ಕನ್ನಡ ಪ್ರೀತಿಸುವವರು ಕಡಿಮೆ: ಛತ್ರದ
ಗುದ್ಲೆಪ್ಪ ಹಳ್ಳಿಕೇರಿ ವೇದಿಕೆ, ಹೊಸರಿತ್ತಿ, ಜ. 31
ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ವಿಶ್ವದ ಪ್ರಾಚೀನ ಹಾಗೂ ಐತಿಹಾಸಿಕ ಭಾಷೆಗಳಲ್ಲಿ ಒಂದು. ಕನ್ನಡಕ್ಕೆ ವಿರೋಧಿಗಳಿಲ್ಲ. ಆದರೆ, ಪ್ರೀತಿಸುವವರೇ ಕಡಿಮೆಯಾಗಿದ್ದಾರೆ ಎಂದು ಸಾಹಿತಿ ಜೀವರಾಜ ಛತ್ರದ ನುಡಿದರು.
ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿ ನಡೆದ 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನದ ಜಿಲ್ಲಾ ದರ್ಶನ ಗೋಷ್ಠಿಯಲ್ಲಿ ಹಾವೇರಿ ಜಿಲ್ಲೆಯ ಸಾಹಿತ್ಯ ಪರಂಪರೆ ಕುರಿತಂತೆ ಮಾತನಾಡಿದ ಅವರು, ಕನ್ನಡಕ್ಕೆ ಐತಿಹಾಸಿಕ ಹಿನ್ನೆಲೆ ಇರುವುದನ್ನು ಮುಕ್ತವಾಗಿ ಒಪ್ಪಿಕೊಳ್ಳಲು ನಮಗೆ ಆಧಾರಗಳ ಕೊರತೆ ಇದೆ. ಗ್ರೀಕ್ ಮತ್ತು ಜರ್ಮನ್ ಶಾಸನಗಳಲ್ಲಿ ದೊರೆತ ಕನ್ನಡ ಅಕ್ಷರಗಳ ಆಧಾರದಲ್ಲಿ ಈ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ ಎನ್ನುತ್ತೇನೆ. ಕ್ರಿ.ಪೂ. 450ರ ಹಲ್ಮಿಡಿ ಶಾಸನದ ಆಧಾರದಲ್ಲೇ ಕನ್ನಡದ ಇತಿಹಾಸ ನಿರ್ಧರಿಸಲಾಗುತ್ತದೆ. ಪಂಪ, ರನ್ನ, ಪೊನ್ನ, ಜನ್ನ, ರಾಘವಾಂಕ ಇತ್ಯಾದಿ ದಿಗ್ಗಜರ ಕಾರಣದಿಂದ 10ನೇ ಶತಮಾನವನ್ನು ಕನ್ನಡದ ಸುವರ್ಣಯುಗ ಎನ್ನಲಾಗುತ್ತದೆ ಎಂದರು.
ಕವಿಯಾದವನಿಗೆ ವಿಶಿಷ್ಟ ದೃಷ್ಟಿಕೋನವಿದೆ. ಈ ನಿಟ್ಟಿನಲ್ಲಿ ಆತ ಮುಂದುವರಿದಾಗ ಭಾಷೆಗೆ ಮೌಲ್ಯ ಒದಗಿಸಲು ಸಾಧ್ಯವಿದೆ ಎಂದರು. ಹಾವೇರಿ ಜಿಲ್ಲೆಯ ಅನೇಕ ಗ್ರಾಮಗಳು ಇತಿಹಾಸದ ದಾಖಲೆಗಳನ್ನು ತಮ್ಮ ಗರ್ಭದಲ್ಲಿ ಹುದುಗಿಸಿಕೊಂಡಿವೆ. ಹಿರೇಕೆರೂರು ತಾಲೂಕಿನಲ್ಲಿ ಸಾಕಷ್ಟು ಶಾಸನಗಳು ದೊರೆತಿವೆ. 10ನೇ ಶತಮಾನದಲ್ಲಿ ಆದಿಪುರಾಣ, ಅಬಲೂರಿನಲ್ಲಿ ಕ್ರಿ.ಶ. 1174ರಲ್ಲಿ ಅಚರಾಜನ ಗ್ರಂಥ, 1200ರಲ್ಲಿ ಏಕಾಂತರಾಮಯ್ಯನ ಕೃತಿ, 1230ರಲ್ಲಿ ತುಡುಗೆಯ ತಿಮ್ಮಯ್ಯನ ಕೃತಿ, ಕ್ರಿ.ಶ. 902ರಲ್ಲಿ ಚಿಕ್ಕೇರೂರು ಹಾಗೂ ಸಾತೇನಹಳ್ಳಿ ಗ್ರಾಮಗಳಲ್ಲಿ ಸೇನಬೋಗನ ಗ್ರಂಥ ಮುಂತಾದ ಕೃತಿಗಳನ್ನು ಹಾವೇರಿ ಜಿಲ್ಲೆ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದೆ ಎಂದರು. ಡಾ ಸುಮಂಗಲಾ ಅತ್ತಿಗೇರಿ, ಪ್ರೊ ಬಿ.ಎಸ್. ಯಾವಗಲ್ಲ, ಪಕ್ಕಣ್ಣ ಅರಗೋಳ, ಪ್ರೊ ಆರ್.ಕೆ. ಬೆಳ್ಳಿಗಟ್ಟಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

