ಹಾವೇರಿ

ಕಾಮಗಾರಿಗಳಲ್ಲಿ ಅವ್ಯವಹಾರ ನಡೆದರೂ ಕ್ರಮವಿಲ್ಲ: ಆಕ್ರೋಶ

Published On :



ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ. 29
ಶಿಕ್ಷಣ ಇಲಾಖೆ ಕಾಮಗಾರಿಗಳ ಅನುಷ್ಠಾನದಲ್ಲಿ ಭಾರಿ ಅವ್ಯವಹಾರ ನಡೆದಿದ್ದರೂ ಹಿರಿಯ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಜರುಗಿಸದೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದರ ವಿರುದ್ಧ ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಶಿಕ್ಷಣ ಇಲಾಖೆಯ ಪ್ರಗತಿ ಕುರಿತು ಚರ್ಚೆ ನಡೆದು ಸದಸ್ಯ ಸುರೇಶ ನೆರ್ಕಿಮನಿ ಮಾತನಾಡಿ, ಶಾಲಾ ಕೊಠಡಿ, ಶೌಚಾಲಯ, ಆವರಣ ಗೋಡೆ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ. ಈ ಕುರಿತು ಇಲಾಖೆಯ ಗಮನ ಸೆಳೆದರೂ ಯಾವುದೇ ಕ್ರಮ ಜರುಗಿಸಿಲ್ಲ. ಮಾರನಬೀಡ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊಳವೆ ಬಾವಿ ಕೊರೆಸಲು # 70 ಸಾವಿರ ಮಂಜೂರಾಗಿದ್ದು, ಖರ್ಚು ಮಾಡಲಾಗಿದೆ. ಆದರೆ ಕೊಳವೆಬಾವಿ ಮಾತ್ರ ಕಾಣುತ್ತಿಲ್ಲ. ನಿರ್ಮಿಸಿಲ್ಲವೋ ಅಥವಾ ಕಳೆದು ಹೋಗಿದೆಯೋ ಎಂಬ ಸಂಶಯವಿದೆ ವ್ಯಕ್ತವಾಗುತ್ತಿದೆ ಎಂದರು.
ಇದೇ ಶಾಲೆಗೆ ಬಿಸಿಯೂಟದ ಕೊಠಡಿ ನಿರ್ಮಾಣಕ್ಕೂ ಹಣ ಖರ್ಚು ಮಾಡಿದ ದಾಖಲೆಗಳಿವೆ. ಆದರೂ ನಿರ್ಮಾಣ ಆಗಿಲ್ಲ. ಮುಖ್ಯೋಪಾಧ್ಯಯರು ಮಾಹಿತಿ ನೀಡದೆ ತಲೆ ಮರೆಸಿಕೊಂಡಿದ್ದಾರೆ. ಈ ಗೊಂದಲದಿಂದ ಶಾಲೆಯ ಇತರ ಶಿಕ್ಷಕರಿಗೆ 5 ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಬಗ್ಗೆ ನಿರಾಸಕ್ತಿ ತೋರಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಅಗಿರುವ ತಪ್ಪನ್ನು ಸಭೆಯಲ್ಲಿ ಒಪ್ಪಿಕೊಂಡರೂ ಕ್ರಮ ಜರುಗಿಸುವ ಧೈರ್ಯ ತೋರಲಿಲ್ಲ.
ಉಪ್ಪಣಸಿಯಲ್ಲಿ ಶಿಕ್ಷಕರ ವಸತಿ ಗೃಹ ನಿರ್ಮಾಣದಲ್ಲಿ ನಿರ್ಮಿತಿ ಕೇಂದ್ರ ಭಾರಿ ಅವ್ಯವಹಾರ ನಡೆಸಿದೆ ಎಂದು ತಾಪಂ ಸದಸ್ಯೆ ವಿಜಯಲಕ್ಷ್ಮೀ ಹಿರೇಮಠ ಹೇಳಿದರು. ಈ ಕುರಿತು ಜಿಪಂ ಸಭೆಯಲ್ಲಿ ಸದಸ್ಯರು ಕೂಲಂಕಷವಾಗಿ ಚರ್ಚಿಸಿ, ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ತಾಲೂಕಿನಲ್ಲಿ # 7.32 ಕೋಟಿ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಹಣ ಮಂಜೂರಾಗಿ ಕಾಮಗಾರಿ ನಡೆದಿದೆ. ಆದರೆ, ಅಭಿಯಂತರರು ಕಾಮಗಾರಿ ಪರಿಶೀಲನೆ ನಡೆಸಿಲ್ಲ. ಕಾಮಗಾರಿ ಕಳಪೆಯಾಗಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಪಂ ಸದಸ್ಯ ಬಸವರಾಜ ಹಾದಿಮನಿ ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ಮುಖ್ಯೋಪಾಧ್ಯಾಯರು ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಇಟ್ಟಿಗೆ- ಸಿಮೆಂಟ್ ಖರೀದಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಬಹುತೇಕ ಶಾಲೆಗಳಲ್ಲಿ ಪಾಠ ಹೇಳುವುದು ಸ್ಥಗಿತಗೊಂಡಿದೆ ಎಂದರು.
ಹೈಟೆಕ್ ಶೌಚಾಲಯ ನಿರ್ಮಾಣಕ್ಕಾಗಿ ತಲಾ # 1.53 ಲಕ್ಷ ಬಿಡುಗಡೆ ಮಾಡಲಾಗಿದೆ. ಆದರೆ ಕಳಪೆ ಸಾಮಗ್ರಿ ಬಳಸಿದ್ದು, ಅನುದಾನಕ್ಕೆ ಅನುಗುಣವಾಗಿ ಕೆಲಸವಾಗಿಲ್ಲ. ಇದನ್ನೆಲ್ಲ ತಡೆಯಲು ಯಾರು ಬರಬೇಕು ಎಂಬುದೇ ಪ್ರಶ್ನೆಯಾಗಿದೆ ಎಂದು ಅವರು ವಿಷಾದಿಸಿದರು.
ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಗೀತಾ ಅಂಕಸಖಾನಿ, ಸಬಿದಾಬಿ ನದಾಫ. ಕಸ್ತೂರೆವ್ವ ವಡ್ಡರ, ಇಓ ಮನೋಜಕುಮಾರ ಗಡಬಳ್ಳಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.