ಹಾವೇರಿ

ಶಿವಮೊಗ್ಗ-ಹರಿಹರ ಮಧ್ಯೆ ರೈಲು ಓಡಿಸಿ

Published On :

ರಾಣಿಬೆನ್ನೂರು: ಉತ್ತರ ಕರ್ನಾಟಕದ ಹೆಬ್ಬಾಗಿಲೆಂದು ಕರೆಯುವ ರಾಣಿಬೆನ್ನೂರು ಮತ್ತು ಮಲೆನಾಡಿನ ಹೆಬ್ಬಾಗಿಲೆಂದು ಕರೆಸಿಕೊಳ್ಳುವ ಶಿವಮೊಗ್ಗ ಮಧ್ಯೆ ಹರಿಹರ ರೈಲು ಜಂಕ್ಷನ್‌ದಿಂದ ತಾಲೂಕಿನ ಮಾಕನೂರು, ಮುದೇನೂರು, ತುಮ್ಮಿನಕಟ್ಟಿ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ರೈಲು ಸಂಚಾರ ಆರಂಭಿಸಬೇಕೆಂದು ಆಗ್ರಹಿಸಿ ಸ್ವಾಭಿಮಾನಿ ಕರವೇ ಕಾರ್ಯಕರ್ತರು ರೈಲು ನಿಲ್ದಾಣದ ಎದುರು ಪ್ರತಿಭಟಿಸಿದರು.
ಮನವಿ ರವಾನೆ: ನಗರದ ರೈಲು ನಿಲ್ದಾಣ ಎದುರು ಸೇರಿದ್ದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಉತ್ತರ ಕರ್ನಾಟಕದ ಹಾವೇರಿ, ಗದಗ, ಧಾರವಾಡ, ಕೊಪ್ಪಳ, ಬಳ್ಳಾರಿ, ರಾಯಚೂರು, ಬೀದರ, ಗುಲ್ಬರ್ಗಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಗೂ ತಾಲೂಕು ಸ್ವಾಭಿಮಾನಿ ಕರವೇ ಕಾರ್ಯಕರ್ತರು ಬೆಳಗ್ಗೆ ರಾಣಿಬೆನ್ನೂರು ರೇಲ್ವೆ ನಿಲ್ದಾಣಾಧಿಕಾರಿಗಳ ಮೂಲಕ ಮಧ್ಯಾಹ್ನ ಹರಿಹರ ನಿಲ್ದಾಣಾಧಿಕಾರಿಗಳ ಮುಖಾಂತರ ರೇಲ್ವೆ ರಾಜ್ಯ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಜಿ. ಕುಂದಾಪುರ ಮಾತನಾಡಿ, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಮತ್ತು ಉತ್ತರ ಕರ್ನಾಟಕದ ಮಧ್ಯೆ ಸಂಪರ್ಕ ಕೊಂಡಿಯಾಗಿ ಹರಿಹರದ ರೇಲ್ವೆ ಜಂಕ್ಷನ್‌ನಿಂದ ತಾಲೂಕಿನ ಮಾಕನೂರು, ಮುದೇನೂರು, ಮುಷ್ಟೂರು, ಉಕ್ಕಡಗಾತ್ರಿ, ತುಮ್ಮಿನಕಟ್ಟಿ ಹಾಗೂ ಶಿವಮೊಗ್ಗದ ಸವಳಂಗ ಮಾರ್ಗವಾಗಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗವರೆಗೆ ರೈಲು ಸಂಚಾರ ಆರಂಭಿಸುವುದರೊಂದಿಗೆ ಕೇಂದ್ರ ಸರ್ಕಾರ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಾರ್ಥಕ ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಒತ್ತಾಯಿಸಿದರು.
ಬಳ್ಳಾರಿ-ಶಿವಮೊಗ್ಗಕ್ಕೆ ಹತ್ತಿರ: ಕೇಂದ್ರ ಸರ್ಕಾರ ಈಗಾಗಲೆ ಹೊಸಪೇಟೆಯಿಂದ ಹರಿಹರದವರೆಗೆ ನೂತನ ರೈಲು ಮಾರ್ಗವನ್ನು ಆರಂಭಿಸಿದ್ದು, ಹರಿಹರದಿಂದ ರಾಣಿಬೆನ್ನೂರು ತಾಲೂಕಿನ ಗಡಿ ಅಂಚಿನಲ್ಲಿ ಹರಿದಿರುವ ತುಂಗಭದ್ರಾ ನದಿಯ ಪಕ್ಕದ 4 ಗ್ರಾಮಗಳಿಗೆ ರೈಲು ಮಾರ್ಗದ ಸಂಪರ್ಕ ಕಲ್ಪಿಸುತ್ತ ಶಿವಮೊಗ್ಗಕ್ಕೆ ರೇಲ್ವೆ ಸೇವೆ ಆರಂಭಿಸಿದಲ್ಲಿ ಬಳ್ಳಾರಿ, ಹೋಸಪೇಟೆ ಹಾಗೂ ಉತ್ತರ ಕರ್ನಾಟಕದ 8 ಜಿಲ್ಲೆಗಳಿಗೆ ಮಲೆನಾಡು ಹತ್ತಿರವಾಗುತ್ತದೆ ಹಾಗೂ ವ್ಯಾಪಾರ ವಹಿವಾಟಿಗೆ ತುಂಬಾ ಅನುಕೂಲ ಕಲ್ಪಿಸಿದಂತಾಗುತ್ತದೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಹೆಚ್ಚಿಸಿದಂತಾಗುತ್ತದೆ.
