ರಸ್ತೆ ಮಧ್ಯದ ಕಂದಕ ಮುಚ್ಚಲು ಗ್ರಾಮಸ್ಥರ ಆಗ್ರಹ
ಹಾನಗಲ್ಲ: ಹಾನಗಲ್ಲ ತಾಲೂಕಿನ ಬೈಚವಳ್ಳಿ-ಸಾತೇನಹಳ್ಳಿ ಗ್ರಾಮಗಳ ಸಂಪರ್ಕ ರಸ್ತೆಯ ಮಧ್ಯ ಕಂದಕ ತೆಗೆದು ಕೃಷಿಕರು ಹಾಗೂ ರೈತರಿಗೆ ಅನಾನುಕೂಲವಾಗಿದ್ದು, ಶೀಘ್ರ ಈ ಕಂದಕವನ್ನು ಮುಚ್ಚಲು ಕ್ರಮ ಜರುಗಿಸಬೇಕೆಂದು ತಾಲೂಕು ತಹಸೀಲ್ದಾರ್‌ಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಬೈಚವಳ್ಳಿ-ಸಾತೇನಹಳ್ಳಿ ಗ್ರಾಮಗಳ ರೈತರು, ಸಾರ್ವಜನಿಕರು ತಾಲೂಕು ತಹಸೀಲ್ದಾರರ ಮೂಲಕ ಸವಣೂರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಈ ಎರಡೂ ಗ್ರಾಮಗಳ ನಡುವೆ ರಸ್ತೆಯ ಮಧ್ಯದಲ್ಲಿ ಅಡ್ಡಲಾಗಿ ಕಂದಕ ತೆಗೆಯಲಾಗಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಗಿದೆ. ಅಲ್ಲದೇ ರಸ್ತೆ ಪಕ್ಕದಲ್ಲಿ ಆಳವಾದ ಕಂದಕ ತೆಗೆಯಲಾಗಿದೆ. ಈ ಕಾರಣದಿಂದ ರಾಮತೀರ್ಥ, ಹೊಸಕೊಪ್ಪ ಗ್ರಾಮದ ಜಮೀನುಗಳಿಂದ ಕೆಟ್ಟ ನೀರು ಹೋಗುವ ಕಾಲುವೆಯೂ ದುರಸ್ಥಿಯಾಗಿಲ್ಲ. ಹಗಲು ಹೊತ್ತಿನಲ್ಲಿಯೇ ಓಡಾಡಲು ಸಾಧ್ಯವಾಗದ ರಸ್ತೆ ರಾತ್ರಿ ಸಮಯದಲ್ಲಿ ಆಕಸ್ಮಿಕವಾಗಿ ಓಡಾಡುವ ರೈತರ ಚಕ್ಕಡಿ, ಇತರೆ ವಾಹನಗಳಿಗೆ ಭಾರಿ ಅಪಘಾತ ಕಾದು ಕುಳಿತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಮಧ್ಯದ ಕಂದಕ ಮುಚ್ಚಿಸಲು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಇದು ಅನಧಿಕೃತವಾಗಿ ತೆಗೆಸಿದ ಕಂದಕವಾಗಿದ್ದು, ಶೀಘ್ರ ಮೇಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರೈತರು, ಜನರಿಗೆ ಅನೂಕೂಲಕ್ಕೆ ಮಾಡಿಕೊಡಬೇಕೆಂದರು.
ಈ ರಸ್ತೆಯ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಕೆರೆಗೆ ನಿರ್ಮಿಸಿದ ಹೆಚ್ಚಿನ ನೀರು ಹೋಗುವ ಕೋಡಿಯನ್ನು ಎತ್ತರಿಸಿರುವುದರಿಂದ ಒಂದೆಡೆ ರೈತರ ಜಮೀನುಗಳಿಗೆ ಕೆರೆಯ ನೀರು ನುಗ್ಗಿ ನಷ್ಟಕ್ಕೆ ಕಾರಣವಾಗಿದೆ. ಸದರಿಯೊಂದಿಗೆ ಈಗ ನಿರ್ಮಿಸಿದ್ದ ರಸ್ತೆ ಕೋಡಿಯನ್ನು ಮುಚ್ಚಿ ಅದರ ಮೇಲೆ ನಿರ್ಮಿಸಲಾಗಿದೆ ಎಂಬ ವಾದವೂ ನಡೆದಿದೆ. ಈಗ ನೀರು ಹೋಗಲು ಕೋಡಿಯೇ ಇಲ್ಲದ ಕಾರಣ ರೈತರ ಜಮೀನುಗಳು ಮುಳುಗಿ ಹೋಗುತ್ತಿವೆ. ಹೀಗಾಗಿ ಈ ಕೆರೆಯ ಕೋಡಿಯ ನೀರನ್ನು ಕಳಿಸಲು ಅನಿವಾರ್ಯವಾಗಿ ಇಂತಹ ಕಾಲುವೆ ತೋಡಬೇಕಾಯಿತು ಎಂಬುದು ಕೆಲವು ರೈತರ ಅಭಿಪ್ರಾಯವಾಗಿದೆ.
ಕೋಡಿ ನಿರ್ಮಿಸಿ ಅದರ ಮೇಲಿನಿಂದ ರಸ್ತೆ ಮಾಡಿದರೆ ಯಾವುದೇ ಆತಂಕವಿಲ್ಲ. ಒಟ್ಟಿನಲ್ಲಿ ಈ ಸಮಸ್ಯೆ ಪರಿಹರಿಸಲು ನೀರಾವರಿ ಇಲಾಖೆ, ಜಿಪಂ ಎಂಜಿನಿಯರಿಂಗ್ ಇಲಾಖೆ ಹಾಗೂ ಸಾರ್ವಜನಿಕರು ಸೇರಿ ಆಲೋಚಿಸಬೇಕಾಗಿದೆ. ಏನೇ ಆದರೂ ನಿರ್ಮಾಣವಾದ ಈ ರಸ್ತೆಯಲ್ಲಿ ಕಂದಕ ತೆರೆದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿರುವುದಂತೂ ಸತ್ಯ. ಶೀಘ್ರ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂಬುದು ಜನತೆ ಒತ್ತಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

