ಹಾವೇರಿ

ಹಿರೇಅಣಜಿ ರೈತ ಮಹಿಳೆ ಸ್ವಾವಲಂಬಿ ಹೆಜ್ಜೆಗಳು...

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ.29
ಅತ್ಯಾಧುನಿಕ ತಂತ್ರಜ್ಞಾನ ಅನುಸರಿಸದೇ, ಎರೆಹುಳು ಗೊಬ್ಬರ ತಯಾರಿಸುವುದರೊಂದಿಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ನಡೆಸುತ್ತಿರುವ ತಾಲೂಕಿನ ಹಿರೇಅಣಜಿ ಗ್ರಾಮದ ಕೃಷಿಕ ಮಹಿಳೆ ಬೇಬಕ್ಕ ಬಾರಂಗಿ ಇತರರಿಗೆ ಮಾದರಿ.
ಹಸಿರು ಕ್ರಾಂತಿಯ ಪರಿಣಾಮ ಹೈಬ್ರೀಡ್ ಬೀಜ ಹಾಗೂ ರಾಸಾಯನಿಕ ಗೊಬ್ಬರ ಬಳಕೆ ಆರಂಭಿಸಲಾಯಿತು, ಇದರಿಂದ ದೇಶದಲ್ಲಿದ್ದ ಆಹಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಯಿತು. ಆದರೆ, ಅದಕ್ಕೆ ಅಂಟಿಕೊಂಡ ರೈತರು ಇಂದಿಗೂ ಲಕ್ಷಗಟ್ಟಲೇ ಹಣವ್ಯಯಿಸಿ ರಸಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಇದರಿಂದ ಫಲವತ್ತಾದ ಕೃಷಿಭೂಮಿ ತನ್ನ ಉತ್ಪಾದನಾ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. ನಷ್ಟಕ್ಕೆ ಸಿಲುಕಿದ ರೈತ ಕೃಷಿಯಿಂದ ವಿಮುಖವಾಗುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ರೈತರಿಗೆ ಸಂಜೀವಿನಿ ಎನಿಸಿರುವ ಎರೆಹುಳು ಗೊಬ್ಬರ ತಯಾರಿಕೆ ಬೇಬಕ್ಕನ ಕಸುಬು.
ಕೂಲಿಗೆ ತಿಲಾಂಜಲಿ
ಸಂಪ್ರದಾಯಸ್ಥ ಬಡ ಕುಟುಂಬ ಹಿನ್ನೆಲೆಯುಳ್ಳ ಬೇಬಕ್ಕ, ತುತ್ತಿನ ಚೀಲ ತುಂಬಿಸಿಕೊಳ್ಳಲು ಕೂಲಿ ಕೆಲಸ ಮಾಡುತ್ತಿದ್ದಳು. ಜೀವನ ನಿರ್ವಹಣೆ ಮಾಡುವುದೇ ದುಸ್ತರವೆನಿಸಿದ್ದ ಕಾಲದಲ್ಲಿ, ಏನಾದರೂ ಮಾಡಿ ಕಷ್ಟದ ದಿನಗಳನ್ನು ದೂರ ತಳ್ಳಬೇಕೆಂದು ಚಿಂತಿಸಿದ ಈಕೆ ಆಯ್ಕೆ ಮಾಡಿಕೊಂಡಿದ್ದು ಸಾವಯವ ಕೃಷಿಗೆ ಬೇಕಾದ ಎರೆಹುಳು ಗೊಬ್ಬರ ತಯಾರಿಕೆ. ಇದರಲ್ಲಿ ಪ್ರಾಯೋಗಿಕ ಯಶಸ್ಸು ಕಂಡುಕೊಂಡ ಬೇಬಕ್ಕ ಮನಸ್ಸು ಮಾಡಿದರೇ ಮಹಿಳೆ ಏನೆಲ್ಲಾ ಸಾಧಿಸಬಲ್ಲಳು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾಳೆ.
