ಅಪಘಾತ ಆಹ್ವಾನಿಸುತ್ತಿರುವ ಕೆರೆಗಳು
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 25
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ತಾಲೂಕಿನ ಬಹುತೇಕ ರಸ್ತೆ ಪಕ್ಕದಲ್ಲಿರುವ ಕೆರೆಗಳಿಗೆ ತಡೆಗೋಡೆ ನಿರ್ಮಿಸಲು ಇಂದಿಗೂ ಸಾಧ್ಯವಾಗಿಲ್ಲ. ಮೃತ್ಯುವಿಗೆ ಆಹ್ವಾನಿಸುತ್ತಿರುವ ಇಂತಹ ಕೆರೆಗಳು ರಾಜ್ಯದಲ್ಲಿ ಸಾಕಷ್ಟು ಕಹಿ ಘಟನೆಗಳು ನಡೆದರೂ ಸರ್ಕಾರ ಮಾತ್ರ ಎಚ್ಚೆತ್ತುಕೊಳ್ಳದೇ ಇನ್ನಷ್ಟು ಜೀವಗಳನ್ನು ಬಲಿ ತೆಗೆದುಕೊಳ್ಳಲು ನಿರ್ಧರಿಸಿದಂತಿದ್ದು, ತಾಲೂಕಿನಲ್ಲಿಯೂ ಕೂಡ ಇಂತಹ ಕೆರೆಗಳಿಗೇನು ಕಡಿಮೆಯಿಲ್ಲ. ಈ ಕುರಿತು ವರದಿ ಇಲ್ಲಿದೆ.
ಚಿತ್ರದುರ್ಗ ನಗರ, ದಾವಣಗೆರೆ ಜಿಲ್ಲೆಯ ದೇವರ ಬೆಳೆಕೆರೆ ಸೇರಿದಂತೆ ನಿನ್ನೆಯಷ್ಟೇ ಹಾಸನ ಜಿಲ್ಲೆಯ ಬೇಲೂರು ಬಳಿ ನಡೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಗಳು ರಸ್ತೆ ಪಕ್ಕದಲ್ಲಿರುವ ಕೆರೆಗಳಿಗೆ ಉರುಳಿ ನೂರಾರು ಅಮಾಯಕರು ತಮ್ಮ ಜೀವಗಳನ್ನು ಕಳೆದುಕೊಂಡರು. ಇಂತಹ ಹೃದಯ ವಿದ್ರಾವಕ ಘಟನೆಗಳನ್ನು ಒಮ್ಮೆ ನೆನಪಿಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಎಚ್ಚೆತ್ತುಕೊಳ್ಳಲು ಸಿದ್ಧರಿಲ್ಲ.
ಪರಿಹಾರವೇ ಜನಪ್ರತಿನಿಧಿಗೆ ಬಂಡವಾಳ: ಬದಲಾಗಿ ವಿಧಿಲೀಲೆ, ಜವರಾಯನ ಕೋಪ ತಮ್ಮದೇ ಆದ ಪದಗಳಲ್ಲಿ ಘಟನೆಯನ್ನು ವಿಶ್ಲೇಷಿಸಿ ಮೃತ ಕುಟುಂಬಕ್ಕೆ ಕೆಲ ಸಾಂತ್ವನದ ಮಾತುಗಳನ್ನು ಹೇಳಿ ಪರಿಹಾರ ನೀಡಿದ್ದೇ ಅವರ ಸಾಧನೆ ಎಂಬಂತೆ ಮಾಧ್ಯಮಗಳೆದುರು ಬಂದು ನಿಲ್ಲುತ್ತಾರೆ.
ವಿವಿಧ ಗ್ರಾಮಗಳಲ್ಲಿನ ಅಪಾಯಕಾರಿ ಕೆರೆ: ಬ್ಯಾಡಗಿ ತಾಲೂಕಿನಲ್ಲಿಯೂ ಕೂಡ ಅವುಗಳನ್ನು ಮೀರಿಸುವಂತಹ ಅಪಾಯಕಾರಿ ಕೆರೆಗಳು ರಸ್ತೆ ಪಕ್ಕದಲ್ಲಿಯೇ ಉದ್ಭವಿಸಿವೆ. ಮಲ್ಲೂರು, ಚಿಕ್ಕಬಾಸೂರು, ಸೂಡಂಬಿ, ಅಗಸನಹಳ್ಳಿ, ಘಾಳಪೂಜಿ, ಮೋಟೆಬೆನ್ನೂರು (ಇವು ಉದಾಹರಣೆಗಷ್ಟೇ) ಸೇರಿದಂತೆ ಗ್ರಾಮೀಣ ಪ್ರದೇಶದ ಬಹುತೇಕ ಕಡೆಗಳಲ್ಲಿ ರಸ್ತೆ ಪಕ್ಕದಲ್ಲಿರುವ ಕೆರೆಗಳು ಅಪಾಯಕಾರಿಯಾಗಿವೆ.
