ಹಾವೇರಿ

ಸಾರಿಗೆ, ಪಡಿತರಕ್ಕೆ ಗ್ರಾಮಸ್ಥರ ಪಟ್ಟು

Published On :

ಬ್ಯಾಡಗಿ: ಸ್ವಾತಂತ್ರ್ಯ ದೊರೆತು ಆರುವರೆ ದಶಕ ಗತಿಸಿದರೂ ಗ್ರಾಮಕ್ಕೆ ಇಂದಿಗೂ ಸಾರಿಗೆ ಹಾಗೂ ಪಡಿತರ ವ್ಯವಸ್ಥೆ ಲಭ್ಯವಾಗಿಲ್ಲ. ಇವೆರಡನ್ನೂ ಒದಗಿಸಿಯೇ ಕಾರ್ಯಕ್ರಮ ನಡೆಸುವಂತೆ ಗ್ರಾಮಸ್ಥರು ಬಿಗಿಪಟ್ಟು ಹಿಡಿದು ವೇದಿಕೆಯಲ್ಲಿದ್ದ ಶಾಸಕ ಬಸವರಾಜ ಶಿವಣ್ಣನವರ ಬೆಚ್ಚಿ ಬೀಳುವಂತ ಘಟನೆ ತಾಲೂಕಿನ ಬನ್ನಿಹಳ್ಳಿ ಗ್ರಾಮದಲ್ಲಿ ಶನಿವಾರ ಜರುಗಿದ ಜನಸ್ಪಂದನದಲ್ಲಿ ನಡೆಯಿತು.
ಜನಸ್ಪಂದನ ಯಾವ ಪುರುಷಾರ್ಥಕ್ಕೆ: ಹಿಂದಿನ ಸರ್ಕಾರ ಅನುಷ್ಠಾನಗೊಳಿಸಿದ ಜನಸ್ಪಂದನ ಕಾರ್ಯಕ್ರಮ ಪ್ರಥಮ ಬಾರಿಗೆ ಬನ್ನಿಹಳ್ಳಿ ಗ್ರಾಮದಲ್ಲಿ ನಡೆಯಿತು. ಸಾರಿಗೆ ಸೌಕರ್ಯ ಹಾಗೂ ಪಡಿತರ ವ್ಯವಸ್ಥೆ ಕಲ್ಪಿಸುವುದಾಗಿ ಈ ಹಿಂದೆ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ನೀಡಿದ ಭರವಸೆಗಳು ಸರ್ಕಾರ ಬದಲಾವಣೆಯಾದರೂ ಕೂಡ ಈಡೇರಿಲ್ಲ. ಹಾಗಿದ್ದ ಮೇಲೆ ಜನಸ್ಪಂದನ ನಡೆಸುವುದಾದರೂ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ವರ್ಗಾವಣೆ ಮಾಡಿ: ಸುಮಾರು 2 ಕಿ.ಮೀ ದೂರದಲ್ಲಿರುವ ಹೆಡಿಗ್ಗೊಂಡ ಗ್ರಾಮಕ್ಕೆ ತೆರಳಿ ಪಡಿತರ ತರಬೇಕಾಗಿದೆ. ಬಸ್ ಸೌಕರ್ಯವಿಲ್ಲದ್ದರಿಂದ ವಯೋವೃದ್ಧರು ಹಾಗೂ ಮಹಿಳೆಯರು ಧಾನ್ಯಗಳನ್ನು ಹೊತ್ತು ತರುವುದಾದರೂ ಹೇಗೆ ಮಳೆಗಾಲದಲ್ಲಿ ಇದು ಸಾಧ್ಯವಾಗದ ಕೆಲಸವಾಗಿದೆ. ಈ ಕುರಿತು ಗ್ರಾಮದಲ್ಲೇ ಪಡಿತರ ವಿತರಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಆಹಾರ ನಿರೀಕ್ಷಕ ಧೂಳಪ್ಪನವರ ಕ್ಯಾರೇ ಎನ್ನುತ್ತಿಲ್ಲ. ಕೂಡಲೇ ಅವರನ್ನು ವರ್ಗಾವಣೆ ಮಾಡುವಂತೆ ಬಿಗಿಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ನಿರೀಕ್ಷಕ ಗ್ರಾಮದಲ್ಲಿ ಸುಮಾರು 150 ಪಡಿತರ ಚೀಟಿಗಳಿದ್ದು, ಇಲಾಖೆ ನಿಯಮದಂತೆ ಗ್ರಾಮದಲ್ಲಿ ಪಡಿತರ ವಿತರಿಸಲು ಸಾಧ್ಯವಿಲ್ಲ ಎಂದರು.
ವಿಶೇಷ ನಿಯಮವೇ?:
ಆಹಾರ ನಿರೀಕ್ಷಕರ ಮಾತಿನಿಂದ ಮತ್ತಷ್ಟು ಕೊಪೋದ್ರಿಕ್ತರಾದ ಗ್ರಾಮಸ್ಥರು, ಕೇವಲ 70 ಪಡಿತರ ಚೀಟಿಗಳಿರುವ ಸಮೀಪದ ದಾಸನಕೊಪ್ಪ ಗ್ರಾಮದಲ್ಲೇ ಪಡಿತರ ವಿತರಣೆಯಾಗುತ್ತಿದೆ. ಅಲ್ಲಿಗೇನು ವಿಶೇಷ ನಿಯಮ ಹಾಗೂ ಕಾನೂನುಗಳಿವೆಯೇ.. ಎಂದು ಪ್ರಶ್ನಿಸಿದರಲ್ಲದೇ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಪರಿತಪಿಸುವಂತಾಗಿದೆ ಎಂದರು.
