ಹಾವೇರಿ

ಬೆಳೆಗೆ ಹಳದಿ ರೋಗ: ಆತಂಕದಲ್ಲಿ ರೈತರು

Published On :

ಹಾವೇರಿ: ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಶೇ. 98ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ರೈತ ಬಂಪರ್ ಬೆಳೆಯ ನಿರೀಕ್ಷೆಯಲ್ಲಿರುವಾಗಲೇ ಕೆಲವೆಡೆ ಬೆಳೆಗಳು ಹಳದಿ ಸ್ವರೂಪ ಪಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಮಳೆ ಬಿಟ್ಟು ಬಿಡದೆ ಸುರಿಯುತ್ತಿರುವುದೇ ಈ ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತ ವರ್ಷ ವಾಡಿಕೆ ಮಳೆ 412 ಮಿಲಿಮೀಟರ್ ಆಗಲಿದೆ ಎಂದು ಅಂದಾಜಿಸಲಾಗಿದ್ದು, ಈವರೆಗೆ 410 ಮಿಲಿ ಮೀಟರ್ ಮಳೆ ಆಗಿದೆ.
ರಾಣಿಬೆನ್ನೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ಮಳೆ ಪ್ರಮಾಣ ಕೊಂಚ ಕ್ಷೀಣಿಸಿದೆ. ಇದರಿಂದಾಗಿ ಶೇ. 2ರಷ್ಟು ಬಿತ್ತನೆ ಕಾರ್ಯ ಬಾಕಿ ಉಳಿದಿದೆ. 8-10 ದಿನಗಳಲ್ಲಿ ಈ ಭಾಗದಲ್ಲಿಯೂ ಮಳೆ ಸುರಿಯಲಿದೆ ಎಂಬ ಆಶಾಭಾವನೆಯನ್ನು ರೈತರು ಹೊಂದಿದ್ದಾರೆ.
ಬಿಸಿಲಿನ ಕೊರತೆ: ಮುಂಗಾರು ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ವಾರದ ಮುಂಚೆಯೇ ಪ್ರವೇಶಿಸಿದೆ. ಮಳೆರಾಯನ ಆಗಮದಿಂದ ಸಾಕಷ್ಟು ಸಂತಸಪಟ್ಟಿದ್ದ ರೈತ, ಈ ಬಾರಿಯಾದರೂ ಬಂಪರ್ ಬೆಳೆ ಬಂದೇ ಬರುತ್ತದೆ ಎಂಬ ವಿಶ್ವಾಸದೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ತಿಂಗಳಿಗೂ ಹೆಚ್ಚು ಸಮಯದಿಂದ ಸೂರ್ಯದೇವನ ದರ್ಶನವೇ ಆಗದೇ ಇರುವುದು ಕೆಲವಡೆ ಮಾರುದ್ದ ಬೆಳೆದು ನಿಂತ ಬೆಳೆಗಳು ಹಳದಿ ಸ್ವರೂಪ ಪಡೆಯತೊಡಗಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ದಿನಕ್ಕೆ 2-3 ಗಂಟೆಯಾದರೂ ಸೂರ್ಯನ ದರ್ಶನವಾದರೆ ಹಳದಿ ಸ್ವರೂಪಕ್ಕೆ ತಿರುಗಿರುವ ಬೆಳೆಗಳು ಮತ್ತೆ ಮೂಲ ಸ್ವರೂಪಕ್ಕೆ ತಿರುಗಲಿವೆ ಎಂದು ಬಸಾಪುರ ಗ್ರಾಮದ ರೈತ ರಾಮಪ್ಪ ದೇವನೂರು ಕನ್ನಡಪ್ರಭದೊಂದಿಗೆ ಮಾತನಾಡಿ ತಿಳಿಸಿದರು. ಶೇ. 10-15ರಷ್ಟು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಇದೇ ರೀತಿ ಮುಂದುವರಿದ್ದಲ್ಲಿ ಶೇ. 10-15ರಷ್ಟು ಬೆಳೆಗಳು ಹಾನಿಗೊಳಗಾಗಿ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಲಕ್ಷಾಂತರ ರು.ಗಳ ಹಾನಿ ಸಂಭವಿಸಲಿದೆ ಎಂದು ಅಂದಾಜಿಸಲಾಗುತ್ತಿದೆ. ಲಘು ಪೋಷಕಾಂಶದ ಕೊರತೆಯಿಂದಾಗಿ ಬೆಳೆಗಳು ಹಳದಿ ಸ್ವರೂಪಕ್ಕೆ ತಿರುಗಲು ಕಾರಣವಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸುತ್ತಿವೆ. ಮಳೆ ಒಂದೆರಡು ದಿನದ ಮಟ್ಟಿಗೆ ನಿಂತು ಸೂರ್ಯನ ಪ್ರಕಾಶ ಬೆಳೆಗಳ ಮೇಲೆ ಬಿದ್ದಲ್ಲಿ ಹಳದಿ ಸ್ವರೂಪಕ್ಕೆ ತೆರಳಿರುವ ಬೆಳೆಗಳು ಮತ್ತೆ ಸತ್ವ ಪಡೆದುಕೊಳ್ಳಲಿವೆ. ಮಳೆಗಾಲ ಆರಂಭದ ಮೊದಲು ಆಗಸದತ್ತ ಮೊಗ ಮಾಡಿ ವರುಣ ದೇವನ ಆಗಮನಕ್ಕೆ ಪ್ರಾರ್ಥಿಸುತ್ತಿದ್ದ ರೈತ ಇದೀಗ ಸೂರ್ಯ ದೇವನ ಆರಾಧನೆಯಲ್ಲಿ ತೊಡಗಿದ್ದಾನೆ.
