ಹಾವೇರಿ

ಪಡಿತರ ಅಕ್ರಮಕ್ಕೆ ಕಡಿವಾಣ ಬೀಳುವುದೇ?

Published On :

ಹಾವೇರಿ: ಪಡಿತರ ಫಲಾನುಭವಿಗಳಿಗೆ ವಿತರಿಸಬೇಕಾದ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಬೃಹತ್ ಜಾಲ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆಯೇ...!
ಸೋಮವಾರ ರಾತ್ರಿ ಹಾವೇರಿ ತಹಸೀಲ್ದಾರ್ ಶಿವಲಿಂಗು ಹಾಗೂ ಉಪ ವಿಭಾಗಾಧಿಕಾರಿ ಚನ್ನಬಸಪ್ಪ ನೇತೃತ್ವದ ತಂಡ ನ್ಯಾಯಬೆಲೆ ಅಂಗಡಿಗಳಿಗೆ ಸೇರಬೇಕಾಗಿದ್ದು ಎಂದು ಮೇಲ್ನೋಟಕ್ಕೆ ಸಾಬೀತಾದ 300 ಕ್ವಿಂಟಲ್ ಅಕ್ಕಿ ಹಾಗೂ ಗೋದಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಲಾರಿ ಸಮೇತವಾಗಿ ಜಪ್ತಿ ಮಾಡಿದ್ದು, ಈ ಮಾತಿಗೆ ಪುಷ್ಠಿ ನೀಡುವಂತಿದೆ.
ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಂದು ಕುಟುಂಬಕ್ಕೆ ಕೆಜಿಗೆ ರು. 1ನಂತೆ 30 ಕೆಜಿ ಅಕ್ಕಿ ವಿತರಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ಘೋಷಣೆ, ಕಡು ಬಡವ, ಬಡವ ಹಾಗೂ ಮಧ್ಯಮ ವರ್ಗದವರಿಗಿಂತ ಹೆಚ್ಚಾಗಿ ಕಾಳಸಂತೆಕೋರರಲ್ಲಿ ಲಾಭ ಗಿಟ್ಟಿಸಿಕೊಳ್ಳುವ ಹಸಿವು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ದಶಕಗಳಿಂದ: ಒಂದು ಮೂಲದ ಪ್ರಕಾರ, ದಶಕಗಳಿಂದ ಜಿಲ್ಲಾದ್ಯಂತ ಪಡಿತರ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಜಾಲ ವ್ಯವಸ್ಥಿತವಾಗಿಯೇ ಕಾರ್ಯನಿರ್ವಹಿಸುತ್ತ ಬಂದಿದೆ ಎನ್ನಲಾಗುತ್ತಿದೆ. ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಿಗೆ ಬರುವ ಆಹಾರ ಧಾನ್ಯವನ್ನು ಸರ್ಕಾರಿ ಗೋದಾಮುಗಳಿಂದಲೇ ತಮ್ಮ ಗೋದಾಮುಗಳಿಗೆ ಸಾಗಿಸುವಷ್ಟರ ರಾಜಕೀಯ ಪವರ್ ಈ ಖದೀಮರು ಹೊಂದಿದ್ದಾರೆ.
ಕಾಳಸಂತೆಕೋರರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕೆಲ ಅಧಿಕಾರಿಗಳು ಸಾಥ್ ನೀಡುತ್ತಿರುವುದರಿಂದ ಪಡಿತರ ಅಕ್ಕಿ ಹಾಗೂ ಗೋದಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಪ್ರಕರಣಗಳು ಅಷ್ಟೊಂದು ಬೆಳಕಿಗೆ ಬರುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಬಂಧ ಬಾಹು: ಜಿಲ್ಲೆಯಿಂದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸುತ್ತಿರುವ ಕಾಳಸಂತೆಕೋರರಿಗೆ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿಯೂ ಅತ್ಯುತ್ತಮ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಪಡಿತರ ಆಹಾರ ಧಾನ್ಯ ಕಾಳಸಂತೆಯಲ್ಲಿ ಮಾರಾಟ ಮಾಡುವ ಕುಳಗಳು ರಾಜ್ಯಾದ್ಯಂತ ತಮ್ಮ ಕಬಂಧ ಬಾಹು ಚಾಚಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಹಾವೇರಿ ಜಿಲ್ಲೆಯಲ್ಲಿ ದಶಕಗಳ ಆಚೆ ಈ ಖದೀಮರ ಹಾವಳಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ ಎಂದು ಆಹಾರ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಕನ್ನಡಪ್ರಭದೊಂದಿಗೆ ಮಾತನಾಡಿ ತಿಳಿಸಿದ್ದಾರೆ.
