ಮಳೆಗೆ ಮನೆ ಕುಸಿತ: ಜನಜೀವನ ಅಸ್ತವ್ಯಸ್ತ
ಬಿ.ಕೆ. ಮಹೇಂದ್ರ
ಕನ್ನಡಪ್ರಭ ವಾರ್ತೆ, ಹಾವೇರಿ, ಜು. 27
ಜಿಟಿಜಿಟಿ ಮಳೆ ಬಿಟ್ಟು ಬಿಡದೆ ಸುರಿಯುತ್ತಿರುವುದರಿಂದ ಜಿಲ್ಲಾದ್ಯಂತ ಸಾವಿರಾರು ಮನೆಗಳು ಭಾಗಶಃ ಕುಸಿದಿದ್ದರೆ ಕೆಲ ಮನೆಗಳು ಪೂರ್ಣ ಪ್ರಮಾಣದಲ್ಲಿ ನೆಲಕ್ಕುರಿಳಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ.
ತಿಂಗಳಿಗೂ ಹೆಚ್ಚು ಕಾಲ ಜಿಲ್ಲೆಯಲ್ಲಿ ಸೂರ್ಯದೇವನ ದರ್ಶವಾಗದೆ ಇರುವುದರಿಂದ ಮಣ್ಣಿನಿಂದ ಕಟ್ಟಿರುವ ಮನೆ ಗೋಡೆಗಳು ನೀರು ಹಿಡಿದುಕೊಂಡು ಕುಸಿದು ಬಿದ್ದಿವೆ. ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವವರು ವಾಸವಾಗಿರುವ ಮನೆಗಳೆ ಮಳೆಯಿಂದ ಹಾನಿಗೊಳಗಾಗಿದ್ದು, ಆಯಾ ಗಲ್ಲಿ ಹಾಗೂ ಓಣಿಯ ಇಕ್ಕೆಲ್ಲಗಳಲ್ಲೆ ಊಟ ತಯಾರಿಸಿಕೊಂಡು ಬದುಕು ಸಾಗಿಸಬೇಕಾದ ಅನಿವಾರ್ಯತೆ ಕಂಡು ಬರತೊಡಗಿದೆ.
ದೇವಸ್ಥಾನಗಳ ಮೊರೆ: ಸಣ್ಣ-ಪುಟ್ಟ ಮನೆಗಳಲ್ಲಿ ವಾಸವಾಗಿರುವ ಅನೇಕರು, ಭಾಗಶಃ ಮನೆ ಉರುಳಿ ಬಿದಿದ್ದರಿಂದ ರಾತ್ರಿ ವೇಳೆಯಲ್ಲಿ ವಿಶ್ರಾಂತಿ ಪಡೆಯಲು ಆಯಾ ಪ್ರದೇಶಗಳಲ್ಲಿರುವ ದೇವಸ್ಥಾನ ಹಾಗೂ ಮಠಗಳಲ್ಲಿ ಆಶ್ರಯ ಪಡೆಯುವಂತಹ ಸನ್ನಿವೇಶ ನಿರ್ಮಾಣಗೊಂಡಿದ್ದು, ಬಹುತೇಕ ಕಡೆಗಳಲ್ಲಿ ಕಂಡು ಬರುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮನೆಗಳು ಭಾಗಶಃ ಉರುಳಿವೆ. ಅದೃಷ್ಟವಶಾತ್ ಯಾವುದೇ ಪ್ರದೇಶದಲ್ಲಿ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಕೃಷಿ ಕಾರ್ಮಿಕರು ನಿರ್ಮಿಸಿಕೊಂಡಿರುವ ದನ, ಕರುಗಳ ಕೊಟ್ಟಿಗೆಗಳು ಮಳೆಗೆ ನಲುಗಿವೆ. ಇದರಿಂದಾಗಿ ರೈತರು ಜಾನುವಾರುಗಳನ್ನು ಸಂಬಂಧಿಕರು ಹಾಗೂ ನೆರೆಹೊರೆಯವರ ಅಂಗಳದಲ್ಲಿ ಕಟ್ಟಿ ಹಾಕಿ ಕಾಲದೂಡುವಂತಾಗಿದೆ.
40ಕ್ಕೂ ಹೆಚ್ಚು: ಹಾವೇರಿ ತಾಲೂಕಿನಲ್ಲಿ 40 ಹೆಚ್ಚು ಮನೆಗಳು ಭಾಗಶಃ ಉರುಳಿರುವುದನ್ನು ತಹಸೀಲ್ದಾರ್ ಕಚೇರಿ ಮೂಲಗಳು ಖಚಿತಪಡಿಸಿವೆ. ಆರ್ಥಿಕ ಅಡಚಣೆಯಿಂದಾಗಿ ಗಟ್ಟಿ ಮುಟ್ಟಾದ ಮನೆಗಳನ್ನು ಕಟ್ಟಿಕೊಂಡು ವಾಸವಾಗಲು ಸಾಧ್ಯವಾಗುತ್ತಿಲ್ಲ ಎಂದು ಹಾವೇರಿಯ ರಾಮಪ್ಪ ಬಸಾಪುರ ಕನ್ನಡಪ್ರಭದೊಂದಿಗೆ ಮಾತನಾಡಿ ತಿಳಿಸಿದ್ದಾರೆ.
