ಪಡಿತರ ಕಾರ್ಡ್ ವಿತರಣೆ ಅನ್ಯಾಯ ಸರಿಪಡಿಸಿ
ಹಿರೇಕೆರೂರು: ತಾಲೂಕಿನ ಪಡಿತರ ಕಾರ್ಡ್ ವಿತರಣೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕಾರ್ಯವನ್ನು ವಾರದೊಳಗೆ ಆರಂಭಿಸುವಂತೆ ಶಾಸಕ ಬಿ.ಸಿ. ಪಾಟೀಲ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಅಧಿಕಾರಿ ತರಾಟೆಗೆ: ಅರ್ಹ ಬಡವರ ನೈಜ ಪರಿಸ್ಥಿತಿಯನ್ನು ಅರಿಯದೇ ಬೇಜವಾಬ್ದಾರಿಯಿಂದ 3,000 ಕಡು ಬಡವರ ಪಡಿತರ ಚೀಟಿ ರದ್ದುಗೊಳಿಸಲಾಗಿದೆ. ಇಂತಹ ಬಡವರು ಪಡಿತರ ಇಲ್ಲದೇ ಹೋದಲ್ಲಿ ಬದುಕುವುದು ಹೇಗೆ ಎಂದು ಆಹಾರ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶೀಘ್ರ ವಿತರಣೆ: ಬರಗಾಲದ ಸ್ಥಿತಿ ಚಿಂತಾಜನಕವಾಗಿದೆ. ಸರಿಯಾಗಿ ಸಮೀಕ್ಷೆ ಮಾಡದೇ ಅರ್ಹ ಫಲಾನುಭವಿಗಳ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ. ಇದನ್ನು ಕೂಡಲೇ ಸರಿಪಡಿಸದಿದ್ದಲ್ಲಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಜಿಪಂ ಸದಸ್ಯ ಬಸವರಾಜ ಬೇವಿನಹಳ್ಳಿ ಎಚ್ಚರಿಸಿದರು. ಸಕಾಲ ಯೋಜನೆಯಲ್ಲಿ ಅರ್ಜಿ ಸ್ವೀಕರಿಸಿ 70 ದಿನಗಳಲ್ಲಿ ಕಾರ್ಡ್ ವಿತರಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ತಹಸೀಲ್ದಾರ್ ತುಷಾರ ಹೊಸೂರು ಭರವಸೆ ನೀಡಿದರು.
ಪರಿಶೀಲಿಸಿ ಕ್ರಮ ಕೈಗೊಳ್ಳಿ: ಪಟ್ಟಣ ಪ್ರದೇಶದ ಅನುದಾನಿತ ಶಾಲೆಗಳಲ್ಲಿ ಶೇ. 50ರಷ್ಟು ವಿದ್ಯಾರ್ಥಿಗಳು ಬಿಸಿಯೂಟ ಸೇವಿಸುತ್ತಿಲ್ಲ ಎಂಬ ಮಾಹಿತಿಯನ್ನು ಅಕ್ಷರ ದಾಸೋಹ ಅಧಿಕಾರಿಗಳೇ ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಶಾಲೆಯವರು ಆಹಾರ ಧಾನ್ಯ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಬಿ.ಸಿ. ಪಾಟೀಲ ಆರೋಪಿಸಿ, ಆಗಾಗ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಹಾಗೂ ಖರ್ಚು, ವೆಚ್ಚದ ಬಗ್ಗೆ ಪರಿಶೀಲಿಸಿ, ಏನಾದರೂ ತಪ್ಪು ಕಂಡುಬಂದಲ್ಲಿ ಕ್ರಮ ಜರುಗಿಸಬೇಕು ಎಂದು ಅಕ್ಷರ ದಾಸೋಹ ಅಧಿಕಾರಿಗೆ ಸೂಚಿಸಿದರು.
ಕಾಮಗಾರಿಗೆ ನಿರ್ಲಕ್ಷ್ಯ: ಜಿಪಂ ಸದಸ್ಯೆ ಸುಜಾತಾ ಕೊಟಗಿಮನಿ ಮಾತನಾಡಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಮ್ಮ ಕ್ಷೇತ್ರದ ವಿವಿಧ ಕಡೆಗಳಲ್ಲಿ ಸಿಡಿಗಳನ್ನು ನಿರ್ಮಿಸುವಂತೆ ಒಂದೂವರೆ ವರ್ಷದ ಹಿಂದೆ ಅರ್ಜಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.
ಭ್ರಷ್ಟಾಚಾರ ಮೀತಿ ಮೀರಿದೆ ತುಂಗಾ ಮೇಲ್ದಂಡೆ ಇಲಾಖೆ ಅಭಿಯಂತರರು ಟೆಂಡರ್ ಕರೆಯದೇ ತಮಗೆ ಬೇಕಾದ ಗುತ್ತಿಗೆದಾರರೊಂದಿಗೆ ಕಮೀಷನ್ ಆಧಾರದಲ್ಲಿ ವಿವಿಧ ಕಾಮಗಾರಿಗಳು ಆರಂಭಿಸಿದ್ದಾರೆ. ಈ ಕುರಿತಂತೆ ಕೇಳಿದಲ್ಲಿ ಇದನ್ನು ಕೇಳಲು ನೀವ್ಯಾರು ಎಂದು ನಮ್ಮನ್ನೆ ದಬಾಯಿಸುತ್ತಾರೆ. ಇಲಾಖೆಯಲ್ಲಿ ಭ್ರಷ್ಟಾಚಾರ ಮೀತಿ ಮೀರಿದೆ ಎಂದು ಬಸವರಾಜ ಬೇವಿನಹಳ್ಳಿ ಕಿಡಿಕಾರಿದರು.
ತಾಪಂ ಅಧ್ಯಕ್ಷೆ ಗದಿಗೆವ್ವ ಬಿದರಿ, ಉಪಾಧ್ಯಕ್ಷೆ ರೂಪಾ ಆಡೂರ, ಜಿಪಂ ಸದಸ್ಯೆ ಪಾರ್ವತಿ ಭೋಗಾವಿ, ಶಾಂತವ್ವ ಹಾದಿಮನಿ, ತಾಪಂ ನಾಮನಿರ್ದೇಶನ ಸದಸ್ಯ ಪಾಲಾಕ್ಷಗೌಡ ಪಾಟೀಲ, ಶ್ರೀಕಾಂತ ಕುಲಕರ್ಣಿ, ಅಶೋಕ ಹೆಡಿಯಾಲ, ಚಂದ್ರು ಗಾಳಿ ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಮಾಳಗೇರ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

