ಹಾವೇರಿ

ಮಹಿಳೆ ಸಾಗಾಟ, ಅನೈತಿಕ ಚಟುವಟಿಕೆ ತಡೆ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜು. 17
ಮಹಿಳೆಯರ ಅಕ್ರಮ ಸಾಗಾಟ, ಅನೈತಿಕ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದರ ಜತೆಗೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರಲು ಆದ್ಯತೆ ನೀಡಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ತಿಳಿಸಿದರು.
ಜಿಲ್ಲೆಯಲ್ಲಿ ಮಹಿಳೆಯರ ಅಕ್ರಮ ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸುಳಿವು ದೊರಕಿದ್ದು, ಇಂತಹ ಕುಕೃತ್ಯದಲ್ಲಿ ತೊಡಗಿಸಿಕೊಂಡವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಬಿಟ್ ವ್ಯವಸ್ಥೆ ಸುಧಾರಣೆ: ಶ್ರೀಸಾಮಾನ್ಯರಿಗೆ ನೆಮ್ಮದಿ ಬದುಕು ಸಾಗಿಸಲು ನೆರವಾಗುವಂತೆ ಪೊಲೀಸ್ ಬಿಟ್ ವ್ಯವಸ್ಥೆಯನ್ನು ಸುಧಾರಿಸಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯಿದೆಯಾದರೂ ಇದ್ದ ಸಿಬ್ಬಂದಿಯನ್ನೇ ಸಮರ್ಥ ರೀತಿಯಲ್ಲಿ ಉಪಯೋಗಿಸಿಕೊಂಡಲ್ಲಿ ಬಿಟ್ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ಇಸ್ಪಿಟ್ ಹಾಗೂ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಇದರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ಈ ಕುಕೃತ್ಯಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಲಾಗುವುದು.
ವಿಶೇಷ ಶ್ರಮ: ಜಿಲ್ಲೆಯಲ್ಲಿ ಇದುವರೆಗೆ ದೊಡ್ಡ ಪ್ರಮಾಣದಲ್ಲಿ ದರೋಡೆ ಪ್ರಕರಣಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ. ಹಾವೇರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ದರೋಡೆ ಪ್ರಕರಣಗಳು ಸಂಭವಿಸಿದ್ದು, ಇವುಗಳ ಪತ್ತೆಗೆ ಇಲಾಖೆಯಿಂದ ಹೆಚ್ಚಿನ ರೀತಿಯಲ್ಲಿ ಶ್ರಮಿಸಲಾಗುವುದೆಂದರು. ಜಿಲ್ಲಾ ಕೇಂದ್ರಕ್ಕೆ ಸಂಚಾರ ಪೊಲೀಸ್ ಠಾಣೆಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಿಂದಿನ ಅಧಿಕಾರಿಗಳು ಸಹ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಲೇ ಬಂದಿದ್ದಾರೆ. ಶೀಘ್ರ ಜಿಲ್ಲಾ ಕೇಂದ್ರದಲ್ಲಿ ಸಂಚಾರ ಠಾಣೆ ಕಾರ್ಯನಿರ್ವಹಿಸುವಂತೆ ತಾವು ಪ್ರಯತ್ನಿಸುತ್ತೇವೆ ಎಂದೂ ಶಶಿಕುಮಾರ ತಿಳಿಸಿದರು.
ಸೌಲಭ್ಯ ಕೊರತೆ: ಜಿಲ್ಲೆಯ 19 ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಾರ್, ಜೀಪ ಸೇರಿದಂತೆ ಮತ್ತಿತರ ರೀತಿಯ ಸಮಸ್ಯೆಗಳು ಇವೆಯಾದರೂ, ಇದ್ದ ವ್ಯವಸ್ಥೆಯಲ್ಲೇ ಯಾವುದೇ ರೀತಿ ತೊಂದರೆಯಾಗದಂತೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಸ್. ಜಮಯ್ಯನವರ ಪತ್ರಿಕಾಗೋಷ್ಠಿಯಲ್ಲಿದ್ದರು.

ಮಾಹಿತಿ ನೀಡಿ...
ಸಮಾಜಘಾತಕ ಶಕ್ತಿಗಳು ಜಿಲ್ಲೆಯ ಯಾವುದೇ ಮೂಲೆಯಲ್ಲಿ ಇರುವುದು ಕಂಡು ಬಂದಲ್ಲಿ ತಕ್ಷಣ ಅಂತಹ ವ್ಯಕ್ತಿಗಳ ಬಗ್ಗೆ ಸಂಬಂಧಿತ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಹಾವೇರಿ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ವಿನಂತಿಸಿಕೊಂಡರು.
ಮಾಹಿತಿ ನೀಡಿದ ವ್ಯಕ್ತಿಗಳ ಹೆಸರು ಹಾಗೂ ವಿಳಾಸ ಗೌಪ್ಯವಾಗಿ ಈಡಲಾಗುವುದು. ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಬರುವ ಜವಾಬ್ದಾರಿ ಪೊಲೀಸ್ ಇಲಾಖೆಯಷ್ಟೇ ಸಾರ್ವಜನಿಕರ ಮೇಲೆಯೂ ಇದೆ. ಆದರ್ಶ ಸಮಾಜದ ಕಲ್ಪನೆಗೆ ಕಪ್ಪುಚುಕ್ಕೆಯನ್ನಿಡುವಂತಹ ಮಹಿಳೆಯ ಕಳ್ಳ ಸಾಗಾಟ ಮತ್ತಿತರ ಅನೈತಿಕ ಚಟುವಟಿಕೆ ಎಲ್ಲಿಯಾದರೂ ನಡೆಯುತ್ತಿದ್ದರೆ ಅಂಥವುಗಳ ಬಗ್ಗೆ ಮಾಹಿತಿ ನೀಡಿ ಪೊಲೀಸರ ಕಾರ್ಯಕ್ಕೆ ಸಹಕರಿಸುವಂತೆ ಎಸ್ಪಿ ಶಶಿಕುಮಾರ ವಿನಂತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.