ಎರೆಹುಳು ಗೊಬ್ಬರ ಘಟಕ
ಮನೆ ಸುತ್ತಲಿರುವ 10 ಗುಂಟೆ ಜಮೀನಿನಲ್ಲಿ ಸ್ಥಳೀಯ ಕೃಷಿ ಇಲಾಖೆಯ ಸಹಾಯ ಧನದೊಂದಿಗೆ 15 ಅಡಿ ಉದ್ದದ 8 ತೊಟ್ಟಿ ನಿರ್ಮಿಸಿ, ಅದರಲ್ಲಿ ಎರೆಹುಳು ಸಾಕಾಣಿಕೆ ಆರಂಭಸಿದಳು. ಪ್ರತಿವರ್ಷ ಸುಮಾರು 550 ಚೀಲ ಎರೆಹುಳು ಗೊಬ್ಬರ ತಯಾರಿಸುತ್ತಿರುವ ಈಕೆಗೆ ಮಾರಾಟದ ಹಣದಿಂದ ಏನಿಲ್ಲವೆಂದರೂ # 1 ಲಕ್ಷ ಗಳಿಗಿಂತ ಅಧಿಕ ಲಾಭ ಬರುತ್ತಿದೆ. ಉತ್ಕೃಷ್ಟ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ಬೇಬಕ್ಕ ಇದೀಗ ಎತ್ತಿದ ಕೈ. ಕೇವಲ 3ನೇ ತರಗತಿ ಓದಿರುವ ಬೇಬಕ್ಕ, ಮನೆಯ ಸುತ್ತಲಿನ ಅತ್ಯಲ್ಪ ಜಾಗದಲ್ಲಿ, ಕೋಳಿ ಸಾಕಾಣಿಕೆ, ನುಗ್ಗೆಕಾಯಿ, ತೊಂಡೆ, ಅಜೂಲಾ ಸೊಪ್ಪು, ಗುಲಾಬಿ ಇನ್ನಿತರ ಕೈತೋಟ ನಿರ್ಮಿಸಿದ್ದು ಸಮಗ್ರ ಕೃಷಿ ಕಲ್ಪನೆ ಇಲ್ಲಿದೆ. ಗಿರಿರಾಜ ತಳಿ ಕೋಳಿ ಸಾಕಾಣಿಕೆ ತೊಡಗಿರುವ ಬೇಬಕ್ಕ ಅವುಗಳ ಆಹಾರಕ್ಕೆ ಮನೆ ಸುತ್ತಲೂ ಅಜೂಲಾ ಬೆಳೆಸಿದ್ದು ಆಹಾರಕ್ಕೆ ಬಿಡಿಗಾಸು ಹಣ ವ್ಯಯಿಸುವುದಿಲ್ಲ. ನುಗ್ಗೆಕಾಯಿ (ಜವಾರಿತಳಿ) ಗಿಡ ಬೆಳೆಸಿದ್ದು ಸುಮಾರು 40 ಸಾವಿರಕ್ಕೂ ಹೆಚ್ಚು ಮೌಲ್ಯದ ನುಗ್ಗೆಕಾಯಿ ಪ್ರತಿವರ್ಷ ಮಾರಾಟ ಮಾಡುತ್ತಿದ್ದಾಳೆ. ಎರೆಹುಳು ಘಟಕಗಳ ಮೇಲ್ಛಾವಣಿಗೆ ಸಾಮಾನ್ಯವಾಗಿ ತಗಡಿನ ಶೀಟ್ ಬಳಸಲಾಗುತ್ತದೆ. ಆದರೆ, ಬೇಬಕ್ಕ ವಿನೂತನ ಪದ್ಧತಿ ಅನುಸರಿಸಿ ತೊಟ್ಟಿಯ ಸುತ್ತಲೂ ತೊಂಡೆಕಾಯಿ ಬಳ್ಳಿ ಬೆಳೆಸಿದ್ದು ಅವುಗಳನ್ನೇ ಮೇಲ್ಛಾವಣಿ ಮಾಡಲಾಗಿದೆ. ಬಳ್ಳಿಯಿಂದ ಉದುರಿದ ಎಲೆಗಳನ್ನು ತೊಟ್ಟಿಗೆ ಬೀಳುವಂತೆ ಮಾಡಲಾಗಿದೆ. ಪ್ರತಿವಾರ ಏನಿಲ್ಲವೆಂದರೂ # 500 ನಷ್ಟು ತೊಂಡೆಕಾಯಿ ಮಾರಾಟಕ್ಕೆ ಸಿಗುತ್ತವೆ.
