ಹಾವೇರಿ

ಬಿಸಿಯೂಟ ಸಿಬ್ಬಂದಿಗೆ ಕಿರಿಕಿರಿ: ಧರಣಿ

Published On :

ಹಾನಗಲ್ಲ: ಬಿಸಿಯೂಟ ಸಿಬ್ಬಂದಿಗಳನ್ನು ವಿನಾಕಾರಣ ಕೆಲಸದಿಂದ ತೆಗೆದು ಹಾಕುವುದು ಹಾಗೂ ಅವರ ಪ್ರಕರಣ ಇತ್ಯರ್ಥಪಡಿಸುವಲ್ಲಿ ತಾಪಂ ಆಡಳಿತದ ವಿಳಂಬ ಧೋರಣೆ ಖಂಡಿಸಿ ಜಯ ಕರ್ನಾಟಕ ಸಂಘಟನೆ ತಾಪಂ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.
ತಾಲೂಕಿನಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಕ್ಷರ ದಾಸೋಹ ಕಾರ್ಯಕರ್ತರು ಹಲವಾರು ವರ್ಷಗಳಿಂದ ಕಡಿಮೆ ವೇತನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ತಾಲೂಕಿನ ಹಿರೇಬಾಸೂರು, ಆರೇಗೊಪ್ಪ, ಕುಂಟನಹೊಸಳ್ಳಿ ಗ್ರಾಮಗಳಲ್ಲಿ ಕಾನೂನಿಗೆ ವಿರುದ್ಧವಾಗಿ ಅಕ್ಷರ ದಾಸೋಹ ಕಾರ್ಯಕರ್ತರನ್ನು ವೈಯಕ್ತಿಕ, ರಾಜಕೀಯ ಕಾರಣಗಳಿಂದಾಗಿ ಸ್ಥಳೀಯ ಶಾಲಾಭಿವೃದ್ಧಿ ಸಮಿತಿಯವರು ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಕುರಿತು ತಾಪಂ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಕಳೆದ 6-7 ತಿಂಗಳುಗಳಿಂದ ತಾಪಂ ಆಡಳಿತ ರಾಜಕೀಯ ಒತ್ತಡದಿಂದಾಗಿ ಈ ಪ್ರಕರಣಗಳ ವಿಚಾರಣೆ ಮುಂದೂಡುತ್ತಿದೆ. ಇದರಿಂದ ಈಗಾಗಲೇ ಅತಂತ್ರ ಪರಿಸ್ಥಿತಿಯಲ್ಲಿರುವ ಬಿಸಿಯೂಟ ಕಾರ್ಯಕರ್ತರು ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ. ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಬೇಕಾದ ಆಡಳಿತವು ಮಹಿಳೆಯರ ಬದುಕನ್ನು ಅರ್ಥ ಮಾಡಿಕೊಳ್ಳದೇ ಅನವಶ್ಯಕವಾಗಿ ವಿಳಂಬ ಮಾಡುತ್ತಿದೆ ಎಂದು ಸಂಘಟನೆ ಆರೋಪಿಸಿದೆ.
ಸುಳ್ಳು ಮೊಕದ್ದಮೆ: ಈ ಕುರಿತು ಮನವಿ ಅರ್ಪಿಸಿರುವ ಸಂಘಟನೆ, ಹಿರೇಬಾಸೂರಿನ ಅಕ್ಷರ ದಾಸೋಹ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುವ ಪ್ರಕರಣದಲ್ಲಿ ನಿಯಮಬಾಹಿರ ಕ್ರಮ ಅನುಸರಿಸುತ್ತಿರುವ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಹಾಗೂ ಗ್ರಾಪಂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದೇ ರೀತಿ ನಿಯಮಬಾಹಿರ ಕ್ರಮ ಅನುಸರಿಸುತ್ತಿರುವ ಹಿರೇಕಣಗಿ ಗ್ರಾಪಂ ವ್ಯಾಪ್ತಿಯ ಆರೇಗೊಪ್ಪ ಗ್ರಾಮದ ಪ್ರಾಥಮಿಕ ಶಾಲೆ, ಕುಂಟನಹೊಸಳ್ಳಿ ಗ್ರಾಮದ ಪ್ರಾಥಮಿಕ ಶಾಲೆ ಹಾಗೂ ಇನ್ನೂ ಕೆಲ ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕರ್ತರನ್ನು ವಿನಾಕಾರಣ ಮಾನಸಿಕವಾಗಿ ಹಿಂಸೆ ನೀಡಿ ಅವರನ್ನು ಕೆಲಸದಿಂದ ತೆಗೆದುಹಾಕಲು ಪ್ರಯತ್ನ ಮಾಡುತ್ತಿದ್ದು, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಬಿಸಿಯೂಟ ಮಹಿಳೆಯರ ಮೇಲಿನ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಕ್ಷಣೆಗೆ ಮುಂದಾಗಿ: ಕೂಡಲೇ ಬಡ ಮಹಿಳೆಯರಾದ ಬಿಸಿಯೂಟ ಕಾರ್ಯಕರ್ತರ ರಕ್ಷಣೆಗೆ ತಾಪಂ ಮುಂದಾಗಬೇಕು. ಯಾವುದೇ ಪ್ರಭಾವಿ ವ್ಯಕ್ತಿಗಳ ಒತ್ತಡದಿಂದಾಗಿ ನಿಯಮಬಾಹಿರ ಕ್ರಮಕ್ಕೆ ಮುಂದಾಗಬಾರದು. ಅಕ್ಷರ ದಾಸೋಹ ಕೈಪಿಡಿಯಲ್ಲಿಯೂ ಕೆಲಸದಿಂದ ತೆಗೆದುಹಾಕುವ ಯಾವ ನಿಯಮವೂ ಇರುವುದಿಲ್ಲ. ಹೀಗಾಗಿ ಸ್ಥಳೀಯ ಗ್ರಾಪಂ ಅಧಿಕಾರಿಗಳು ಕೆಲಸದಿಂದ ತೆಗೆದುಹಾಕಲು ಠರಾವು ಪಾಸು ಮಾಡಬಾರದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ರಾಮು ಯಳ್ಳೂರ, ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಬಂಕಾಪುರಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಕೊಂಚಿಗೇರಿ, ಪದಾಧಿಕಾರಿಗಳಾದ ವೆಂಕಟೇಶ ಬೆಟಗೇರಿ, ಶಿವು ಹನುಮಣ್ಣನವರ, ಬಸವರಾಜ ಓಲೇಕಾರ, ಜಗದೀಶ ದೊಡ್ಡಮನಿ, ಕಲ್ಲಪ್ಪ ಕೆಂಚಣ್ಣನವರ, ಸಾವಿತ್ರಿ ಮಠದ, ಹೇಮಾ ಕಲ್ಲಾಪುರ, ಚನ್ನಬಸವ್ವ ಮೆಳ್ಳಳ್ಳಿ, ಕಮಲಾ ಚಲವಾದಿ, ಅಂಬಿಕಾ ಉಳವಿ, ಜರೀನಾ ಮೋವುಜ್ಜನ, ಅಂಬಕ್ಕಾ, ಮೂಕವ್ವ ಹರಿಜನ, ಸುಶೀಲವ್ವ ವಿಜಾಪುರ, ಸುಮಾ ಕುಲಕರ್ಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.