ಹಾವೇರಿ

ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸಿ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜು. 1
ಕಾಡು ಪ್ರಾಣಿಗಳಿಂದ ಹಾನಿಗೊಳಗಾಗಿರುವ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ತಾಲೂಕಿನ ರೈತರು ನಗರದ ಪ್ರಮುಖ ಬೀದಿಗಳಲ್ಲಿ ಎತ್ತಿನ ಬಂಡಿಯ ಮೆರವಣಿಗೆ ನಡೆಸುವ ಮೂಲಕ ಮಿನಿ ವಿಧಾನಸೌಧದ ಎದುರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.
ರೈತರಿಗೆ ಸೂಕ್ತ ಪರಿಹಾರ ನೀಡದೆ ಸತಾಯಿಸುತ್ತಿರುವ ತಪ್ಪಿತಸ್ಧ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತರಿಂದ ಧಿಕ್ಕಾರ: ನಗರದ ಕುರುಬಗೇರಿಯ ಸೂಪ್ಪಿನ ಪೇಟೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ನಗರ ಮತ್ತು ತಾಲೂಕಿನ ವಿವಿಧ ಗ್ರಾಮಗಳ ರೈತರು, ತಮ್ಮ ಜಮೀನುಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಹಾನಿಗೊಳಗಾಗಿರುವ ಬೆಳೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಅಪಾರ ಖರ್ಚು: ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಕಡೂರು ಮಾತನಾಡಿ, ಕಳೆದ 3 ತಿಂಗಳಿಂದ ರೈತರು ತಮ್ಮ ಜಮೀನು ಹದಗೊಳಿಸಿ ಅವರಿವರ ಹತ್ತಿರ ಮತ್ತು ದಲಾಲರ ಅಂಗಡಿಗಳಲ್ಲಿ ಹಾಗೂ ಬ್ಯಾಂಕುಗಳಲ್ಲಿ ಲಕ್ಷಾಂತರ ರುಪಾಯಿ ಸಾಲ ಮಾಡಿ ಗೊಬ್ಬರ, ಬೀಜಗಳನ್ನು ಖರೀದಿಸಿ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದಾರೆ.
ಪ್ರಾಣಿ ಹಾವಳಿ ನಿಯಂತ್ರಿಸಿ: ಈ ಮಧ್ಯೆ ಗೋವಿನಜೋಳ, ಶೇಂಗಾ, ಸೂರ್ಯಕಾಂತಿ, ಹೈಬ್ರಿಡ್ ಜೋಳಗಳನ್ನು ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿ ಸಂಜೆ ಮನೆಗೆ ತೆರಳಿದ್ದ ನಂತರ ರಾತ್ರಿ ರೈತರ ಹೊಲಗಳಿಗೆ ಲಗ್ಗೆ ಹಾಕುವ ಕಾಡು ಹಂದಿಗಳು ಬಿತ್ತನೆ ಮಾಡಿದ ರೀತಿಯಲ್ಲಿ ಬೀಜಗಳನ್ನು ಅಗೆದು ತಿನ್ನುತ್ತವೆ. ಅಲ್ಲದೆ ಬಿತ್ತನೆ ನಂತರ ಹುಟ್ಟಿದ ಬೆಳೆಯನ್ನು ಹಗಲಿನ ಸಮಯದಲ್ಲಿ ಚಿಗರಿಗಳು ತಿನ್ನುವುದರೊಂದಿಗೆ ರೈತರನ್ನು ಸಂಕಷ್ಟಕ್ಕೀಡು ಮಾಡುತ್ತಿರುವ ಕಾಡು ಪ್ರಾಣಿಗಳನ್ನು ನಿಯಂತ್ರಿಸುವಲ್ಲಿ ವಿಫಲಗೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ರೈತರು ಹಗಲಿನಲ್ಲಿ ಬಿತ್ತನೆ ಮಾಡಿ ರಾತ್ರಿ ಸಮಯದಲ್ಲಿ ನೆಮ್ಮದಿಯಿಂದ ಮನೆಯಲ್ಲಿ ಮಲಗುವ ಬದಲು, ಹೊಲಗಳಲ್ಲಿ ಬಿತ್ತನೆ ಮಾಡಿರುವ ಬೀಜಗಳನ್ನು ಕಾಡು ಹಂದಿಗಳು ತಿಂದು ನಾಶಪಡಿಸುತ್ತವೆ. ಅನೇಕ ರೈತರು ರಾತ್ರಿ 7ರಿಂದ ಬೆಳಗಿನ ಸಮಯದವರೆಗೆ ನಿದ್ದೆ ಮಾಡದೆ ಜೀವ ಭಯದಿಂದ ನಿದ್ದೆಗೆಟ್ಟು ಬಿತ್ತನೆ ಮಾಡಿದ ಹೊಲಗಳನ್ನು ಕಾಯುವಂತಹ ಸ್ಥಿತಿ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಹಂದಿಗಳನ್ನು ನಿಯಂತ್ರಿಸದಿರುವುದೆ ಮುಖ್ಯ ಕಾರಣವಾಗಿದೆ. ರೈತರ ಬೆಳೆಗಳಿಗೆ ತೊಂದರೆ ನೀಡುತ್ತಿರುವ ಕಾಡುಪ್ರಾಣಿಗಳನ್ನು ನಿಯಂತ್ರಿಸುವಲ್ಲಿ ವಿಫಲಗೊಂಡಿರುವ ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ. ಹಾನಿಗೊಳಗಾಗಿರುವ ರೈತರ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು, ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಬಸವರಾಜ ಕಡೂರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ, ಮಂಜುನಾಥ ಗೌಡಶಿವಣ್ಣನವರ, ಮಹೇಶಪ್ಪ ಕೊಪ್ಪದ, ಮಳ್ಳಪ್ಪ ಮೇಲ್ಮಾಳಗಿ ಮಾತನಾಡಿ, ರೈತರ ಜಮಿನಿನಲ್ಲಿ ಬಿತ್ತನೆ ಮಾಡಿದ ಬೀಜಗಳನ್ನು ಕಾಡು ಹಂದಿಗಳು ತಿಂದು ಹಾನಿಗೊಳಗಾದ ಹಾಗೂ ಬೆಳೆದ ಬೆಳೆಗಳನ್ನು ಚಿಗರಿಗಳು ತಿಂದು ಹಾನಿಗೊಳಿಸಿದ ಸುದ್ದಿ ತಿಳಿದ ತಕ್ಷಣ ಕಂದಾಯ ಇಲಾಖೆ ಅಧಿಕಾರಿಗಳು, ಕೃಷಿ ಇಲಾಖೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಜಮಿನುಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. 1 ಎಕರೆಗೆ ರು. 20 ಸಾವಿರದಂತೆ ಪರಿಹಾರ ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ತಹಸೀಲ್ದಾರ್ ಎಚ್. ಶಿವಕುಮಾರ ಮಾತನಾಡಿ, ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು. ತಾಲೂಕು ರೈತ ಸಂಘದ ಮುಖಂಡರಾದ ಲೋಕೇಶ ಸುತಾರ, ದಿಳ್ಳೆಪ್ಪ ಕಂಬಳಿ, ಮಲ್ಲಿಕಾರ್ಜುನ ದುಳೆಹೊಳಿ, ಸಿದ್ದನಗೌಡ ಪಾಟೀಲ, ನೂರಾರು ರೈತರು ಪ್ರತಿಭಟನೆಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.