ಕೆರೆಗೆ ಉರುಳಿ ಬಿದ್ದ ಬಸ್ಗಳು: ಕೆಲ ವರ್ಷಗಳ ಹಿಂದೆ ಹಿರೇಹಳ್ಳಿ ಹಾಗೂ ಚಿಕ್ಕಬಾಸೂರು ಮಧ್ಯದಲ್ಲಿರುವ ಕೆರೆ ಏರಿಯ ಮೇಲೆ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸೊಂದು ಆಯತಪ್ಪಿ ಕೆರೆಗೆ ಉರುಳಿ ಬಿದ್ದಿತ್ತು, ಅದೃಷ್ಟವಶಾತ್ ಕೆರೆಯಲ್ಲಿದ್ದ ಬೇವಿನ ಮರವೊಂದು ಬಸ್ನ್ನು ತಡೆದು ನಿಲ್ಲಿಸಿದ ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ.
ಟಪಾಲು ಬಸ್ ಕೆರೆಗೆ: ಸೂಡಂಬಿ-ಮಡ್ಲೂರ ಕ್ರಾಸ್ ಮಧ್ಯೆದಲ್ಲಿರುವ ಕೆರೆಯೊಂದರಲ್ಲಿ ಟಪಾಲುಗಳನ್ನು ಹೊತ್ತೊಯ್ಯುತ್ತಿದ್ದ ಕೆಎಸ್ಆರ್ಟಿಸಿ ಬಸ್ಸೊಂದು ಸುಮಾರು 40 ಅಡಿ ಆಳದ ಕೆರೆಗೆ ಉರುಳಿ ಬಿದ್ದಿತ್ತು. ಅಲ್ಲಿಯೂ ಸಹ ಯಾವುದೇ ಸಾವು-ನೋವು ಸಂಭವಿಸದಿದ್ದರೂ ಟಪಾಲುಗಳು ಮಾತ್ರ ಸಂಬಂಧಪಟ್ಟವರ ಕೈಗೆ ತಲುಪಲಿಲ್ಲ.
ಅಪಾಯ ತಪ್ಪಿದ್ದಲ್ಲ: ತಾಲೂಕಿನ ಮಲ್ಲೂರ ಗ್ರಾಮದ ಊರ ಪಕ್ಕದಲ್ಲಿಯೇ ರಸ್ತೆಗೆ ಹೊಂದಿಕೊಂಡಿರುವ ಕೆರೆಯೊಂದು ರಸ್ತೆಯ ಅರ್ಧ ಭಾಗವನ್ನೇ ನುಂಗಿದೆ. ಸುಮಾರು 28 ಅಡಿ ಆಳವಿರುವ ಈ ಕೆರೆಯಲ್ಲಿ ಸದಾ ನೀರು ತುಂಬಿರುತ್ತದೆ ಚಾಲಕರು ಸ್ವಲ್ಪ ಮೈಮರೆತು ವಾಹನ ನಡೆಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಕುರಿತಂತೆ ಹಲವಾರು ಬಾರಿ ತಾಪಂ ಹಾಗೂ ಜಿಪಂ ಸಾಮಾನ್ಯ ಸಭೆಗಳಲ್ಲಿ ಚರ್ಚೆಗಳಾಗಿವೆಯೇ ಹೊರತು ಯಾವುದೇ ಪರಿಹಾರ ಮಾತ್ರ ದೊರಕಿಲ್ಲ.
ಕೆರೆ ಸ್ವಚ್ಛಗೊಳಿಸಿ: ರಕ್ಷಣಾ ಗೋಡೆ ಇಲ್ಲದ್ದಾಯಿತು, ಇನ್ನೊಂದು ಅಪಾಯಕಾರಿ ಅಂಶವೊಂದಿದೆ. ಕೆರೆಗಳಲ್ಲಿ ಬೆಳೆದು ನಿಂತಿರುವ ಬಳ್ಳಿಗಳು, ಕಸ-ಕಡ್ಡಿಗಳು ತುಂಬಿಕೊಂಡಿದ್ದು, ಬೆಳೆಯಿರುವ ಹೊಲದಂತೆ ಕಾಣುತ್ತಿವೆ. ಹೊಸದಾಗಿ ಚಲಿಸುವ ವಾಹನ ಚಾಲಕರು ಮಾತ್ರ ರಸ್ತೆಯಿಂದ ಸ್ವಲ್ಪ ಕೆಳೆಗಿಳಿಸಿದರೂ ಅಪಾಯ ತಪ್ಪಿದ್ದಲ್ಲ. ಈ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಳಜಿ ವಹಿಸಿ ತಡೆಗೋಡೆ ನಿರ್ಮಿಸಲು, ಕೆರೆ ಸ್ವಚ್ಛತೆ ಹಾಗೂ ಹೂಳು ತೆಗೆಯುವತ್ತ ಗಮನಹರಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