ಪ್ರವಾಸೋದ್ಯಮ ಅಭಿವೃದ್ಧಿ: ಹರಿಹರ-ಶಿವಮೊಗ್ಗ ರೈಲು ಸಂಚಾರ ಆರಂಭಿಸಿದರೆ ಉತ್ತರ ಕರ್ನಾಟಕದ ಹಂಪಿ, ಹೋಸಪೇಟೆ, ಚಳ್ಳಗುರ್ಕಿ,ಬಿಜಾಪುರ, ಕೂಡಲ ಸಂಗಮ ಮತ್ತು ಮಲೆನಾಡಿನ ಪ್ರವಾಸಿ ತಾಣಗಳಲ್ಲೊಂದಾದ ಜೋಗ, ಶಿಗಂದೂರು,ಧರ್ಮಸ್ಥಳ, ಹೊರನಾಡು, ಶೃಂಗೇರಿ, ದಕ್ಷಿಣ ಕಾಶಿ ಬಾಳೆಹೊನ್ನೂರು, ಕುದುರೆಮುಖ, ಮೈಸೂರಿಗೆ ತೆರಳುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವುದರೊಂದಿಗೆ ರಾಜ್ಯದ ಪ್ರವಾಸಿ ತಾಣಗಳು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಆದ ಕಾರಣ ಹರಿಹರ-ಶಿವಮೊಗ್ಗ ರೈಲು ಮಾರ್ಗವನ್ನು ಶೀಘ್ರ ಆರಂಭಿಸಬೇಕೆಂದು ನಿತ್ಯಾನಂದ ಕುಂದಾಪುರ ಆಗ್ರಹಿಸಿದರು.
ಶೀಘ್ರ ರೈಲು ಸಂಚಾರ ಆರಂಭಿಸಿ: ಸ್ವಾಭಿಮಾನಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿದ್ದಾರೂಢ ಗುರಂ ಮಾತನಾಡಿ, ಹರಿಹರ-ಶಿವಮೊಗ್ಗ ನೂತನ ರೈಲ್ವೆ ಮಾರ್ಗ ಆರಂಭಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಈ ಹಿಂದೆ ಹಲವಾರು ಬಾರಿ ಪತ್ರಗಳನ್ನು ಬರೆದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರಣ ರಾಜ್ಯದವರೆಯಾದ ಮಲ್ಲಿಕಾರ್ಜುನ ಖರ್ಗೆರವರು ಕೇಂದ್ರ ರೇಲ್ವೆ ಸಚಿವರಾಗಿದ್ದು, ಶೀಘ್ರ ಹರಿಹರ-ಶಿವಮೊಗ್ಗ ರೈಲು ಸಂಚಾರ ಆರಂಭಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಹಿಂದಕ್ಕೆ: ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಹರಿಹರ ರೈಲ್ವೆ ನಿಲ್ದಾಣಾಧಿಕಾರಿ, ಮನವಿ ಪತ್ರವನ್ನು ತಕ್ಷಣ ರಾಜ್ಯ ರೇಲ್ವೆ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ರವಾನಿಸುವುದಾಗಿ ತಿಳಿಸಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು.
ಪ್ರತಿಭಟನೆಯಲ್ಲಿ ಸ್ವಾಭಿಮಾನಿ ಕರವೇ ಗದಗ ಜಿಲ್ಲಾಧ್ಯಕ್ಷ ರಾಜು ಸುರಣಗಿ, ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ಎಂ ಕಾಕೋಳ, ಧಾರವಾಡ ಜಿಲ್ಲಾ ಸಂಚಾಲಕ ದೇವದಾಸ ಕುಂದಾಪುರ, ಬಳ್ಳಾರಿ ಜಿಲ್ಲಾಧ್ಯಕ್ಷ ಎಂ. ಗೋಪಿನಾಥ, ದಾವಣಗೆರೆ ಜಿಲ್ಲಾಧ್ಯಕ್ಷ ಎಂ. ಚನ್ನಬಸಪ್ಪ ರೇಲ್ವೆ ಮಾರ್ಗ ಆರಂಭಿಸಬೇಕೆಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.