ಸಾರ್ವಜನಿಕರ ತೊಂದರೆ ತಪ್ಪಿಸಿ: ಮದ್ಯ ಪ್ರವೇಶಿಸಿದ ಶಾಸಕ ಬಸವರಾಜ ಶಿವಣ್ಣನವರ ಸಾರ್ವಜನಿಕರಿಗೆ ತೊಂದರೆಯಿದ್ದಲ್ಲಿ ಗ್ರಾಮದಲ್ಲಿಯೇ ಪಡಿತರ ವಿತರಣೆಗೆ ಕ್ರಮ ಜರುಗಿಸಬೇಕು. ನಾಳೆಯಿಂದಲೇ ಗ್ರಾಮಕ್ಕೆ ಬಸ್ ಸಂಚರಿಸಲು ಕ್ರಮ ತೆಗೆದುಕೊಳ್ಳಬೇಕು. ಯಾವುದೇ ನಿಯಮ ಹಾಗೂ ಕಾನೂನುಗಳನ್ನು ಕಾರಣ ನೀಡುವ ಅಗತ್ಯವಿಲ್ಲ ಎಂದು ಆಹಾರ ನಿರೀಕ್ಷಕ ಧೂಳಪ್ಪನವರ ಹಾಗೂ ಸಾರಿಗೆ ವ್ಯವಸ್ಥಾಪಕರಿಗೆ ಸ್ಥಳದಲ್ಲೇ ಸೂಚಿಸಿದರು.
ಆರೋಗ್ಯ ಸೇವೆಯಿಲ್ಲ: ಗ್ರಾಮದ ಜನರಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿದ್ದರೂ ಹೇಳಿಕೊಳ್ಳದ ಸ್ಥಿತಿಯಲ್ಲಿದ್ದೇವೆ. ಕಳೆದೊಂದು ವರ್ಷದಿಂದ ಆರೋಗ್ಯ ಕಾರ್ಯಕರ್ತರು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರಲ್ಲದೇ ಕಳೆದೆರಡು ತಿಂಗಳಿಂದ ಡೆಂಘೀ ಜ್ವರದ ಭಯ ಗ್ರಾಮಸ್ಥರನ್ನು ಕಾಡುತ್ತಿದೆ. ಕೂಡಲೇ ಆರೋಗ್ಯ ಸಹಾಯಕರನ್ನು ನೇಮಿಸುವಂತೆ ಆಗ್ರಹಿಸಿದರು. ಇದಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ೤ ಬಿ.ಆರ್. ಲಮಾಣಿ ಪ್ರತಿಕ್ರಿಯಿಸಿ, ಇರುವಂತಹ ಸಿಬ್ಬಂದಿ ಆರೋಗ್ಯ ಜಾಗೃತಿ ಹಾಗೂ ಲಾರ್ವಾ ಸರ್ವೇ ಕಾರ್ಯಗಳಿಗೆ ತೆರಳಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿ ಸಮಸ್ಯೆಯಿಂದಾಗಿ ಬನ್ನಿಹಳ್ಳಿ ಸೇರಿದಂತೆ 6 ಗ್ರಾಮಗಳಿಗೆ ಒಬ್ಬರೇ ಆರೋಗ್ಯ ಸಹಾಯಕರಿದ್ದಾರೆ ಎಂದರು.
ತಾಲೂಕಾದ್ಯಂತ ಡೆಂಘೀ ಉಲ್ಬಣವಾಗುತ್ತಿದೆ. ಕನಿಷ್ಠ 2 ದಿನಗಳಿಗೊಮ್ಮೆ ವೈದ್ಯಕೀಯ ಸಿಬ್ಬಂದಿ ಭೇಟಿ ನೀಡಿ ಗ್ರಾಮಸ್ಥರಿಗೆ ಆರೋಗ್ಯ ಸೇವೆ ನೀಡುವಂತೆ ಶಾಸಕ ಬಸವರಾಜ ಶಿವಣ್ಣನವರ ಸೂಚಿಸಿದರು.
ಅಬಕಾರಿ ನಿರೀಕ್ಷಕ ಎಸ್.ಬಿ. ವಿಭೂತಿ, ಹೆಡಿಗ್ಗೊಂಡ ಗ್ರಾಪಂ ಅಧ್ಯಕ್ಷೆ ನಿರ್ಮಲಾ ದೊಡ್ಮನಿ, ಉಪಾಧ್ಯಕ್ಷ ಮಂಜು ಬಿಳಿಯಣ್ಣವರ, ಕಾಗಿನೆಲೆ ಅಧ್ಯಕ್ಷ ಶಮನಾಬಾಯಿ, ಟಿಇಓ ಕೃಷ್ಣಮೂರ್ತಿ, ಪಿಡಿಓ ಜಗದೀಶ ಮಣ್ಣಮ್ಮನವರ, ಉಪತಹಸೀಲ್ದಾರ್ ಬಿ.ಎಸ್. ಕೊಪ್ಪದ ಎಂ. ಅಣ್ಣಪ್ಪ, ನಾಗರಾಜ, ಟಿ.ಎಚ್. ನಟರಾಜ, ಜೆ.ಟಿ. ಶಿರೋಳಕರ, ದಾಸಪ್ಪ, ಚಿದಾನಂದ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.