ಹಾವೇರಿ

ಅಧಿಕಾರಿಗಳು ಗೈರು: ಸಭೆ ಮುಂದಕ್ಕೆ

Published On :

ಬ್ಯಾಡಗಿ: ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಶುಕ್ರವಾರ ನಡೆಯಬೇಕಾಗಿದ್ದ ಗ್ರಾಮಸಭೆ ಮುಂದೂಡಲಾಯಿತು.
ಪೂರ್ವ ನಿಗದಿಯಂತೆ ಶುಕ್ರವಾರ ಬೆಳಗ್ಗೆ ಗ್ರಾಮಸಭೆ ಕರೆಯಲಾಗಿತ್ತು. ಆದರೆ, ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಸಭೆಗೆ ಹಾಜರಾಗಿದ್ದರು. ಆದರೆ, ಜಿಪಂ ಎಂಜಿನಿಯರಿಂಗ್, ಲೋಕೋಪಯೋಗಿ, ಕ್ಷೇತ್ರ ಶಿಕ್ಷಣಾಧಿಕಾರಿ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜಲಾನಯನ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಯಾವುದೇ ಚರ್ಚೆಗಳು ನಡೆಯದೇ ಸಭೆ ಮುಂದೂಡಲಾಯಿತು.
ಮಾಹಿತಿ ಇಲ್ಲ, ಆರೋಪ: ಸಭೆಯಲ್ಲಿ ಉಪಸ್ಥಿತರಿದ್ದ ಕೆಲ ಗ್ರಾಮಸ್ಥರು ಗೈರು ಹಾಜರಾತಿ ಪ್ರಶ್ನಿಸಿದರದಲ್ಲದೇ ಗ್ರಾಮಸಭೆ ಮಾಹಿತಿಯನ್ನು ತಾಲೂಕು ಮಟ್ಟದ ಅಧಿಕಾರಿಗಳಿಗೆ ನೀಡಿರುವಿರಾ.. ಹಾಗಿದ್ದರೆ ಗೈರು ಹಾಜರಿಗೆ ಯಾವ ಕಾರಣ ನೀಡಿದ್ದಾರೆ. ಅವುಗಳ ಮಾಹಿತಿ ನೀಡುವಂತೆ ಪಿಡಿಓ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಗ್ರಾಮಸ್ಥರಿಗೂ ಕೂಡ ಗ್ರಾಮಸಭೆ ಇರುವ ಕುರಿತು ಸರಿಯಾದ ಮಾಹಿತಿ ನೀಡಿಲ್ಲ. 3 ದಿನ ಮುಂಚಿತವಾಗಿ ಸಂಬಂಧಿಸಿದ ಎಲ್ಲ ಗ್ರಾಮಗಳಲ್ಲೂ ಡಂಗುರ ಸಾರಬೇಕೆಂಬ ನಿಯಮವಿದ್ದರೂ ಕೂಡ ನಿನ್ನೆ ರಾತ್ರಿಯಷ್ಟೇ ಡಂಗುರ ಸಾರಿಸಲಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಆದೇಶ ಗಾಳಿಗೆ: ಗ್ರಾಮಸ್ಥ ಬಸವರಾಜ ವಡ್ಡರ ಮಾತನಾಡಿ, ಕಡ್ಡಾಯವಾಗಿ ತಾಲೂಕಾಧಿಕಾರಿಗಳು ಗ್ರಾಮಸಭೆಗೆ ಹಾಜರಿರಬೇಕೆಂಬ ಸರ್ಕಾರದ ಸುತ್ತೋಲೆಯಿದೆ. ಹೀಗಿದ್ದರೂ ಪ್ರತಿ ಬಾರಿಯೂ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಸರ್ಕಾರದ ಅದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತೆ ಮಾಡಿದ್ದಾರೆ. ಸಭೆ ನಡೆಸುವುದಾದರೂ ಯಾವ ಪುರುಷಾರ್ಥಕ್ಕೆ ಎಂದು ಕಟುವಾಗಿ ಟೀಕಿಸಿದರು. ಕೂಡಲೇ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಆಗ್ರಹಿಸಿದರು.
ನಾಂದಿಯಾಗಲಿ: ಯೋಜನೆಗಳ ಸಮಗ್ರ ಮಾಹಿತಿ ಒದಗಿಸಬೇಕಾದ ತಾಲೂಕು ಮಟ್ಟದ ಅಧಿಕಾರಿಗಳ ಗೈರು ಹಾಜರಾಗಿದ್ದಾರೆ. ಯೋಜನೆಗಳ ಕುರಿತು ಮಾಹಿತಿ ಗ್ರಾಮಸ್ಥರಿಗೆ ಸಿಗದಂತಾಗಿದೆ. ಈ ಕುರಿತು ನಾವು ಯಾರನ್ನು ಕೇಳಬೇಕು? ಗ್ರಾಮಸಭೆಯ ಉದ್ದೇಶವಾದರೂ ಏನು? ಅಧಿಕಾರಿಗಳನ್ನು ಕರೆಸಿ, ಇಲ್ಲವೇ ರದ್ದುಪಡಿಸಿ ಎಂಬುದಾಗಿ ಬಿಗಿಪಟ್ಟು ಹಿಡಿದರಲ್ಲದೇ, ಅಧಿಕಾರಿಗಳಿಲ್ಲದಿದ್ದರೆ ಸಭೆಯನ್ನು ರದ್ದುಪಡಿಸುವ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಲು ಚಿಕ್ಕ ಬಾಸೂರ ಗ್ರಾಮ ಪಂಚಾಯತಿ ನಾಂದಿಯಾಗಲಿ ಎಂದರು. ಗ್ರಾಪಂ ಅಧ್ಯಕ್ಷ ಫಾತಿಮಾಬಿ ತಹಸೀಲ್ದಾರ್, ಸದಸ್ಯರಾದ ಷಣ್ಮುಖಪ್ಪ ಅಜಗೊಂಡ್ರ, ಮೃತ್ಯುಜಾ ಹಜ್ಜಣ್ಣನವರ, ಹಾಲವ್ವ ವಾಲ್ಮೀಕಿ, ಗ್ರಾಮಸ್ಥರಾದ ಮಲ್ಲಿಕಾರ್ಜುನ ಚನ್ನಗೌಡ್ರ, ಸುಭಾಸ ಪಂಚಾನನ, ಮಲ್ಲೇಶಪ್ಪ ವಡ್ಡರ, ಮೂಕಪ್ಪ ಕಾಳೇರ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.