ಯಾವ್ಯಾವ ಬೆಳಗಳು: ಜಿಲ್ಲೆಯ ಏಳು ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳು ಸೇರಿದಂತೆ ಸಣ್ಣಪುಟ್ಟ ಬೆಳೆಗಳ ಬಿತ್ತನೆ ಪ್ರಮಾಣ ಉತ್ತಮ ರೀತಿಯಲ್ಲಿ ಮಾಡಲಾಗಿದೆ. ಇದರಿಂದಾಗಿ ಸಣ್ಣಪುಟ್ಟ ರೈತರಿಂದ ಹಿಡಿದು ದೊಡ್ಡ ರೈತರಲ್ಲಿಯೂ ಭರಪೂರ ಆದಾಯದ ಈ ಬಾರಿ ಬಂದೇ ಬರುತ್ತದೆ ಎಂಬ ವಿಶ್ವಾಸ ಮೂಡಿಸಿದೆ.
ಅಲ್ಲದೇ, ಹಿಂದಿನ ಸಾಲ, ಸೋಲವನ್ನು ತೀರಿಸಲು ಈ ಬಾರಿಯ ಬೆಳೆ ಅನುಕೂಲವಾಗಲಿದೆ ಎಂಬ ಆಸೆಗೆ ಸತತವಾಗಿ ಸುರಿಯುತ್ತಿರುವ ಮಳೆ ಎಲ್ಲಿ ತಣ್ಣಿರೆರಚುವುದೋ ಎಂದು ರಾಮಪ್ಪ ಎಂಬ ರೈತ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಮುಖ ವಾಣಿಜ್ಯ ಬೆಳೆಗಳಾದ ಮುಸುಕಿನ ಜೋಳ, ಬಿಟಿ ಹತ್ತಿ, ಬತ್ತ, ಶೇಂಗಾ, ಸೋಯಾಬಿನ್, ಕಬ್ಬು ಬಿತ್ತನೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಮೋಡ ಕವಿದ ವಾತಾವರಣ ಕೊಂಚ ಮಟ್ಟಿಗೆ ದೂರು ಸರಿದು ಸೂರ್ಯದೇವ ತನ್ನ ಪ್ರಖರತೆ ಬೀರಿದರೆ ರೈತನ ಆಸೆ ನೂರಕ್ಕೆ ನೂರರಷ್ಟು ಫಲಿಸಿ ರೈತನ ಆರ್ಥಿಕ ಸ್ಥಿತಿ ಸುಭದ್ರವಾಗುವುದರಲ್ಲಿ ಎರಡು ಮಾತಿಲ್ಲ.
ಎಷ್ಟು ಹೆಕ್ಟೇರ್ ಪ್ರದೇಶ: ಈವರೆಗೆ ಜಿಲ್ಲೆಯಲ್ಲಿ 3.10 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, 3.23 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ 1.35 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ, 90 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಹತ್ತಿ, 42 ಸಾವಿರ ಹೆಕ್ಟರ್ ಬತ್ತ, 16 ಸಾವಿರ ಹೆಕ್ಟೇರ್ ಶೇಂಗಾ, 7 ಸಾವಿರ ಹೆಕ್ಟರ್ ಸೋಯಾಬಿನ್, ಆರೂವರೆ ಸಾವಿರ ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ.  ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಉತ್ತಮ ಬಿತ್ತನೆ ಕಾರ್ಯ ನಡೆದಿದೆ. ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಸರ್ಕಾರ ಹಾಗೂ ಕೃಷಿ ಇಲಾಖೆಯೂ ಸಾಕಷ್ಟು ಮುತುವರ್ಜಿ ವಹಿಸಿದೆ. ವರುಣ ದೇವ ಕೊಂಚ ಮಟ್ಟಿಗೆ ವಿಶ್ರಾಂತಿಗೆ ತೆರಳಿ ಸೂರ್ಯದೇವ ಆಗಸದಲ್ಲಿ ಮತ್ತೆ ಪ್ರಖರತೆಯಿಂದ ಆಗಮಿಸಿದರೆ ಸಾಕು. ರೈತನ ಮೊಗದಲ್ಲಿ ಬಿತ್ತ್ತನೆ ಪೂರ್ವದಲ್ಲಿ ಕಂಡು ಬಂದ ಸಂತಸ ಮತ್ತೆ ತೇಲಿ ಬರುವುದರಲ್ಲಿ ಸಂದೇಹವಿಲ್ಲ.

ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.