ವಿದ್ಯುತ್ ಸಂರ್ಪಕ ಕಡಿತ: ಭಾಗಶಃ ಉರುಳಿ ಬಿದ್ದಿರುವ ಮನೆಗಳ ವಿದ್ಯುತ್ ಸಂಪರ್ಕವನ್ನು ಮುಂಜಾಗ್ರತಾ ಕ್ರಮವಾಗಿ ಕಡಿತಗೊಳಿಸಲಾಗಿದೆ. ಇದು ಜನರಿಗೆ ಮತ್ತಷ್ಟು ಕಿರಿಕಿರಿಯನ್ನುಂಟು ಮಾಡಿದೆ. ಇಂತಹ ಪ್ರದೇಶಗಳಲ್ಲಿ ವಾಸವಾಗಿರುವ ಜನರು ರಾತ್ರಿ ವೇಳೆಯಲ್ಲಿ ಮನೆಗಳಿಂದ ಹೊರ ಬಾರದಂತಹ ಪರಿಸ್ಥಿತಿಗೆ ಸಿಲುಕಿ ಹಾಕಿಕೊಂಡಿದ್ದಾರೆ.
ಪ್ರವಾಹ ಭೀತಿ: ಜಿಲ್ಲೆಯಲ್ಲಿ ನಾಲ್ಕು ಪ್ರಮುಖ ನದಿಗಳು ಹರಿಯುತ್ತಿವೆ. ಮಳೆಯಿಂದಾಗಿ ಬಹುತೇಕ ನದಿಗಳು ಅಪಾಯದ ಮಟ್ಟ ತಲುಪುವಲ್ಲಿ ಕೆಲವೇ ಅಡಿಗಳು ಬಾಕಿ ಉಳಿದಿವೆ. ಯಾವುದೇ ಸಂದರ್ಭದಲ್ಲಿಯೂ ಪ್ರವಾಹ ಎದುರಾಗಬಹುದೆಂಬ ಆಂತಕ ಜನತೆಯಲ್ಲಿ ಆವರಿಸಿದೆ.
ರಾಣಿಬೆನ್ನೂರು ಸೇರಿದಂತೆ ಕೆಲವಡೆ ನದಿ ತೀರದಲ್ಲಿ ವಾಸವಾಗಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಹಸೀಲ್ದಾರರು ಸೂಚಿಸುತ್ತಿದ್ದಾರಾದರೂ, ಬೇರೆಡೆಗೆ ಹೋಗುವುದಾದರೂ ಎಲ್ಲಿಗೆ ಎಂಬುದು ಬಡ ಜನರ ಸಮಸ್ಯೆಯಾಗಿದೆ.
ಶಾಸಕರು ಭೇಟಿ ನೀಡಿಲ್ಲ: ಜಿಲ್ಲಾದ್ಯಂತ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಬೆಳೆಯೂ ಸಾಕಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಹಾವೇರಿ ತಾಲೂಕಿನಲ್ಲಿ ಇಂತಹ ಪರಿಸ್ಥಿತಿ ಕಂಡು ಬರುತ್ತಿದ್ದರೂ ಶಾಸಕ ರುದ್ರಪ್ಪ ಲಮಾಣಿ ಹಾಗೂ ಬಸವರಾಜ ಶಿವಣ್ಣವರ ಒಮ್ಮೆಯೂ ಆಯಾ ಗ್ರಾಮಗಳಿಗೆ ಭೇಟಿ ನೀಡದಿರುವುದು ಶ್ರೀಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದ್ದು ಸುಳ್ಳಲ್ಲ.