ಮನೆ ಹಿಂಭಾಗದಲ್ಲಿ ಜೀವಸಾರ ಘಟಕ ನಿರ್ಮಿಸಿರುವ ಬೇಬಕ್ಕ, ಜಾನುವಾರು ಸಗಣಿ ಹಾಗೂ ಮನೆ ಸುತ್ತಲಿರುವ ಬೇಲಿಗಳಿಂದ ಉದುರಿದ ಎಲೆಗಳನ್ನು ಸಂಗ್ರಹಿಸಿ ಘಟಕದಲ್ಲಿ ಸಂಗ್ರಹಿಸುತ್ತಿದ್ದು ಇದರಿಂದ ಬರುವ ಜೀವಾಮೃತವನ್ನು ಮನೆಯ ಎಡಭಾಗದಲ್ಲಿರುವ ಗುಲಾಬಿ ತೋಟಕ್ಕೆ ಹರಿದು ಬಿಡಲಾಗುತ್ತದೆ. ಸಾವಯವ ಪದ್ಧತಿಯಲ್ಲಿ ಉತ್ಕೃಷ್ಟ ಗುಲಾಬಿ ಹೂಗಳನ್ನು ಬೆಳೆದು ಮಾರಾಟ ಮಾಡುತ್ತಾಳೆ. ಕೇಂದ್ರ ಸರ್ಕಾರ ರೈತರಿಗೆ ರಿಯಾಯಿತಿ ದರದಲ್ಲಿ ಗೊಬ್ಬರ ವಿತರಣೆ ಮಾಡುತ್ತದೆ. ಪ್ರತಿ ಕೆಜಿಗೆ # 40 ನಂತೆ ಸುಮಾರು # 1 ಲಕ್ಷ 17 ಸಾವಿರ ಕೋಟಿ ಸಹಾಯಧನ ಪ್ರತಿವರ್ಷ ಗೊಬ್ಬರಕ್ಕೆ ಬೇಕಾಗುತ್ತಿತ್ತು. ದೇಶಕ್ಕೆ ಅನ್ನ ಹಾಕುವ ಕೃಷಿಕ, ರಾಸಾಯನಿಕ ಗೊಬ್ಬರ ಬಳಕೆ ಮಾಡುವ ಮೂಲಕ ದೇಶಕ್ಕೆ ಹೊರೆ ಆಗುತ್ತಿರುವುದು ವಿಪರ್ಯಾಸದ ಸಂಗತಿ, ಪ್ರಗತಿಶೀಲ ದೇಶಕ್ಕೆ ಇದು ಮಾರಕ ಎನ್ನುವ ಬೇಬಕ್ಕ, ಇತ್ತೀಚೆಗೆ ಸಬ್ಸಿಡಿ ಹಿಂದಕ್ಕೆ ಪಡೆದಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತಾಳೆ.



ಮಾದರಿ ಮಹಿಳೆ: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಸಾವಯವ ಕೃಷಿಪದ್ಧತಿ ಪ್ರಸ್ತುತ ದಿನಗಳಲ್ಲಿ ಸೂಕ್ತವೆನಿಸುತ್ತಿದೆ, ಬೇಬಕ್ಕ ಜಿಲ್ಲೆಯಲ್ಲೇ ಮಾದರಿ ಮಹಿಳೆ, ಇಲಾಖೆಯ ಯೋಜನೆಗಳ ಲಾಭ ಪಡೆದು ಪ್ರತಿಯೊಬ್ಬ ಮಹಿಳೆಯರು ಸ್ವಾವಲಂಬಿ ಬದುಕು ನಡೆಸುವಂತಾಗಬೇಕೆಂದು ಸಹಾಯಕ ಕೃಷಿ ನಿರ್ದೇಶಕ ನಟರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.