ಸ್ಥಳೀಯ ಗೋದಾಮು: ಪಡಿತರ ಅಕ್ಕಿ ಕಾಳಸಂತೆಯಲ್ಲಿ ಖರೀದಿಸಿದ ನಂತರ ಹಾವೇರಿ ಜಿಲ್ಲೆಯ ವಿವಿಧ ತಾಲೂಕುಗಳ ರಹಸ್ಯ ಸ್ಥಳಗಳಲ್ಲಿ ಅಂತಹ ಅಕ್ಕಿಯನ್ನು ಮರು ಪ್ಯಾಕಿಂಗ್ ಮಾಡಲಾಗುತ್ತಿದ್ದು, ಅವುಗಳ ಮೇಲೆ ಸ್ಥಳೀಯ ಅಥವಾ ಹೊರ ರಾಜ್ಯದ ಚಿಹ್ನೆಯನ್ನು ಬಳಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಪಡಿತರ ಅಕ್ಕಿಯನ್ನು ಹಾಗೆಯೇ ಸಾಗಾಟ ಮಾಡುವಾಗ ಸಿಕ್ಕಿ ಹಾಕಿಕೊಳ್ಳಬಹುದೆಂಬ ಭಯ ಹೊಂದಿರುವ ಕೆಲ ಖದೀಮರು, ಅಂತಹ ಅಕ್ಕಿಯನ್ನು ಸ್ಥಳೀಯವಾಗಿ ಪಾಲಿಸ್ ಮಾಡಿಸಿ ಸಾಗಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆಮಿಷಕ್ಕೆ ಬಲಿ: ಈ ಕಾಳಸಂತೆಕೋರರು, ನ್ಯಾಯಬೆಲೆ ಅಂಗಡಿಕಾರರಿಗೆ ಹೆಚ್ಚಿನ ಬೆಲೆ ನೀಡುವ ಆಮಿಷಮೊಡ್‌ಡಿ ತಮ್ಮ ಬಲೆಗೆ ಹಾಕಿಕೊಂಡಿದ್ದಾರೆ ಎಂದು ಜನಸಾಮಾನ್ಯರು ಆರೋಪಿಸುತ್ತಿದ್ದಾರೆ. ಪಡಿತರ ಚೀಟಿದಾರರಿಗೆ ಅಕ್ಕಿ ಹಾಗೂ ಗೋಧಿ ವಿತರಿಸಿದಾಗ ಸಿಗುವ ಲಾಭಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಹಣ ದೊರಕಲಿದೆ ಎಂಬ ಆಸೆಗೆ ಒಳಗಾಗಿ ಕೆಲ ನ್ಯಾಯಬೆಲೆ ಅಂಗಡಿಕಾರರು ಪಡಿತರ ಆಹಾರ ಧಾನ್ಯಗಳನ್ನು ಈ ಖದೀಮರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಕಾರಣಕ್ಕಾಗಿ ಪ್ರತಿ ತಿಂಗಳು ನಿಗದಿತ ದಿನಾಂಕದಂದು ಪಡಿತರ ವಿತರಿಸಲು ಅಂಗಡಿಕಾರರು ನೂರೆಂಟು ನೆಪವೊಡ್ಡುತ್ತಿದ್ದಾರೆ. ಅಲ್ಲದೆ, ಕಾರ್ಡ್‌ದಾರರಿಗೆ ಹತ್ತು ಹಲವು ರೀತಿಯಿಂದ ತೊಂದರೆ ಕೊಡುತ್ತಿದ್ದಾರೆ ಎಂದು ಸಿದ್ದಪ್ಪ ಎಂಬ ಪಡಿತರದಾರರು ಆರೋಪಿಸಿದ್ದಾರೆ.