ಮುನ್ಸೂಚನೆಗೆ ಕ್ರಮ: ಹಾವೇರಿ ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹರಿಯುವ ತುಂಗಭದ್ರಾ ಅಪಾಯದ ಮಟ್ಟಕ್ಕೆ ತಲುಪಲು ಕೆಲವೇ ಅಡಿ ಬಾಕಿ ಉಳಿದಿರುವುದರಿಂದ ತಹಸೀಲ್ದಾರ್ ಶಿವಲಿಂಗು, ಕಂದಾಯ ನಿರೀಕ್ಷಕರೊಂದಿಗೆ ಶನಿವಾರ ತಾಲೂಕಾದ್ಯಂತ ಸಂಚರಿಸಿ ನದಿ ತೀರದಲ್ಲಿ ವಾಸವಾಗಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ವಿನಂತಿಸಿಕೊಂಡಿದ್ದಾರೆ. ಅಲ್ಲದೆ, ತಾಲೂಕಿನಲ್ಲಿ ಅಲ್ಪಸ್ವಲ್ಪ ಬಿದ್ದಿರುವ ಮನೆಗಳ ಸ್ಥಳಕ್ಕೂ ಅಧಿಕಾರಿಗಳೊಂದಿಗೆ ತೆರಳಿ ಆಯಾ ಮನೆಗಳ ಮಾಲೀಕರಿಗೆ ಸಾಂತ್ವನ ಹೇಳಿದ್ದಾರಲ್ಲದೇ ಶೀಘ್ರ ಪರಿಹಾರ ವಿತರಿಸಲು ಸೂಕ್ತ ಕ್ರಮಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ಜನರು ತಿಳಿಸಿದ್ದಾರೆ.
ನಿಗಾ ವಹಿಸಬೇಕಿದೆ: ಮಳೆಯಿಂದಾಗಿ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಜನರಿಗೆ ಶೀಘ್ರದಲ್ಲೇ ಮನೆಗಳನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಜಿಲ್ಲಾಡಳಿತ ಇನ್ನಷ್ಟು ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂಬ ಮಾತುಗಳು ಜಿಲ್ಲಾದ್ಯಂತ ಕೇಳಿ ಬರುತ್ತಿವೆ. ಅತಿವೃಷ್ಟಿಯಿಂದ ಬೆಳೆ ಮಾತ್ರವಲ್ಲದೇ ಆಸ್ತಿಪಾಸ್ತಿಯೂ ಎಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿದೆ ಎಂಬುದರ ಮಾಹಿತಿ ಕಲೆ ಹಾಕಲು ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಬೇಕಾಗಿರುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅತಿವೃಷ್ಟಿಯಿಂದ ಜನತೆಯನ್ನು ಪಾರು ಮಾಡಲು ಜಿಲ್ಲಾಡಳಿತ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಹಾವೇರಿ ತಾಲೂಕಿನಲ್ಲಿ 40ಕ್ಕೂ ಹೆಚ್ಚು ಮನೆಗಳು ಮಳೆಯಿಂದ ಭಾಗಶಃ ಕುಸಿದು ಬಿದ್ದಿರುವ ಬಗ್ಗೆ ವರದಿ ತಮ್ಮ ಕೈಗೆ ಸೇರಿದೆ. ಈ ಮನೆಗಳ ಮಾಲೀಕರಿಗೆ ತಕ್ಷಣ ಪರಿಹಾರ ಕಲ್ಪಿಸಿಕೊಡಲು ತಾಲೂಕು ಆಡಳಿತ ಕ್ರಮಕೈಗೊಳ್ಳಲಿದೆ. ಭದ್ರಾ ಡ್ಯಾಂನಿಂದ ರಾತ್ರಿ ವೇಳೆ ತುಂಗಭದ್ರಾ ನದಿಗೆ ನೀರು ಬಿಡಲಾಗುತ್ತಿರುವುದರಿಂದ ನದಿ ತೀರದಲ್ಲಿ ವಾಸವಾಗಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡಲಾಗಿದೆ. ಅತಿವೃಷ್ಟಿಯಿಂದ ಹಾನಿ ಅನುಭವಿಸಿದ ಜನರಿಗೆ ಶೀಘ್ರ ಪರಿಹಾರ ಕಲ್ಪಿಸಿಕೊಡಲು ಜಿಲ್ಲಾಡಳಿತ ಸೂಚನೆ ನೀಡಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು.
- ಶಿವಲಿಂಗು
ತಹಸೀಲ್ದಾರ್, ಹಾವೇರಿ
ಅತಿವೃಷ್ಟಿಯಿಂದ ಜನರನ್ನು ಪಾರು ಮಾಡಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ನದಿ ತೀರದಲ್ಲಿ ವಾಸವಾಗಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಈಗಾಗಲೇ ಸೂಚಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಮನೆಗಳು ಬಿದ್ದು ಹಾನಿಯಾಗಿರುವುದರ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ, ಮಳೆಯಿಂದ ಆಸ್ತಿಪಾಸ್ತಿಗೆ ಆಗಿರುವ ಹಾನಿಯ ಬಗ್ಗೆ ಮಾಹಿತಿ ಕಲೆ ಹಾಕಲು ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರಿಗೆ ಸೂಚಿಸಲಾಗಿದೆ.
- ಪಾಂಡುರಂಗ ನಾಯಕ,
ಜಿಲ್ಲಾಧಿಕಾರಿ, ಹಾವೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

