು. ಪ್ರಸಕ್ತ ಆಯ-ವ್ಯಯದಲ್ಲಿ ಪುರಸಭೆಗಳಿಗೆ ತಲಾ ರು. 15 ಕೋಟಿ ಮೀಸಲಿರಿಸುವ ಮೂಲಕ ಪಕ್ಷಾತೀತವಾಗಿ ಅಭಿವೃದ್ಧಿಯ ಕನಸನ್ನು ಶೆಟ್ಟರ್ ನನಸು ಮಾಡಿದ್ದಾರೆ. ಪುರಸಭೆಯ 22 ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಗುಣಮಟ್ಟದ ಕಾಮಗಾರಿ, ಶುದ್ಧ ಕುಡಿಯುವ ನೀರು, ಕಾಂಕ್ರೀಟ್ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ಉದ್ಯಾನವನ ನಿರ್ಮಾಣ, ಹಿಂದುಳಿದ ವಾರ್ಡುಗಳ ಅಭಿವೃದ್ಧಿ, ಟ್ರಾಫಿಕ್ ಸಮಸ್ಯೆ ಪರಿಹಾರ, ಪುರಸಭೆಯಿಂದ ನಿಗದಿತ ಅವಧಿಯಲ್ಲಿ ಸಾರ್ವಜನಿಕರಿಗೆ ದಾಖಲೆ ನೀಡುವುದು ಮುಂತಾದವುಗಳನ್ನು ಈಡೇರಿಸುವ ಸ್ಪಷ್ಟ ನಿಲುವು ಬಿಜೆಪಿಯದ್ದಾಗಿದೆ ಎಂದರು.
ಉದಾಸಿಯಿಂದ ನಷ್ಟವಿಲ್ಲ: ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಿ.ಎಂ. ಉದಾಸಿ ಬಿಜೆಪಿ ತೊರೆದಿರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಪಕ್ಷ ಬಿಟ್ಟು ಹೋದವರು ಬಿಜೆಪಿಗೆ ಧಕ್ಕೆ ತರುವ ಹುನ್ನಾರ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೆ ಹಾನಗಲ್ಲ ತಾಲೂಕಿನಲ್ಲಿ ಉದಾಸಿ ಸರ್ಕಾರವಿತ್ತು. ಪಕ್ಷದ ಕಾರ್ಯಕರ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು. ಚುನಾವಣೆಯಲ್ಲಿ ಅದು ವ್ಯಕ್ತಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಗುಡ್ಡಪ್ಪ ಗುಡ್ಡಪ್ಪನವರ, ಪ್ರಧಾನ ಕಾರ್ಯಗರ್ಶಿ ಅನಂತವಿಕಾಸ ನಿಂಗೋಜಿ, ಜಿಲ್ಲಾ ಉಪಾಧ್ಯಕ್ಷ ಮಿಯ್ಯಾಜಾನ ಕಂಬಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.