ನ್ಯಾಯಬೆಲೆ ಅಂಗಡಿಗಳಿಂದ: ಕಾಳಸಂತೆಕೋರರಿಗೆ, ಸರ್ಕಾರಿ ಗೋದಾಮಿನಿಂದಲೇ ಪಡಿತರ ಅಕ್ಕಿ ಹಾಗೂ ಗೋದಿ ಸಾಗಾಟ ಮಾಡಲು ಅಸಾಧ್ಯ ಎಂದು ತಿಳಿದು ಬಂದಾಗ, ನ್ಯಾಯಬೆಲೆ ಅಂಗಡಿಕಾರರು ಪ್ರತಿ ತಿಂಗಳು ವಿತರಿಸಲು ಪಡೆಯುವ ಆಹಾರ ಧಾನ್ಯದಲ್ಲಿ ಅರ್ಧದಷ್ಟನ್ನು ಹೆಚ್ಚಿನ ಬೆಲೆಯಲ್ಲಿ ಖರೀದಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಿಬ್ಬಂದಿ, ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳು ಪ್ರತಿ ತಿಂಗಳು ಎಷ್ಟು ಆಹಾರ ಧಾನ್ಯ ವಿತರಿಸಿದ್ದಾರೆ ಎಂಬುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸದಿರುವುದು ನ್ಯಾಯಬೆಲೆ ಅಂಗಡಿಕಾರರಿಗೆ ಕಾಳಸಂತೆಕೋರರ ಬೇಡಿಕೆ ಈಡೇರಿಸಲು ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಿದೆ.
ರಾಜಸ್ಥಾನ, ಆಂಧ್ರಕ್ಕೆ: ಜಿಲ್ಲೆಯ ಪಡಿತರ ಅಕ್ಕಿ ಹಾಗೂ ಗೋದಿಯನ್ನು ಪಾಲಿಸಿ ಮಾಡಿಸಿ ನಂತರ ಅದಕ್ಕೆ ಯಾವುದೊಂದು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಬ್ರಾಂಡ್‌ನ ಲೇಬಲ್ ಅಂಟಿಸಿ ದೂರದ ರಾಜಸ್ಥಾನ ಮತ್ತು ಆಂಧ್ರಕ್ಕೆ ಆಹಾರ ಧಾನ್ಯವನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕಡುಬಡವ, ಬಡವ, ಮಧ್ಯಮ ವರ್ಗದ ಜನತೆ ಹಸಿವಿನಿಂದ ಬಳಲಬಾರದೆಂಬ ಮಹತ್ವಾಕಾಂಕ್ಷೆಯಿಂದ ರಾಜ್ಯ ಸರ್ಕಾರ ಪಡಿತರ ಕಾರ್ಡ್‌ದಾರರಿಗೆ ರು. 1ಗೆ ಕೆಜಿಯಂತೆ 30 ಕೆಜಿ ಅಕ್ಕಿ ವಿತರಿಸುವ ಯೋಜನೆ ಅನುಷ್ಠಾನಕ್ಕೆ ತರಲು ಏನ್ನೆಲ್ಲ ಕಸರತ್ತು ನಡೆಸಿದೆಯೇನೋ ನಿಜ. ಸರ್ಕಾರದ ಯೋಜನೆ ಸಾಕಾರಗೊಳ್ಳಬೇಕಾದರೆ ಕಾಳಸಂತೆಕೋರರನ್ನು ಮಟ್ಟ ಹಾಕುವುದು ಮಹತ್ವದ್ದಾಗಿದೆ.
- ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.