ದೂಷಿಸುವುದು ಬಿಟ್ಟು ಜವಾಬ್ದಾರಿ ಅರಿಯಿರಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 29
ಪರಿಸರ ನೈರ್ಮಲ್ಯದ ಕುರಿತು ಇನ್ನೊಬ್ಬರನ್ನು ದೂಷಿಸುವುದು ಸರಿಯಲ್ಲ. ಸಾರ್ವಜನಿಕರು ಸಾರ್ವತ್ರಿಕ ಜವಾಬ್ದಾರಿ ತೋರುವ ಮೂಲಕ ಜೀವಕ್ಕೆ ಆಪಾಯ ತರುವಂತಹ ರೋಗಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕಾಗಿದೆ ಎಂದು ಪುರಸಭೆ ಸದಸ್ಯ ಮಲ್ಲಿಕಾರ್ಜುನಗೌಡ ಭದ್ರಗೌಡ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಪಶುವೈದ್ಯ ಇಲಾಖೆ ಏರ್ಪಡಿಸಿದ್ದ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣ ಕುರಿತ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲದಕ್ಕೂ ಇನ್ನೊಬ್ಬರನ್ನು ದೂಷಿಸುವ ಜಾಯಮಾನ ಬೆಳೆಸಿಕೊಂಡಿರುವ ಜನರು ತಮ್ಮ ಜವಾಬ್ದಾರಿಗಳು ಏನು ಎಂಬುದರ ಬಗ್ಗೆ ಆತ್ಮಾವಲೋಕನೆ ಮಾಡಿಕೊಳ್ಳುವುದು ಸೂಕ್ತ. ಸರ್ಕಾರಿ ಸ್ವಾಮಿತ್ವದ ಕಚೇರಿಗಳಿಂದ ಆಗದಿರುವ ಕೆಲಸಗಳನ್ನು ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನಿಭಾಯಿಸುವುದರಲ್ಲಿ ಯಾವುದೇ ತಪ್ಪಿಲ್ಲ.
ಇಂಥ ವಿಷಯಗಳನ್ನು ಪುರಸಭೆಯು ಮುಕ್ತವಾಗಿ ಸ್ವಾಗತಿಸುತ್ತದೆ ಎಂದರು. ಪಟ್ಟಣದ ಸ್ವಚ್ಛತೆ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಮಾಧ್ಯಮಗಳು ಹಲವಾರು ಬಾರಿ ಪುರಸಭೆಯ ವೈಫಲ್ಯಗಳ ಮೇಲೆ ಬೆಳಕು ಚೆಲ್ಲಿದ್ದನ್ನು ಸ್ವಾಗತಿಸುತ್ತೇವೆ. ಆಡಳಿತ ವ್ಯವಸ್ಥೆಯ ತೊಡಕುಗಳಲ್ಲಿ ಸಾಕಷ್ಟು ನ್ಯೂನತೆಗಳಿರುವುದನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತೇವೆ. ಇದನ್ನೂ ಹೊರತುಪಡಿಸಿಯೂ ಸಾರ್ವಜನಿಕರಿಗೆ ತಮ್ಮದೇ ಆದ ಜವಾಬ್ದಾರಿಗಳಿದ್ದು, ಅವುಗಳನ್ನು ನಿಭಾಯಿಸುವಂತೆ ಮನವಿ ಮಾಡಿದರು.
ಮನೆ ಮನೆ ಸ್ವಚ್ಛವಾಗಿಟ್ಟುಕೊಳ್ಳಿ: ಪುರಸಭೆ ಮುಖ್ಯಾಧಿಕಾರಿ ಹಾಳ ಕಲ್ಲಾಪುರ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ನಗರ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಕೆಲಸಗಳನ್ನು ನಿರ್ವಹಿಸಲು ಪೌರ ಕಾರ್ಮಿಕರು ಸರ್ಕಾರದಿಂದ ನೇಮಕವಾಗಿಲ್ಲ. ಇತ್ತೀಚೆಗೆ ಸ್ವಚ್ಛತಾ ಕಾರ್ಯಗಳನ್ನು ಗುತ್ತಿಗೆದಾರರ ಮೂಲಕ ಕೈಗೊಳ್ಳುವಂತೆ ಸರ್ಕಾರದ ನಿರ್ದೇಶನವಿದ್ದು ಇದರಿಂದ ಪುರಸಭೆ ನೈರ್ಮಲ್ಯ ಕಾಪಾಡಲು ಹಿನ್ನಡೆಯಾಗಿದೆ. ಸಾರ್ವಜನಿಕರು ತಮ್ಮ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಪುರಸಭೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ. ನಾಗರಾಜ, ಪ್ರಶಾಂತ್ ಹಾಲನಗೌಡ್ರ, ಪುರಸಭೆ ಅಭಿಯಂತರ ಉಮೇಶ, ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

